ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಪ್ರಸ್ತುತ ದಿನಮಾನಗಳಲ್ಲಿ ದೇವರ ಹೆಸರನ್ನು ಕೋಮುವಾದಕ್ಕೆ, ಜಾತಿವಾದಕ್ಕೆ ಬಳಸಿಕೊಳ್ಳುತ್ತಿರುವುದು ಭವ್ಯ ಭಾರತಕ್ಕೆ ನಿರ್ಮಾಣಕ್ಕೆ ಮಾರಕವಾಗಬಲ್ಲದು ಎಂದು ಹರಿಹರ ನಗರದ ಎಸ್.ಜೆ.ವಿ.ಪಿ. ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಎ.ಬಿ. ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
ಕುವೆಂಪು ವಿವಿಯ Kuvempu VV ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ಘಟಕದ ವತಿಯಿಂದ ವಿವಿಯ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿ ಕೇವಲ ಒಂದು ಸಮುದಾಯ, ಜಾತಿಗೆ ಸೇರಿದವರಲ್ಲ. ವಾಲ್ಮೀಕಿ ಜಯಂತಿ ಅಂತಹಾ ಆಚರಣೆಗಳು ಕೇವಲ ಒಂದು ಸಮುದಾಯಕ್ಕೆ, ಒಂದು ಜಾತಿಗೆ ಸೀಮಿತವಾಗಿರಬಾರದು. ಸಮಾಜದಲ್ಲಿ ಎಲ್ಲ ನಾಗರೀಕರು ಜಾತಿ ಕೋಟೆಯನ್ನು ಮೀರಿ ವಾಲ್ಮೀಕಿ, ಬುದ್ಧ, ಬಸವಣ್ಣ, ಅಂಬೇಡ್ಕರ್, ಕುವೆಂಪುರಂತಹ ಶ್ರೇಷ್ಠ ವ್ಯಕ್ತಿತ್ವಗಳನ್ನು ಸ್ಮರಿಸಬೇಕು, ಅವರ ಆಶಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
Also read: ಭದ್ರಾವತಿ: ಏಕತಾ ಓಟ ಮತ್ತು ಜಾಥಾ ಕಾರ್ಯಕ್ರಮಕ್ಕೆ ಬಿಇಒ ನಾಗೇಂದ್ರಪ್ಪ ಚಾಲನೆ
ಪ್ರಭುತ್ವಗಳು ತಮ್ಮ ವೈಭವೀಕರಣಕ್ಕೆ ಸಾಂಸ್ಕೃತಿಕ ರಾಜಕಾರಣ ಮಾಡುವುದನ್ನು ತಡೆಯಲು ನಾವು ದಾರ್ಶನಿಕರನ್ನು ಪ್ರಭುತ್ವದಿಂದ ಹೊರಗಿಟ್ಟು ನೋಡಬೇಕು. ಇದರಿಂದ ಸಮಾಜವು ದಾರಿತಪ್ಪುವುದನ್ನು ತಡೆಯಬಹುದು ಎಂದು ತಿಳಿಸಿದರು.
ಸಮಾಜದಲ್ಲಿ ಜಾತಿ ಎಂಬ ಸಂಕೋಲೆಗಳನ್ನು ಮೀರಿ ನಾವು ಬದುಕಬೇಕಿದೆ. ವಾಲ್ಮೀಕಿಯಂತಹ ಮಹಾನ್ ದಾರ್ಶನಿಕರನ್ನು ಕೇವಲ ಸಮಾರಂಭಗಳಲ್ಲಿ ಮಾತ್ರ ನೆನಪಿಸಿಕೊಳ್ಳದೇ, ಅವರ ಬದುಕಿನ ಆದರ್ಶಗಳನ್ನು ನಾವು ನಿತ್ಯ ಜೀವನದಲ್ಲಿ ಪಾಲಿಸಬೇಕು ಎಂದು ಪ್ರೊ. ಬಿ. ಪಿ ವೀರಭದ್ರಪ್ಪ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವೆ ಅನುರಾಧ ಜಿ, ಮೌಲ್ಯಮಾಪನ ಕುಲಸಚಿವ ಪ್ರೊ. ಎಸ್. ಕೆ. ನವೀನ್ ಕುಮಾರ್, ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ, ಪ.ಜಾ ಮತ್ತು ಪ.ಪಂ ಘಟಕದ ಸಂಚಾಲಕ ಡಾ. ಉದ್ದಗಟ್ಟಿ ವೆಂಕಟೇಶ್ ಮತ್ತಿತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post