ನಿಜಕ್ಕೂ ಇದು ಹೊಸಬರ ಚಿತ್ರ ಎಂದು ಎನಿಸುವುದೇ ಇಲ್ಲ ಎಂಬುದನ್ನು ಆರಂಭದಲ್ಲೇ ಹೇಳಿ ಮಾತನ್ನು ಕೊಂಚ ಚಿತ್ರದ ಕಥಾ ಹಂದರದತ್ತ ಹೊರಳಿಸೋಣ.
ಗಣಪತಿ ಹೆಸರಿನ ಉತ್ಸಾಹಿ ಯುವಕ. ಆತನಿಗೆ ಕಾರ್ಟೂನ್ ಬರೆಯುವುದನ್ನೇ ವೃತ್ತಿಯಾಗಿಸಿಕೊಳ್ಳಬೇಕು ಎಂಬ ಹಂಬಲ. ಆದರೆ, ವಿದ್ಯಾಭ್ಯಾಸ ಎಂಬಿಎ ಓದಿರುವ ಅವನಿಗೆ ಕಾರ್ಟೂನ್ ಬರೆಯುವ ವೃತ್ತಿ ಆತನ ವಿದ್ಯಾರ್ಹತೆಗೆ ತಕ್ಕದಲ್ಲ ಎಂಬುದು ಅವನ ತಂದೆಯ ಅಭಿಪ್ರಾಯ.
ಹಲವಾರು ಕಡೆ ತಿರಸ್ಕೃತಗೊಂಡು ಕೊನೆಗೆ ದಿನಪತ್ರಿಕೆಯೊಂದರಲ್ಲಿ ಕಾರ್ಟೂನಿಸ್‌ಟ್ ಆಗಿ ಆಯ್ಕೆಯಾಗುತ್ತಾನೆ. ಅದೇ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ತನ್ನ ಕಾಲೇಜು ದಿನಗಳ ಗೆಳತಿಯ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ, ಅದು ಒನ್ ವೇ ಲವ್…
ಸಾಕಷ್ಟು ಪರದಾಟಗಳ ನಂತರ ತನ್ನ ಪ್ರೀತಿಯನ್ನು ಹೇಳಿಯೇ ಬಿಡಬೇಕು ಎಂದು ನಿರ್ಧರಿಸಿ ಆಕೆಯ ಬಳಿ ಹೇಳುವಷ್ಟರಲ್ಲಿ ಕಮರ್ಷಿಯಲ್ ಟ್ವಿಸ್‌ಟ್ ಎಂಬಂತೆ ಫಿಟ್‌ಸ್ ಅಟ್ಯಾಕ್ ಆಗಿ ಕೆಳಗೆ ಬೀಳುತ್ತಾನೆ. ನಂತರ ಆಸ್ಪತ್ರೆಯ ದೃಶ್ಯ..
ಈ ಮೊದಲಿನಿಂದಲೂ ಗಣಪತಿ ಫಿಟ್‌ಸ್ನ ತೊಂದರೆಯಿಂದ ಬಳಲುತ್ತಿದ್ದು, ಅದಕ್ಕೆ ಸೂಕ್ತ ಪರಿಹಾರವಾಗಿ ಮಿದುಳಿನಲ್ಲಿ ಒಂದು ಸಣ್ಣ ಆಪರೇಶನ್ ಮಾಡಿಸಲು ಡಾಕ್ಟರ್ ನಿರ್ಧರಿಸುತ್ತಾರೆ. ಅಷ್ಟರಲ್ಲಿ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ಎಂಗೇಜ್ ಮೆಂಟ್ ಆಗಿರುವುದು ತಿಳಿಯುತ್ತದೆ.
ಇದಿಷ್ಟೂ ಕತೆಯ ಟೇಕಾಫ್ ಆದರೆ ನಿಜವಾದ ಕತೆ ಪ್ರಾರಂಭವಾಗುವುದು ಆತನ ಆಪರೇಷನ್ ನಂತರ. ಬಳಿಕ ಎಂದಿನಂತೆ ಪತ್ರಿಕೆಯಲ್ಲಿ ಕೆಲಸ ಮಾಡಲು ಶುರು ಮಾಡುವ ಗಣಪತಿಯಲ್ಲಿ ಅನುಚಿತ ವರ್ತನೆ ಕಂಡು ಬರುತ್ತದೆ.. ಆತನ ಎಡಗೈ ಆತನ ಸ್ವಾಧೀನಕ್ಕೆ ಸಿಲುಕದೇ ಅನೇಕ ಅನಾಹುತಗಳನ್ನು ತಂದಿಡುತ್ತದೆ. ತನ್ನ ಈ ಕಷ್ಟಗಳಿಗೆ ಆಪರೇಷನ್‌ನಿಂದ ಉಂಟಾದ ಅಪರೂಪದ ಕಾಯಿಲೆ ಏಲಿಯನ್ ಹ್ಯಾಂಡ್ ಡಿಫಿಷಿಯೆನ್ಸಿ ಸಿಂಡ್ರೋಮ್ ಕಾರಣ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ.
ಇನ್ನು ಈ ತೊಂದರೆಯಿಂದ ಆತ ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾನೆ, ಬದುಕಿನಲ್ಲಿ ಹೇಗೆ ಹಿನ್ನಡೆ ಪಡೆಯುತ್ತಾನೆ. ಮತ್ತೆ ಹೇಗೆ ಮೊದಲಿನಂತಾಗುತ್ತಾನೆ. ಆತ ಪ್ರೀತಿಸಿದ ಹುಡುಗಿ ಅವನಿಗೆ ಸಿಗುತ್ತಾಳೋ ಇಲ್ಲವೋ, ಎಲ್ಲರಿಂದಲೂ ಅವಮಾನಿತನಾದವನು ಹೇಗೆ ತನ್ನ ಕಲೆಯಿಂದ ಬೆಳಕಿಗೆ ಬರುತ್ತಾನೆ? ಎಂಬುದೇ ಸಂಕಷ್ಟಕರ ಗಣಪತಿ ಚಿತ್ರದ ಕುತೂಹಲಕಾರಿ ಕಥಾಹಂದರ. ಅದನ್ನು ನೀವು ತೆರೆಯ ಮೇಲೆ ನೋಡಿಯೇ ತಿಳಿಯಬೇಕು.
ಇದಿಷ್ಟು ಚಿತ್ರದ ಸಾರಾಂಶವಾದರೆ…
ಚಿತ್ರದಲ್ಲಿ ನಾಯಕನ ಗೆಳೆಯನ ಪಾತ್ರ ಆಗಾಗ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರೆ, ಚಿತ್ರದುದ್ದಕ್ಕೂ ನಾಯಕನ ಎಡಗೈಯೇ ನಾಯಕ ಎಂಬಂತೆ ಬಾಸವಾಗುತ್ತದೆ.
ಸಂಕಷ್ಟಕರ ಗಣಪತಿ ಎಂದರೆ ನಿರ್ದೇಶಕರ ಪ್ರಕಾರ ಕಷ್ಟಗಳನ್ನು ತಂದೊಡ್ಡುವ ಗಣಪತಿ ಎಂದರ್ಥ. ಚಿತ್ರದ ನಾಯಕ ಗಣಪತಿಗೆ ಸಂಕಷ್ಟ ನೀಡುವುದೇ ಅವನ ಎಡಗೈ. ಇಲ್ಲಿ ಕರ ಎಂದರೆ ಕೈ ಎಂದರ್ಥ. ನಿರ್ದೇಶಕ ಅರ್ಜುನ್ ಕುಮಾರ್ ಕಥಾ ಹಂದರಕ್ಕೆ ಬಹುಸೂಕ್ತವಾದ ಹೆಸರನ್ನೇ ಇಟ್ಟಿದ್ದು, ಚಿತ್ರ ಫ್ಯಾಮಿಲಿ ಎಂಟರ್ ಟ್ರೈನರ್ ಆಗಿರುವುದರಲ್ಲಿ ಅನುಮಾನವೇ ಇಲ್ಲ.
ಈ ಸಂಕಷ್ಟಕರ ಗಣಪತಿ ಬಹುತೇಕ ಹೊಸಬರ ಸಿನೆಮಾ ಎಂದೇ ಹೇಳಬಹುದು. ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಅರ್ಜುನ್ ಕುಮಾರ್ ಈ ಹಿಂದೆ ಪನ್ಮಂಡ್ರಿ ಕ್ರಾಸ್ ಕಿರುಚಿತ್ರ ನಿರ್ದೇಶಿಸಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಕಿರುಚಿತ್ರಕ್ಕಿಂತಲೂ ಈ ಚಿತ್ರದಲ್ಲಿ ನಿರ್ದೇಶಕರ ಬಹಳಷ್ಟು ಪಕ್ವವಾಗಿದ್ದಾರೆ.
ಇನ್ನು ಚಿತ್ರದ ಸಂಗೀತ ನಿರ್ದೇಶಕ ಋತ್ವಿಕ್ ಮುರಳೀಧರ್ ಹಾಡುಗಳನ್ನು ಅತ್ಯಂತ ಮನೋಜ್ಞವಾಗಿ ನೀಡಿದ್ದು, ಇದು ಅವರ ಚೊಚ್ಚಲ ಚಿತ್ರದ ಸಂಗೀತ ಎಂದು ಭಾಸವಾಗುವುದೇ ಇಲ್ಲ.
ಸಿನಿಪ್ರಿಯರಿಗೆ ಚಿತ್ರದ ಅದ್ಬುತ ದೃಶ್ಯಗಳನ್ನು ಕಟ್ಟಿಕೊಟ್ಟಿರುವ ಉದಯ್ ಲೀಲಾ ಅವರಿಗೂ ಇದು ಪ್ರಥಮಾನುಭವ. ಚಿತ್ರದ ಹಾಡುಗಳನ್ನು ಸಂಚಿತ್ ಹೆಗಡೆ, ಮೆಹಬೂಬ್ ಸಾಬ್ ಮುಂತಾದ ಗಾಯಕರು ಹಾಡಿದ್ದು, ಚಿತ್ರಕ್ಕೆ ನಿಶ್ಚಲ್ ದಂಬೆಕೋಡಿ, ಮದನ್ ಬೆಳ್ಳಿಸಾಲು ಹಾಗೂ ಶಿವಮೊಗ್ಗದ ಯುವ ಪ್ರತಿಭೆ ನಿತಿನ್ ಜೈ ಸಾಹಿತ್ಯ ರಚಿಸಿದ್ದಾರೆ.
ವಿಶೇಷವೆಂದರೆ, ನಿರ್ದೇಶಕ ಅರ್ಜುನ್ ಕುಮಾರ್ ಹಾಗೂ ಸಂಗೀತ ನಿರ್ದೇಶಕ ಋತ್ವಿಕ್ ಮುರಳೀಧರ್ ಕೂಡಾ ಶಿವಮೊಗ್ಗದವರೇ. ಚಿತ್ರ ಡೈನಮೈಟ್ ಫಿಲಂಸ್ ಅಡಿಯಲ್ಲಿ ನಿರ್ಮಾಣವಾಗಿದ್ದು, ರಾಜೇಶ್ ಬಾಬು, ಫೈಜಾನ್ ಖಾನ್ ಇನ್ನು ಕೆಲವು ಗೆಳೆಯರು ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ.
ಒಟ್ಟಾರೆ ಫ್ಯಾಮಿಲಿ ಎಂಟರ್ ಟ್ರೈನರ್ ಆಗಿರುವ, ಹೊಸರೀತಿಯ ಕಥೆಯನ್ನು ಹೊಂದಿರುವ ಸಂಕಷ್ಟಕರ ಗಣಪತಿಯನ್ನು ಬೆಳ್ಳಿತೆರೆಯ ಮೇಲೆ ನೋಡದೇ ಇದ್ದರೆ ಗ್ರೇಟ್ ಚಾನ್‌ಸ್ ಮಿಸ್ ಮಾಡ್ಕೋತೀರಿ…
ಸಂಕಷ್ಟಕರ ಗಣಪತಿ ಎಂದರೆ ನಿರ್ದೇಶಕರ ಪ್ರಕಾರ ಕಷ್ಟಗಳನ್ನು ತಂದೊಡ್ಡುವ ಗಣಪತಿ ಎಂದರ್ಥ. ಚಿತ್ರದ ನಾಯಕ ಗಣಪತಿಗೆ ಸಂಕಷ್ಟ ನೀಡುವುದೇ ಅವನ ಎಡಗೈ. ಇಲ್ಲಿ ಕರ ಎಂದರೆ ಕೈ ಎಂದರ್ಥ. ನಿರ್ದೇಶಕ ಅರ್ಜುನ್ ಕುಮಾರ್ ಕಥಾ ಹಂದರಕ್ಕೆ ಬಹುಸೂಕ್ತವಾದ ಹೆಸರನ್ನೇ ಇಟ್ಟಿದ್ದು, ಚಿತ್ರ ಫ್ಯಾಮಿಲಿ ಎಂಟರ್ ಟ್ರೈನರ್ ಆಗಿರುವುದರಲ್ಲಿ ಅನುಮಾನವೇ ಇಲ್ಲ.
ವಿಶ್ಲೇಷಣೆ: ಸುಮುಖ, ಶಿವಮೊಗ್ಗ
Discussion about this post