ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ದೇಶ ಇಂದು ಸಂಪದ್ಭರಿತವಾಗಿದ್ದರೂ ಅನೇಕ ಜ್ವಲಂತ ಸವಾಲುಗಳನ್ನು ಕೂಡ ಎದುರಿಸುತ್ತಿದ್ದು, ಅವನ್ನು ಬಗೆಹರಿಸಿ ಸಂಪನ್ಮೂಲಗಳನ್ನು ಸೃಷ್ಟಿಸಿ ಸುಸ್ಥಿರತೆಯನ್ನು ಸಾಧಿಸುವುದರತ್ತ ಹೆಜ್ಜೆಯಿಡೋಣ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ #Prof. Sharath Ananthamurthy ಅಭಿಪ್ರಾಯಪಟ್ಟರು.
ದೇಶವನ್ನು ಸುಸ್ಥಿರವಾಗಿ ಕಟ್ಟುವಲ್ಲಿ ಮತ್ತು ನಮಗೆ ದೊರೆತ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಮತ್ತು ಭ್ರಷ್ಟಾಚಾರ ಮುಕ್ತವಾಗಿರಬೇಕು. ಜೊತೆಗೆ “ಇಂದು ನಾವೆಲ್ಲರೂ ಕೈಜೋಡಿಸಿ ನಿರ್ಮಿಸಿದ ಮಾನವ ಸರಪಳಿ ಎಲ್ಲರ ಮನಸ್ಸುಗಳನ್ನು ಬೆಸೆಯುವ ಸಹೋದರತೆಯ ಸಂಕೇತವಾಗಲಿ” ಎಂದರು.
ಕುವೆಂಪು ವಿವಿಯ #Kuvempu University ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕುಲಸಚಿವ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಹಣಕಾಸು ಅಧಿಕಾರಿ ಪ್ರೊ. ಎಚ್. ಎನ್. ರಮೇಶ್, ವಿವಿಧ ವಿಭಾಗಗಳ ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಾನವ ಸರಪಳಿ ಮತ್ತು ಬೈಕ್ ಜಾಥಾ: ಸರ್ವರ ಮನಸ್ಸುಗಳಲ್ಲಿ ಸೌಹಾರ್ದತೆ, ಭ್ರಾತೃತ್ವ, ಸಹೋದರ ಭಾವ ಮೂಡಲೆಂದು ಈ ಸಂದರ್ಭದಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಸಿಬ್ವಂದಿ ಮತ್ತು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿದ್ದು ವಿಶೇಷವಾಗಿತ್ತು.
ಅದೇ ರೀತಿ ‘ಹರ್ ಘರ್ ತಿರಂಗಾ’ ಅಭಿಯಾನದಡಿ ಸುಮಾರು 30 ಮೀಟರ್ ಉದ್ದದ ತ್ರಿವರ್ಣ ಧ್ವಜವನ್ನು ಹೊತ್ತು ವಿದ್ಯಾರ್ಥಿಗಳು ಕಾಲ್ನಡಿಗೆಯ ಜಾಥಾ ಹೊರಟರೆ, ಸುಮಾರು 100 ಬೈಕ್ ಗಳಲ್ಲಿ ತ್ರಿವರ್ಣ ಧ್ವಜಗಳನ್ನು ಹಿಡಿದು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ‘ವಂದೇ ಮಾತರಂ’ ಘೋಷವಾಕ್ಯದೊಂದಿಗೆ ಕ್ಯಾಂಪಸ್ ಒಳಗೆ ಮತ್ತು ಶಂಕರಘಟ್ಟ ಗ್ರಾಮದ ಸುತ್ತಲೂ ಬೈಕ್ ಜಾಥಾ ನಡೆಸಿದ್ದು ಎಲ್ಲರ ಗಮನ ಸೆಳೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post