ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ: ರಾಜ್ಯ ಸರ್ಕಾರದ ನಿರ್ದೇಶನದಂತೆ ಜುಲೈ 26ರಿಂದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ತರಗತಿಗಳನ್ನು ಪ್ರಾರಂಭಿಸಲಾಗಿದೆ.
ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಕುವೆಂಪು ವಿವಿ ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸಿದ್ದು, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಸೋಮವಾರದಿಂದ ಆರಂಭಿಸಿರುವ ವಿಶ್ವವಿದ್ಯಾಲಯ ರಾಜ್ಯಸರ್ಕಾರದ ಮಾರ್ಗಸೂಚಿಗಳ ಅನ್ವಯ ತರಗತಿ ಕೊಠಡಿಗಳು, ಹಾಸ್ಟೆಲ್ ಕೊಠಡಿಗಳು, ಪ್ರಯೋಗಾಲಯಗಳು, ಕಛೇರಿ ಸೇರಿದಂತೆ ವಿವಿಯ ಕ್ಯಾಂಪಸ್ ಅನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ.
ಕ್ಯಾಂಪಸ್‌ಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿ, ಅಧ್ಯಾಪಕರು ಹಾಗೂ ಸಿಬ್ಬಂದಿಗಳಿಗೆ ಮುಖ್ಯದ್ವಾರದ ಬಳಿ ಸ್ಯಾನಿಟೈಸ್ ಮಾಡಿ, ಅವರ ವಿವರಗಳನ್ನು ಹಾಗೂ ದೂರವಾಣಿ ಸಂಖ್ಯೆಯನ್ನು ಪಡೆದು ನಂತರ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ.
ವಿವಿಯ ಕ್ಯಾಂಪಸ್, ಕಡೂರು ಮತ್ತು ಚಿಕ್ಕಮಗಳೂರು ಸ್ನಾತಕೋತ್ತರ ಕೇಂದ್ರಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆಯ ಒಂದು ಡೋಸ್ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಕ್ಯಾಂಪಸ್‌ನ ಆರೋಗ್ಯ ಕೇಂದ್ರದಲ್ಲಿ ಕಳೆದ 15 ದಿನಗಳಿಂದ ಲಸಿಕೆ ಅಭಿಯಾನ ನಡೆಯುತ್ತಿದ್ದು, ವಿದ್ಯಾರ್ಥಿಗಳು ವಿವಿ ಆವರಣಕ್ಕೆ ಆಗಮಿಸಿ ಲಸಿಕೆ ಪಡೆದು ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲಾಗಿದೆ.
ವಿದ್ಯಾರ್ಥಿಗಳಿಂದ ಪಡೆದ ಮಾಹಿತಿ ಪ್ರಕಾರ ಶೇ. 85ರಷ್ಟು ವಿದ್ಯಾರ್ಥಿಗಳು ಒಂದು ಡೋಸ್ ಲಸಿಕೆಯನ್ನು ಈಗಾಗಲೇ ಪಡೆದಿರುವುದು ತಿಳಿದುಬಂದಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿರುವ ಕುವೆಂಪು ವಿಶ್ವವಿದ್ಯಾಲಯ, ತರಗತಿಗೆ ಹಾಜರಾಗುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಿರಬೇಕು. ವಿವಿಯ ಆವರಣ ಮತ್ತು ತರಗತಿಗಳಲ್ಲಿ ವಿದ್ಯಾರ್ಥಿಗಳು ಗುಂಪುಗೂಡದೆ ಕನಿಷ್ಟ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ.
ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿಯೊಂದಿಗೆ ಕ್ಯಾಂಪಸ್ ಪ್ರವೇಶಿಸುವುದು ಕಡ್ಡಾಯವಾಗಿದೆ.
ಉತ್ತಮ ಪ್ರತಿಕ್ರಿಯೆ:
ದೂರದ ಊರುಗಳಿಂದ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಕಾಲೇಜು ಆರಂಭಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸಂಪೂರ್ಣ ಸಂಖ್ಯೆಯ ವಿದ್ಯಾರ್ಥಿಗಳು ಆಗಮಿಸಲು ಇನ್ನು ಎರಡು-ಮೂರು ದಿನಗಳಾಗಬಹುದು. ಭಯದ ನಡುವೆಯೂ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ತರಗತಿಗೆ ಬಂದಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನಷ್ಟ ಉಂಟಾಗಬಾರದೆಂಬ ಉದ್ದೇಶದಿಂದ ಇರುವಷ್ಟು ವಿದ್ಯಾರ್ಥಿಗಳಿಗೆ ವಿವಿ ಪಾಠ-ಪ್ರವಚನವನ್ನು ಪ್ರಾರಂಭಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post