ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ : ಹೊಸ ಮಾಧ್ಯಮಗಳ ಪ್ರಭಾವ ಹಾಗೂ ಭರಾಟೆಗಳ ನಡುವೆಯೂ ಬಾನುಲಿಯಂತಹ ಸಾಂಪ್ರದಾಯಿಕ ಮಾಧ್ಯಮಗಳು ವಿಭಿನ್ನ ಆಲೋಚನೆ ಹಾಗೂ ಚಿಂತನೆಗಳ ಕಾರ್ಯಕ್ರಮಗಳ ಮೂಲಕ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿ ಡಾ.ಎನ್. ಸುಧೀಂದ್ರ ಹೇಳಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಮಾಧ್ಯಮ ಉಪನ್ಯಾಸ ಸರಣಿಯಲ್ಲಿ ಏರ್ಪಡಿಸಿದ ಆನ್‌ಲೈನ್ ವಿಶೇಷ ಉಪನ್ಯಾಸದಲ್ಲಿ ಅವರು ‘ಬಾನುಲಿ: ಅಂದು, ಇಂದು ಹಾಗೂ ಮುಂದೆ‘ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಇಂದಿನ ಯುವಕರು ಮಾಧ್ಯಮಗಳನ್ನು ಅರ್ಥ ಮಾಡಿಕೊಂಡರೆ, ಅವರಿಗೆ ಸಾಕಷ್ಟು ಅವಕಾಶಗಳಿವೆ. ಯುವಜನತೆಯಿಂದ ಮಾಧ್ಯಮಗಳು ಬೆಳೆಯುತ್ತವೆ. ಮಾಧ್ಯಮಗಳಲ್ಲಿ ಕೆಲಸ ಮಾಡಲು ಬಯಸುವ ಯುವಕರು ಮಾಧ್ಯಮ ಧರ್ಮವನ್ನು ಪಾಲಿಸಬೇಕು. ನೈತಿಕ ಮೌಲ್ಯಗಳಿಗೆ ಬೆಲೆ ನೀಡಬೇಕು. ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಬಾನುಲಿ ವರ್ಣರಂಜಿತ, ಆಕರ್ಷಕ ಹಾಗೂ ಜವಾಬ್ದಾರಿಯುತ ಕ್ಷೇತ್ರವಾಗಿದೆ. ಇಲ್ಲಿ ವರ್ಣನೆಗೆ ಅವಕಾಶವಿದೆ. ಇದು ನಮ್ಮ ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ಭಾವನೆಗಳನ್ನು ಉದ್ದೀಪಿಸುತ್ತದೆ. ಆ ಗುಣ ಬೇರೆ ಯಾವುದೇ ಮಾಧ್ಯಮಕ್ಕ್ಲೆ ಇಲ್ಲ. ಅಂತಹ ಬಾನುಲಿಯಲ್ಲಿ ಕೆಲಸ ಮಾಡುವವರಿಗೆ ಮಾಧ್ಯಮ ಪ್ರೀತಿ ಇರಬೇಕು. ಯಾವುದೇ ಮಾಹಿತಿಯನ್ನು ವೈವಿಧ್ಯಪೂರ್ಣವಾಗಿ ನಿರೂಪಿಸುವ ಕೌಶಲ್ಯವಿರಬೇಕು ಎಂದು ಅವರು ಹೇಳಿದರು.
ಬಂಡವಾಳದ ಸಮಸ್ಯೆಯಿಂದಾಗಿ ಖಾಸಗಿ ಬಾನುಲಿ ಕೇಂದ್ರಗಳು ಹಾಗೂ ಸಮುದಾಯ ಬಾನುಲಿ ಕೇಂದ್ರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು ಕಷ್ಟವಾಗಿದೆ. ಕೋವಿಡ್-19 ಎಲ್ಲಾ ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೊಡ್ಡ ಹೊಡೆತ ನೀಡಿದೆ. ಸಾಂಸ್ಕೃತಿಕ ಕಾರ‌್ಯಕ್ರಮಗಳು ಕಡಿಮೆಯಾದ ಕಾರಣ, ಬಾನುಲಿ ಕಾರ್ಯಕ್ರಮಗಳಲ್ಲೂ ವೈವಿಧ್ಯತೆ ಇಲ್ಲದಾಗಿದೆ. ಅಲ್ಲದೆ ಇತ್ತೀಚಿನ ಆಕಾಶವಾಣಿ ನೀತಿ ಕೂಡ ಬಾನುಲಿ ಕಾರ್ಯಕ್ರಮಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ವಿಭಾಗದ ಮುಖ್ಯಸ್ಥರಾದ ಡಾ. ಸತೀಶ್ ಕುಮಾರ್ ಅಂಡಿಂಜೆ, ಪ್ರಾಧ್ಯಾಪಕ ಪ್ರೊ. ಡಿ.ಎಸ್. ಪೂರ್ಣಾನಂದ, ಪ್ರೊ. ಪಿ.ಎ. ವರ್ಗೀಸ್ ಮತ್ತು ಸಹ ಪ್ರಾಧ್ಯಾಪಕರಾದ ಡಾ. ಎಂ.ಆರ್. ಸತ್ಯಪ್ರಕಾಶ್ ಉಪಸ್ಥಿತರಿದ್ದರು. ಸಂಶೋಧನಾ ವಿದ್ಯಾರ್ಥಿ ಎನ್.ಜೆ. ಸಚಿನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post