ಕಲ್ಪ ಮೀಡಿಯಾ ಹೌಸ್ | ಸಾಗರ |
ಸಾಗರದ ರಾಘವೇಶ್ವರ ಸಭಾ ಭವನದಲ್ಲಿ ಸೆ. 22ರಿಂದ ಆರಂಭಗೊಳ್ಳುವ ನವರಾತ್ರ ನಮಸ್ಯಾ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಲು ಶನಿವಾರ ಸಾಗರಕ್ಕೆ ಆಗಮಿಸಿದ ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪುರ ಪ್ರವೇಶ ಸಾಗರೋಪಾದಿಯಲ್ಲಿ ಸೇರಿದ ಜನಸಮೂಹದ ಮಧ್ಯದಲ್ಲಿ ವೈಭವದಿಂದ ನಡೆಯಿತು.
ನಗರದ ಶಾರದಾಂಬಾ ವೃತ್ತದಿಂದ ಆರಂಭವಾದ ಮೆರವಣಿಗೆಯು ಗಣಪತಿ ದೇವಾಲಯದವರೆಗೆ ನಡೆಯಿತು. ಸುಮಾರು 10 ಸಾವಿರಕ್ಕೂ ಹೆಚ್ಚು ಶಿಷ್ಯ ಭಕ್ತರು ಸುಮಾರು 1.5 ಕಿಮೀ ಉದ್ದದ ಮೆರವಣಿಗೆಯಲ್ಲಿ ಭವ್ಯವಾಗಿ ನಡೆಯಿತು. 2 ಸಾವಿರ ಮಾತೆಯರು ಪೂರ್ಣಕುಂಭದೊಂದಿಗೆ ಶ್ರೀಗಳವರ ಸ್ವಾಗತಿಸಿದರು. ಚಂಡೆ ವಾದನ, ನಾದಸ್ವರ, ಭಜನಾ ಕುಣಿತ, ರಾಮ ಸಂಕೀರ್ತನೆ ಸೇರಿದಂತೆ ಹತ್ತಕ್ಕೂ ಹೆಚ್ಚು ಕಲಾತಂಡಗಳು ಹಾಗೂ ಸುಮಾರು 15 ಅಡಿ ಎತ್ತರದ ಧನುರ್ಧಾರಿ ರಾಮನ ಮೂರ್ತಿ ಮೆರವಣಿಗೆಯ ಸೊಬಗನ್ನು ಹೆಚ್ಚಿಸಿತ್ತು.

ಶೋಭಾಯಾತ್ರೆಯ ನಂತರ ಮಾತನಾಡಿದ ಶ್ರೀಗಳು, ಸಾಗರ ನಗರಕ್ಕೆ ಸಾಗರ ಎಂಬ ಹೆಸರು ಸಲ್ಲುವುದು ಹೇಗೆ ಎಂಬ ಪ್ರಶ್ನೆಯಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಪುರಪ್ರವೇಶದ ಸಂದರ್ಭದಲ್ಲಿ ಭಕ್ತಿ ಸಾಗರವಾಗಿ ಹೊಮ್ಮಿದೆ. ಸಾಗರಕ್ಕೆ ಸಾಗರವೇ ಹೋಲಿಕೆ, ಆಕಾಶಕ್ಕೆ ಆಕಾಶವೇ ಹೋಲಿಕೆ, ರಾಮ-ರಾವಣ ಯುದ್ಧಕ್ಕೆ ಆ ಯುದ್ಧವೇ ಹೋಲಿಕೆ ಎಂದು ವಾಲ್ಮೀಕಿ ಮಹರ್ಷಿ ಹೇಳುತ್ತಾರೆ. ಸಾಗರ ನಗರದಲ್ಲಿ ನಡೆದ ಪುರಪ್ರವೇಶ ಉತ್ಸವಕ್ಕೆ ಬೇರೆ ಹೋಲಿಕೆ ಇಲ್ಲ. ಇವೆಲ್ಲ ವೈಭವಗಳು ರಾಜರಾಜೇಶ್ವರಿಗೆ ಸಲ್ಲುತ್ತದೆ ಎಂದರು.

ನವರಾತ್ರ ನಮಸ್ಯಾ
ಸೋಮವಾರದಿಂದ ಪ್ರತಿದಿನ ಮಧ್ಯಾಹ್ನ ಶ್ರೀಗಳಿಂದ ಲಲಿತೋಪಾಖ್ಯಾನ ವಿಶೇಷ ಪ್ರವಚನ ಇರಲಿದ್ದು, ಬೆಳಗ್ಗೆ ಶ್ರೀಪೂಜೆ, ಲಲಿತಾಮೂರ್ತಿ ಪೂಜೆ, ಚಂಡಿಕಾ ಹವನ, ಚಂಡೀ ಸಪ್ತಶತಿ ಪಾರಾಯಣ, ಕುಂಕುಮಾರ್ಚನೆ, ಭಜನೆ, ಸುವಾಸಿನಿ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















Discussion about this post