ಕಲ್ಪ ಮೀಡಿಯಾ ಹೌಸ್
ಸಾಗರ: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳ ಆಗುತ್ತಿರುವ ಹಿನ್ನಲೆಯಲ್ಲಿ, ತಾಲೂಕು ಆಡಳಿತದಿಂದ ಭಾನುವಾರದಿಂದ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಮೂಲಕ ಕೊರೋನಾ ಕಂಟ್ರೋಲ್ ಗೆ ಮುಂದಾಗಿದೆ.
ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಸಾಗರ ತಾಲೂಕು ಉಪವಿಭಾಧಿಕಾರಿ ನಾಗರಾಜ್ ಅವರು, ತಾಲೂಕಿನ ಅನೇಕ ಭಾಗಗಳಲ್ಲಿ ಲಾಕ್ ಡೌನ್ ನಡುವೆಯೂ, ಸೋಂಕಿನ ನಿಯಂತ್ರಣ ಮಾತ್ರ ಆಗಿಲ್ಲ. ಸೋಂಕು ನಿಯಂತ್ರಣಕ್ಕಾಗಿ, ತಾಲೂಕು ಆಡಳಿತದಿಂದ ಭಾನುವಾರದಿಂದ ನಾಲ್ಕು ದಿನ ತಾಲೂಕಿನಾಧ್ಯಂತ ಸಂಪೂರ್ಣ ಲಾಕ್ ಡೌನ್ ಮಾಡುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು.

ಇನ್ನೂ ಭಾನುವಾರ, ಸೋಮವಾರ, ಮಂಗಳವಾರ ಮತ್ತು ಬುಧವಾರ ಸೇರಿದಂತೆ ನಾಲ್ಕು ದಿನ ಸಂಪೂರ್ಣವಾಗಿ ತಾಲೂಕಿನಾಧ್ಯಂತ ಲಾಕ್ ಡೌನ್ ವಿಧಿಸಲಾಗಿದೆ. ತುರ್ತು ಸಂದರ್ಭದಲ್ಲಿ ಮಾತ್ರವೇ ಓಡಾಡೋದಕ್ಕೆ ಅವಕಾಶ ನೀಡಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡೋದಕ್ಕೆ ಸೂಚಿಸಲಾಗಿದೆ. ಕೇವಲ ಹಾಲು, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್, ಬ್ಯಾಂಕ್ ಸೇರಿದಂತೆ ಕೆಲ ಅಗತ್ಯಸೇವೆ ಒದಗಿಸುವಂತ ಇಲಾಖೆಗಳಿಗೆ ಮಾತ್ರವೇ ಅನುಮತಿಸಲಾಗಿದೆ ಎಂದರು.

ನಾಲ್ಕು ದಿನ ಸಾಗರ ತಾಲ್ಲೂಕಿನಾದ್ಯಂತ ಸಂಪೂರ್ಣ ಲಾಕ್ ಡೌನ್ ಮಾಡಲು ತಾಲೂಕು ಆಡಳಿತ ನಿರ್ದರಿಸಿದೆ.
ಒಂದು ವೇಳೆ ಈ ನಿಯಮ ಮೀರಿ ರಸ್ತೆಗೆ ಇಳಿಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಅಂತಹ ವಾಹನಗಳನ್ನು ಪೊಲೀಸರು ಸೀಜ್ ಕೂಡ ಮಾಡಲಿದ್ದಾರೆ. ತಾಲೂಕಿನ ಜನರು ಕೊರೋನಾ ನಿಯಂತ್ರಣಕ್ಕೆ ಸಹಕರಿಸುವಂತೆ ಉಪವೀಭಾಗಿಯ ಅಧಿಕಾರಿ ನಾಗರಾಜ್ ಮರ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ನಗರ ಸಭೆ ಆಯುಕ್ತರು, ನಗರ ಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ನಗರ ಸಭೆ ಸದಸ್ಯರು, ಪೋಲೀಸ್ ಅಧಿಕಾರಿಗಳು ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















