ಕಲ್ಪ ಮೀಡಿಯಾ ಹೌಸ್
ಸಾಗರ: ನಾಡಿನ ವಿದ್ಯುತ್‌ಗಾಗಿ ದ್ವೀಪ ವಾಸಿಗಳಾಗುವ ಅನಿವಾರ್ಯತೆ ಅನುಭವಿಸಿದ ತುಮರಿ ಭಾಗದ ಸ್ಥಳೀಯರಿಗೆ ಶರಾವತಿ ಹಿನ್ನೀರಿನ ತುಮರಿ ಬ್ಯಾಕೋಡಿಗೆ ಸಂಪರ್ಕ ಕಲ್ಪಿಸುವ ಸಿಗಂದೂರು ಲಾಂಚ್‌ನಲ್ಲಿ ಸಿಬ್ಬಂದಿ ಅಸಹಕಾರದಿಂದ ಆದ್ಯತೆ ಸಿಗುತ್ತಿಲ್ಲ ಎಂದು ತುಮರಿಯ ಜನಪರ ಹೋರಾಟ ವೇದಿಕೆ ಆರೋಪಿಸಿದೆ.
ಲಾಂಚ್ ಸೇವೆಯು ಹಿನ್ನೀರಿನ ಜನರಿಗೆ ಅನುಕೂಲವಾಗಲು ಸರ್ಕಾರ ಕಲ್ಪಿಸಿದೆ. ಆದರೆ ಲಾಂಚ್ ಸಿಬ್ಬಂದಿ ಪ್ರವಾಸಿ ವಾಹನಗಳ ಜತೆ ಹೊಂದಾಣಿಕೆ ಮಾಡಿಕೊಂಡು ಸ್ಥಳೀಯರಿಗೆ ಅನ್ಯಾಯ ಮಾಡುತ್ತಾ ಇದ್ದಾರೆ ಎಂದು ವೇದಿಕೆಯ ಪ್ರಮುಖ ಪ್ರದೀಪ್ ಮಾವಿನಕೈ ಆಕ್ಷೇಪಿಸಿದ್ದಾರೆ.
ಸ್ಥಳೀಯರಿಗೆ ಆದ್ಯತೆ ನೀಡಲು ಲಾಂಚ್ ನಿಲ್ದಾಣದಲ್ಲಿ ಗೇಟ್ ನಿರ್ಮಿಸಿ ಪ್ರವಾಸಿಗರಿಗೆ ಪ್ರತ್ಯೇಕ ಸರತಿ ಸಾಲನ್ನು ಹಿಂದಿನಿಂದಲೂ ಕಲ್ಪಿಸಲಾಗಿದೆ. ಆದರೆ ಈಚೆಯ ತಿಂಗಳುಗಳಲ್ಲಿ ಈ ನಿಯಮ ಗಾಳಿಗೆ ತೂರಲಾಗಿದೆ. ಪ್ರವಾಸಿಗರಿಗೆ ಮೊದಲ ಆದ್ಯತೆ ಕಲ್ಪಿಸಲಾಗಿದ್ದು, ಇದರಿಂದ ದ್ವೀಪದ ಜನರ ನಿತ್ಯ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಆರೋಪಿಸಿದ್ದಾರೆ.
ಸೋಮವಾರ ಸಂಜೆ ಮತ್ತೆ ಇಂತಹ ಘಟನೆ ಮರುಕಳಿಸಿದ್ದು ಸ್ಥಳೀಯ ಬಾಣಂತಿ ಮಗು ಇದ್ದ ವಾಹನವನ್ನು ಸೇರಿ ಒಟ್ಟು ನಾಲ್ಕು ಸ್ಥಳೀಯ ವಾಹನಗಳಿಗೆ ಅವಕಾಶ ನೀಡದೆ ಪ್ರವಾಸಿ ವಾಹನಕ್ಕೆ ಆದ್ಯತೆ ನೀಡಿದ್ದು ಲಾಂಚ್ ನಿಲ್ದಾಣದಲ್ಲಿ ಲಾಂಚ್ ಸಿಬ್ಬಂದಿ ಹಾಗೂ ಸ್ಥಳೀಯ ಜನರ ನಡುವೆ ವಾಕ್ಸಮರ ನಡೆದಿದೆ. ಲಾಂಚ್ ಸಿಬ್ಬಂದಿ ವಿರುದ್ಧ ಇಲಾಖೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಕುರಿತು ತುಮರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಕರೂರು ಮಾತನಾಡಿ, ಇಲ್ಲಿನ ಎರಡೂ ದಡಗಳಲ್ಲಿ ಪೊಲೀಸರ ಕೊರತೆಯಿಂದ ಸಮರ್ಪಕವಾದ ವ್ಯವಸ್ಥೆಯನ್ನು ನಿರ್ವಹಿಸುವುದು ಕಷ್ಟವಾಗಿದೆ. ಕೂಡಲೇ ಜಿಲ್ಲಾಡಳಿತ ಈ ಕುರಿತು ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post