ಭೋಪಾಲ್: ನನ್ನ ಕನಸಿಕ ಸಾಧನೆ ಸಿವಿಲ್ ಸರ್ವೀಸ್ ಪರೀಕ್ಷೆಗೋಸ್ಕರ ಸಾಮಾಜಿಕ ಜಾಲತಾಣದ ನನ್ನೆಲ್ಲಾ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದೆ:
ಇದು ಈ ಬಾರಿಯ ಯುಪಿಎಸ್’ಸಿ ಪರೀಕ್ಷೆಯಲ್ಲಿ ದೇಶಕ್ಕೇ 5ನೆಯ ರ್ಯಾಂಕ್ ಪಡೆದಿರುವ ಶೃತಿ ಜಯಂತ್ ದೇಶ್’ಮುಖ್ ಹಂಚಿಕೊಂಡ ಮನದಾಳದ ಮಾತು.
2018ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶಕ್ಕೇ 5ನೆಯ ಸ್ಥಾನ ಪಡೆದಿರುವ ಈಕೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ 23 ವರ್ಷದ ಕು.ದೇಶ್’ಮುಖ್, ಗುರಿ ಸಾಧನೆಗೆ ಸಾಮಾಜಿಕ ಜಾಲತಾಣ ತೊಡಕು ಎನಿಸಿ, ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದೆ ಎಂದಿದ್ದಾರೆ.
ಪರೀಕ್ಷಾ ಸಿದ್ಧತೆ ವೇಳೆ ಆನ್’ಲೈನ್ ಅಧ್ಯಯನ ಸಾಮಗ್ರಿಗಳನ್ನೇ ನಾನು ಹೆಚ್ಚಾಗಿ ಅಭ್ಯಾಸ ಮಾಡಿದ್ದು, ಇದರೊಂದಿಗೆ ಕೋಚಿಂಗ್ ಸಹ ಪಡೆದುಕೊಂಡಿದ್ದೆ. ಪ್ರತಿ ದಿನ ಸುಮಾರು 6ರಿಂದ 7 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಾ, ಆನ್’ಲೈನ್ ಟೆಸ್ಟ್’ಗಳನ್ನು ತೆಗೆದುಕೊಳ್ಳುತ್ತಿದ್ದೆ. ಇದರೊಂದಿಗೆ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ನಿರಂತರವಾಗಿ ಪರಿಹಾರ ಮಾಡುತ್ತಿದ್ದೆ ಎಂದಿದ್ದಾರೆ.
ಪರೀಕ್ಷೆಯಲ್ಲಿ ಸಮಾಜಶಾಸ್ತ್ರ ವಿಷಯವನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡಿದ್ದ ಈಕೆಯ ಹವ್ಯಾಸಗಳು ಸಂಗೀತ ಹಾಗೂ ಯೋಗ ಎನ್ನುವುದು ವಿಶೇಷ.
ತಮ್ಮ ಈ ಸಾಧನೆಗೆ ತಂದೆ ತಾಯಿಯರ ಸಂಪೂರ್ಣ ಸಹಕಾರವೇ ಕಾರಣ ಎನ್ನುತ್ತಾರೆ ಮಧ್ಯಪ್ರದೇಶದ ಭೋಪಾಲ್ ಮೂಲದ ಕು.ದೇಶ್’ಮುಖ್.
2018ರ ಬ್ಯಾಚ್’ನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶದಲ್ಲಿ ಒಟ್ಟು 759 ಅಭ್ಯರ್ಥಿಗಳ ಆಯ್ಕೆಯಾಗಿದ್ದು, ಇದರಲ್ಲಿ 182 ಮಹಿಳಾ ಅಭ್ಯರ್ಥಿಗಳು ಸೇವೆಗೆ ಅರ್ಹತೆ ಪಡೆದಿದ್ದಾರೆ.
Discussion about this post