ಶಿಕಾರಿಪುರ: ಇಲ್ಲಿನ ಪ್ರಸಿದ್ದ ಶ್ರೀ ಹುಚ್ಚುರಾಯಸ್ವಾಮಿಯ ಬ್ರಹ್ಮರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ಬಹು ವಿಜೃಂಭಣೆಯಿಂದ ನಡೆಯಿತು.
ಹಲವು ಶತಮಾನದ ಇತಿಹಾಸವನ್ನು ಹೊಂದಿರುವ ಶಿಕಾರಿಪುರದ ಭ್ರಾಂತೇಶ ಭಕ್ತಿಯಿಂದ ಬೇಡಿದ ಭಕ್ತಾಧಿಗಳಿಗೆ ಇಷ್ಟಾರ್ಥಗಳನ್ನು ಕರುಣಿಸುವ ನಂಬಿಕೆ ಭಕ್ತಾಧಿಗಳಲ್ಲಿದ್ದು ಪ್ರತಿ ವರ್ಷ ಚೈತ್ರ ಶುದ್ದ ಪೂರ್ಣಿಮೆಯಂದು ಜರುಗುವ ರಥೋತ್ಸವ ಈ ಬಾರಿ ಶುಕ್ರವಾರ ಬೆಳಿಗ್ಗೆ 7.40ರ ಬ್ರಾಹ್ಮೀ ಮಹೂರ್ತದಲ್ಲಿ ಶ್ರೀ ಗಣಪತಿ ಪೂಜೆ,ಅಷ್ಟ ದಿಕ್ಪಾಲರ ಮಹಾಬಲಿ, ಋತ್ವಿಜರ ವೇದ ಮಂತ್ರ ಘೋಷದೊಂದಿಗೆ ನಡೆಯಿತು.
ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯ ಅಧೀನಕ್ಕೆ ಒಳಪಡುವ ದೇವಾಲಯದಲ್ಲಿ ಈ ಬಾರಿ ಸಂಪೂರ್ಣ ಕಂದಾಯ ಇಲಾಖೆಯ ಅಧಿಕಾರಿಗಳು ತಹಸೀಲ್ದಾರ್ ನೇತೃತ್ವದಲ್ಲಿ ಸರ್ವ ರೀತಿಯ ಸಿದ್ದತೆಯನ್ನು ಕೈಗೊಂಡು ಅತ್ಯಂತ ಯಶಸ್ವಿಯಾಗಿ ನಡೆಯಿತು.
ಸಾಗರ, ಸೊರಬ, ಹಾವೇರಿ ಸಹಿತ ನಾಡಿನ ವಿವಿದೆಢೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ದೇವಾಲಯದಿಂದ ಆರಂಭವಾದ ರಥದ ಭವ್ಯ ಮೆರವಣಿಗೆ 9 ಗಂಟೆ ವೇಳೆಗೆ ರಥಬೀದಿಯಲ್ಲಿನ ಮಾರಿಗುಡಿ ಬಳಿ ಸಂಪನ್ನಗೊಂಡಿತು. ಬಿಸಿಲಿನ ಧಗೆ ಆರಂಭಗೊಳ್ಳುವ ವೇಳೆಗೆ ರಥದ ಮೆರವಣಿಗೆ ಸಂಪನ್ನಗೊಂಡಿದ್ದು ಭಕ್ತಾಧಿಗಳ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಯಿತು. ಭಕ್ತಾಧಿಗಳು ಹಣ್ಣು ಹೂವು ಸಮರ್ಪಿಸಿದರು.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಯಡಿಯೂರಪ್ಪ, ಪುತ್ರ ಲೋಕಸಭಾ ಚುನಾವಣಾ ಅಭ್ಯರ್ಥಿ ರಾಘವೇಂದ್ರ, ವಿಜಯೇಂದ್ರ, ಗುರುಮೂರ್ತಿ, ಉಮಾಶಂಕರ, ಪ್ರವೀಣಶೆಟ್ಟಿ, ಕಾಂಗ್ರೆಸ್ ಮುಖಂಡ ಶಾಂತವೀರಪ್ಪಗೌಡ, ದರ್ಶನ್ ಉಳ್ಳಿ, ನಗರದ ರವಿಕಿರಣ್, ರಮೇಶ್(ರಾಮಿ) ಮತ್ತಿತರರು ರಥದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
(ವರದಿ: ರಾಜಾರಾವ್ ಜಾಧವ್, ಪ್ರತಿನಿಧಿ, ಶಿಕಾರಿಪುರ)
Discussion about this post