ಕಲ್ಪ ಮೀಡಿಯಾ ಹೌಸ್ | ಸಾಗರ |
ಮಲೆನಾಡಿನ ಜನರ ಆರಾಧ್ಯ ದೈವ ಶ್ರೀ ಸಿಗಂದೂರೇಶ್ವರಿ ಅಮ್ಮನವರ ಕೃಪೆಯಿಂದ ನಾಡಿನೆಲ್ಲೆಡೆ ಸಕಾಲದಲ್ಲಿ ಮಳೆಯಾಗಿದ್ದು, ಕೆರೆ ಕಟ್ಟೆ ಕಾಲುವೆಗಳು ಭರ್ತಿಯಾಗಿವೆ ಮಾತ್ರವಲ್ಲ ಉತ್ತಮ ಬೆಳೆ ಬರುವ ನಿರೀಕ್ಷೆ ಇದೆ. ಇದರಿಂದಾಗಿ ಸಹಜವಾಗಿ ಸಂತಸ ಮೂಡಿದೆ ಎಂದು ಶಿಕ್ಷಣ ಸಚಿವ ಮಧು ಎಸ್. ಬಂಗಾರಪ್ಪ #Minister Madhu Bangarappa ಹೇಳಿದರು.
ಅವರು ಇಂದು ಸಾಗರ ತಾಲೂಕಿನ ಸಿಗಂದೂರಿನ ಶ್ರೀ ಚೌಡೇಶ್ವರಿ #Singanduru Choudeshwari ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಅಂಗವಾಗಿ ಏರ್ಪಡಿಸಲಾಗಿದ್ದ ಸಿಗಂದೂರು ದಸರಾ ಸಂಭ್ರಮ 25ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶ್ರೀಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ನೆರವು ಮತ್ತು ಸಹಕಾರವನ್ನು ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿವೆ. ಎಂದಿನಂತೆ ಮುಂದೆಯೂ ಶ್ರೀ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ನೆರವು ನೀಡಲಾಗುವುದು ಎಂದರು.
ಹಲವು ದಶಕಗಳಿಂದ ಇತ್ಯರ್ಥವಾಗದೇ ಉಳಿದಿರುವ ಶರಾವತಿ ಸಂತ್ರಸ್ತರು, ಅರಣ್ಯ ಭೂಮಿ ಸಾಗುವಳಿದಾರರ ಹಿತ ಕಾಯಲು ಸರ್ಕಾರ ಹಿಂದೆ ಹೇಳಿದ ಮಾತಿನಂತೆ ಬದ್ಧವಾಗಿದೆ. ಅರಣ್ಯಗಳಲ್ಲಿ ಹಲವು ದಶಕಗಳಿಂದ ವಾಸವಾಗಿರುವ ಹಾಗೂ ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ಈಗಾಗಲೇ ಸರ್ಕಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ. ಅದಕ್ಕೆ ಸಂಬಂಧಿಸಿದಂತೆ ಹಾಗೂ ದೇಶದ ಸರ್ವೋಚ್ಛ ನ್ಯಾಯಾಲಯದ ಸೂಚನೆಯಂತೆ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದ್ದು ಅದರ ವರದಿಯನ್ನು ಸಲ್ಲಿಸಲಾಗಿದೆ. ಸಂತ್ರಸ್ತರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ನಿರೀಕ್ಷೆಯಂತೆ ಉತ್ತಮ ಹಾಗೂ ನಮ್ಮ ಪರವಾದ ತೀರ್ಪು ಬರುವ ಆಶಯವಿದೆ ಎಂದವರು ನುಡಿದರು.
ಈ ಸಂಬಂಧ ಈಗಾಗಲೇ ಅರಣ್ಯ ಹಾಗೂ ಕಂದಾಯ ಸಚಿವರೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಲಾಗಿದೆ ಎಂದರು.
ದೇವಸ್ಥಾನಗಳಲ್ಲಿ ಮೊಳಗುವ ಗಂಟೆ ಸದ್ದಿಗಿಂತ ಶಾಲೆಗಳಲ್ಲಿ ಹೊಡೆಯುವ ಗಂಟೆ ಸದ್ದಿನಲ್ಲಿ ದೇಶದ ಮತ್ತು ಮಕ್ಕಳ ಭವಿಷ್ಯ ಅಡಗಿದೆ. ಶಿಕ್ಷಣ ಕ್ಷೇತ್ರದ ಉನ್ನತಿಗೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿರುವ ಹೊಸ ಯೋಜನೆಯಡಿ ಕೆಪಿಎಸ್ ಶಾಲೆಗಳನ್ನು 500ರಿಂದ 850ಕ್ಕೆ ಹೆಚ್ಚಿಸಿ ಇತ್ತೀಚೆಗೆ ನಡೆದ ಕ್ಯಾಬಿನೆಟ್ ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿ ಮನೆಗಳನ್ನು ತಲುಪಿದ್ದು, ಅವರ ನೆಮ್ಮದಿಯ ಬದುಕಿಗೆ ಸಹಕಾರಿಯಾಗಿವೆ ಎಂದರು.
ಇದೇ ಸಂದರ್ಭದಲ್ಲಿ ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ ಯೋಜನೆಯಡಿಯಲ್ಲಿ ದೇವಸ್ಥಾನದ ವತಿಯಿಂದ ಹುರುಳಿ, ಕಟ್ಟಿಂಕಾರು, ಮರಾಠಿ ಅಂಬಾರಗುಡ್ಡ ಶಾಲೆಗಳಿಗೆ ಬಣ್ಣದ ಡಬ್ಬಗಳನ್ನು ವಿತರಿಸಲಾಯಿತು.
ಸಭೆಯಲ್ಲಿ ಡಾ. ಎಸ್.ರಾಮಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಲಗೋಡು ರತ್ನಾಕರ, ರಮೇಶ್, ಫಯಾಜ್, ಕಾರುಣ್ಯ ರಾಮ್, ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post