ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕರ್ನಾಟಕದ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಅಂತರ್ಜಲದ ನೀರಿನಲ್ಲಿ ಅಧಿಕ ಪ್ರಮಾಣದ ಯುರೇನಿಯಂ ಅಂಶಗಳು ಪತ್ತೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಪ್ರಾದೇಶಿಕ ಔದ್ಯೋಗಿಕ ಆರೋಗ್ಯ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಬಿ. ರವಿಚಂದ್ರನ್ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ Kuvempu University ಪರಿಸರ ಅಧ್ಯಯನ ವಿಭಾಗ ಬುಧವಾರ ’ಪರಿಸರ ಮತ್ತು ಆರೋಗ್ಯ’ ಕುರಿತು ಜ್ಞಾನಸಹ್ಯಾದ್ರಿ ಆವರಣದಲ್ಲಿ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ನಾಲ್ಕು ಜಿಲ್ಲೆಗಳ 73 ಗ್ರಾಮಗಳಲ್ಲಿ ಇತ್ತೀಚೆಗೆ ಕೈಗೊಂಡ ಅಧ್ಯಯನವೊಂದರ ಪ್ರಕಾರ ಸುಮಾರು 57 ಗ್ರಾಮಗಳಲ್ಲಿ ಯುರೇನಿಯಂ ಅಂಶ ಬೆಳಕಿಗೆ ಬಂದಿದ್ದು, ವಿಶ್ವ ಆರೋಗ್ಯ ಸಂಸ್ಥೆ ನಿಗದಿಗೊಳಿಸಿರುವ 30 ಮೈಕ್ರೋಗ್ರಾಂ ಮಿತಿಯನ್ನು ದಾಟಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
Also read: ಶಿವಮೊಗ್ಗ | ಸಿಗದ ಉದ್ಯೋಗ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ
ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಯುರೇನಿಯಂ ಅಂಶ ಕಂಡು ಬಂದಿರುವುದು ವಿಷಕಾರಿಯಾಗಿ ಪರಿಣಮಿಸಲಿದ್ದು, ಕ್ಯಾನ್ಸರ್, ಕಿಡ್ನಿ ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ.
ದಿನನಿತ್ಯ ಬಳಸುವ ಪದಾರ್ಥಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಅಂಶಗಳಿರುತ್ತವೆ. ಅದರಲ್ಲಿಯೂ ಹೆಂಗಸರು ಬಳಸುವ ಕಾಸ್ಮೆಟಿಕ್ ಉತ್ಪನ್ನಗಳಲ್ಲಿ ಮೈಕ್ರೋಪ್ಲಾಸ್ಟಿಕ್, ಸೀಸ, ಮತ್ತಿತರ ವಿಷಯುಕ್ತ ರಾಸಾಯನಿಕಗಳನ್ನು ಬಳಸಲಾಗುತ್ತಿದ್ದು, ಇವುಗಳ ನಿಯಮಿತ ಬಳಕೆಯಿಂದ ಚರ್ಮರೋಗ, ಕ್ಯಾನ್ಸರ್‌ನಂತಹ ಮಾರಕ ಖಾಯಿಲೆಗಳಿಗೀಡಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಮಾಜಕ್ಕೆ ಅನಿವಾರ್ಯ. ಆದರೆ ಜಗತ್ತು ಇಂದು ತೈಲ ಮತ್ತು ಇಂಧನ ಆಧಾರಿತ ಆರ್ಥಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇದರಿಂದಾಗಿ ಜಾಗತಿಕ ತಾಪಮಾನ ಏರಿಕೆ, ಹವಾಮಾನ ವೈಪರೀತ್ಯ, ಮಾನವ ನಿರ್ಮಿತ ನೈಸರ್ಗಿಕ ವಿಕೋಪಗಳು ಘಟಿಸುತ್ತಿವೆ ಎಂದು ಹೇಳಿದರು.
ಕುಲಸಚಿವೆ ಜಿ. ಅನುರಾಧ, ಸುಬ್ಬಯ್ಯ ಆಸ್ಪತ್ರೆಯ ಜನರಲ್ ಸರ್ಜನ್ ಮತ್ತು ಕ್ಯಾನ್ಸರ್ ತಜ್ಞೆ ಡಾ. ಆರತಿ ಐತಾಳ್, ಬೆಂಗಳೂರಿನ ಟೆಲ್ಸ್ಟ್ರಾ ಟೆಲಿ ಕಮ್ಯೂನಿಕೇಷನ್ ಸಂಸ್ಥೆಯ ಸೌಮ್ಯ ಶಿವರಾಂ ಸಮಕಣಿ ಮಾತನಾಡಿದರು. ಪರಿಸರ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಹೀನಾ ಕೌಸರ್, ಪ್ರೊ.ಜೆ. ನಾರಾಯಣ, ಪ್ರೊ.ಎಸ್.ವಿ. ಕೃಷ್ಣಮೂರ್ತಿ, ಡಾ. ಯೋಗೇಂದ್ರ, ಡಾ. ಬಸವರಾಜಪ್ಪ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post