ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಸಮಕಾಲೀನ ಸ್ಪರ್ಧಾತ್ಮಕ ಔದ್ಯೋಗಿಕ ಮಾರುಕಟ್ಟೆಗೆ ಅನುಗುಗಣವಾಗಿ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಕಲಿಸುವ ಮತ್ತು ಆ ಮೂಲಕ ಉದ್ಯೋಗ ಗಳಿಸುವ ಸಾಧ್ಯತೆಯನ್ನು ಹೆಚ್ಚಿಸುವ ಜವಾಬ್ದಾರಿ ಉನ್ನತ ಶಿಕ್ಷಣದ ಮೇಲಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು (ಕೆಎಸ್‌ಎಚ್‌ಇಸಿ) ಉಪಾಧ್ಯಕ್ಷ ಪ್ರೊ. ಎಸ್. ಆರ್. ನಿರಂಜನ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ Kuvempu University ಐಕ್ಯೂಎಸಿ ಘಟಕ, ಕೆಎಸ್‌ಎಚ್‌ಇಸಿ ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ (ಕೆಎಸ್‌ಡಿಸಿ) ಜಂಟಿ ಸಹಭಾಗಿತ್ವದಲ್ಲಿ, ವೃತ್ತಿ ಕೌಶಲ್ಯ- ಕೌಶಲ್ಯ ವೃದ್ಧಿ ಕೋರ್ಸ್ ಕುರಿತು ಶುಕ್ರವಾರ ವಿವಿಯ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬಿಎ, ಬಿಎಸ್ಸಿ, ಬಿಕಾಂ, ಬಿಎಡ್ ಮತ್ತಿತರ ಸಾಮಾನ್ಯ ಪದವಿಗಳು ನಿಧಾನಗತಿಯಲ್ಲಿ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಈ ಸಾಂಪ್ರದಾಯಿಕ ಪದವಿಗಳಿಗೆ ಮಾನ್ಯತೆ ದೊರಕಬೇಕೆಂದರೆ, ಪದವಿಯ ಜೊತೆಜೊತೆಗೆ ಉದ್ಯೋಗಕ್ಕೆ ಪೂರಕವಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಕಲಿಯಲೇಬೇಕಿದೆ. ಖಾಸಗಿ ಮತ್ತು ಕಾರ್ಪೊರೆಟ್ ಸಂಸ್ಥೆಗಳು ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಗಳ ಹೆಚ್ಚುವರಿ ಕೌಶಲ್ಯಗಳನ್ನು ಪರಿಗಣಿಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಇದರಿಂತ ವಂಚಿತರನ್ನಾಗಿಸಬಾರದು.
ಪದವಿ ಮುಗಿಸಿ ಉದ್ಯೋಗ ಅರಸುವ ವಿದ್ಯಾರ್ಥಿಗಳಿಗೆ ವೃತ್ತಿಗೆ ಪೂರಕವಾದ ಅಗತ್ಯ ಕೌಶಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪರಿಷತ್ತು ಗಂಭೀರವಾದ ಚಿಂತನೆ ನಡೆಸಿ ವೃತ್ತಿ ಕೌಶಲ್ಯ ಕುರಿತ ಪೇಪರ್ ಪದವಿ ಹಂತದಲ್ಲಿ ಕಡ್ಡಾಯವಾಗಿ ಬೋಧಿಸಬೇಕೆಂದು ನಿರ್ಧರಿಸಿದೆ. ಅದಕ್ಕೆ ಸೂಕ್ತ ಪಠ್ಯವನ್ನು ಸಿದ್ಧಪಡಿಸಿ ಈಗಾಗಲೇ ನೀಡಲಾಗಿದ್ದು, ಕಾಲೇಜು ಹಂತದಲ್ಲಿ ಪ್ರಾಂಶುಪಾಲರು ಮತ್ತು ಸಂಬಂಧಪಟ್ಟ ವಿಷಯಗಳ ಅಧ್ಯಾಪಕರು ಈ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದು ಸಲಹೆ ನೀಡಿದರು.
ಕುಲಪತಿ ಪ್ರೊ. ಎಸ್. ವೆಂಕಟೇಶ್ ಮಾತನಾಡಿ, ವೃತ್ತಿ ಕೌಶಲ್ಯ ಕುರಿತ ಕೌಶಲ್ಯ ವೃದ್ಧಿ ಕೋರ್ಸ್ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿಯೂ ಬೋಧಿಸುವಂತೆ ನಿರ್ದೇಶನ ನೀಡಲಾಗಿದ್ದು, ತರಗತಿಯ ಬೋಧನೆ ಕುರಿತ ಗೊಂದಲವನ್ನು ಕೂಡ ನಿವಾರಿಸಲಾಗಿದೆ. ಹೀಗಾಗಿ ಇನ್ನು ಮುಂದೆ ತರಗತಿಗಳು ನಡೆಯಲಿವೆ ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಕೆಸ್‌ಎಸ್‌ಡಿಸಿಯ ಪ್ರಶಾಂತ್, ಕೆಎಸ್‌ಎಚ್‌ಇಸಿ ವಿಶೇಷ ಅಧಿಕಾರಿ ಡಾ. ಜಯಪ್ಪ, ವಿದ್ಯಾರ್ಥಿ ಕ್ಷೇಮಪಾಲನಾ ಡೀನ್ ಪ್ರೊ. ಪ್ರಶಾಂತ್ ನಾಯಕ್, ಐಕ್ಯೂಎಸಿ ನಿರ್ದೇಶಕ ಪ್ರೊ. ಎನ್. ಬಿ. ತಿಪ್ಪೇಸ್ವಾಮಿ, ಪ್ರೊ. ಅಶ್ವಕ್ ಅಹಮದ್, ವಿವಿಧ ಕಾಲೇಜುಗಳು ಅಧ್ಯಾಪಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post