ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ರಸ್ತೆ ಸುರಕ್ಷತಾ #RoadSafety ನಿಯಮಗಳ ಸಮರ್ಪಕ ಪಾಲನೆಯಿಂದ ಅಪಘಾತಗಳನ್ನು ತಪ್ಪಿಸಬಹುದಾಗಿದ್ದು, ವಿದ್ಯಾರ್ಥಿಗಳು, ಹದಿಹರೆಯದ ಯುವಜನತೆಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕೆಂದು ಶಿಕಾರಿಪುರ #Shikaripura ಪಟ್ಟಣ ಪೋಲಿಸ್ ಕಛೇರಿಯ ಸಬ್’ಇನ್ಸ್ಪೆಕ್ಟರ್ ಎಚ್. ಶರಣ ತಿಳಿಸಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಭವಾನಿ ರಾವ್ ಕೇರಿಯ ಕುಮದ್ವತಿ ಪ್ರೌಢಶಾಲೆಯಲ್ಲಿ ಆರಕ್ಷಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರೌಢಶಾಲಾ ಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ನಿಯಮಗಳ ಕುರಿತಾದ ಮಾಹಿತಿ ರವಾನೆ ಮಾಡುವ ಉದ್ದೇಶದಿಂದ ಈ ಕಾರ್ಯಾಗಾರ ನಡೆಸುತ್ತಿರುವುದು ಉತ್ತಮ ಕಾರ್ಯವಾಗಿದೆ. ವಾಹನ ಚಾಲನೆ ವೇಳೆ ಎಲ್ಲರೂ ಜಾಗೃತರಾಗಿರಬೇಕು. ಎಲ್ಲಾ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಚಾಲನೆಯಲ್ಲಿನ ನಿರ್ಲಕ್ಷ್ಯದಿಂದಾಗಿ ಅಪಘಾತಗಳು ಸಂಭವಿಸಿ ಹೆಚ್ಚಿನ ಸಾವು ನೋವುಗಳಾಗುತ್ತಿವೆ. ನಾವು ಎಚ್ಚರವಾಗಿದ್ದರೂ ಎದುರಿನ ಚಾಲಕ ಸರಿಯಿಲ್ಲದಿದ್ದರೂ ಅಪಘಾತವಾಗುವ ಸಂಭವ ಹೆಚ್ಚಿರುವುದರಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಎಂದರು.
ಕೆಲವು ಕಾಲೇಜು ವಿದ್ಯಾರ್ಥಿಗಳು, ಹದಿವಯಸ್ಸಿನ ಮಕ್ಕಳು ಅತಿ ವೇಗವಾಗಿ ವಾಹನ ಚಾಲನೆ ಮಾಡುವುದು, #TrafficRules ಟ್ರಾಫಿಕ್ ಸೂಚನೆಗಳನ್ನು ಉಲ್ಲಂಘಿಸುವುದು ಸೇರಿದಂತೆ ನಿಯಮಗಳನ್ನು ಪಾಲಿಸದೇ ಅಪಘಾತಕ್ಕೀಡಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದನ್ನು ತಪ್ಪಿಸಲು ಪ್ರೌಢಶಾಲಾ ಹಂತದಿಂದಲೇ ಶಿಕ್ಷಕರು ವಿದ್ಯಾರ್ಥಿಗಳಿಗೆ, ಶಾಲಾ ಬಸ್ಸುಗಳ ಚಾಲಕರಿಗೆ ಸಂಚಾರಿ ನಿಯಮಗಳ ಕುರಿತು ಮಾಹಿತಿ ರವಾನೆ ಮಾಡುತ್ತಿರುವುದು ಉತ್ತಮ ಪ್ರಯತ್ನವಾಗಿದೆ. ಈ ರೀತಿಯ ಪ್ರಯತ್ನದಿಂದಾಗಿ ಸುರಕ್ಷಿತ ನಿಯಮಗಳ ಶಿಸ್ತುಬದ್ದ ಪಾಲನೆ ಸಾಧ್ಯವಾಗಲಿದೆ ಎಂದು ಆಶಿಸಿದರು.
ಶಿಕಾರಿಪುರದ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾಧಿಕಾರಿಗಳಾದ ರತ್ನಮ್ಮ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಪ್ರಾಥಮಿಕ ಕಾನೂನಿನ ಅರಿವು ಪಡೆದುಕೊಂಡು ಉನ್ನತ ಮಟ್ಟಕ್ಕೆ ಬೆಳೆಯಬೇಕು. ವಿದ್ಯಾರ್ಥಿ ಜೀವನವು ಭವಿಷ್ಯ ರೂಪಿಸಿಕೊಳ್ಳಲು ಸಕಾಲವಾಗಿರುತ್ತದೆ. ಪ್ರೀತಿ ಪ್ರೇಮವೆಂಬ ಆಕರ್ಷಣೆಗೆ ಒಳಗಾಗದೆ ಚೆನ್ನಾಗಿ ಓದಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.
ತಂದೆ-ತಾಯಿ ಕಂಡ ಕನಸುಗಳನ್ನು ನನಸು ಮಾಡಿ, ಭವಿಷ್ಯ ಉಜ್ವಲ ರೂಪಿಸಿಕೊಳ್ಳಲು ಶ್ರಮಪಡಬೇಕು. ಭಾರತ ದಂಡ ಸಂಹಿತೆ ಕಲಂ 10ರಲ್ಲಿ ಹೇಳಿರುವಂತೆ 18 ವರ್ಷದೊಳಗಿನ ಮಕ್ಕಳೊಂದಿಗೆ ಯಾರಾದರೂ ಅಸಭ್ಯವಾಗಿ ವರ್ತಿಸಿದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದರೆ ಪೋಕ್ಸೋ ಕಾಯ್ದೆದಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಶಾಲಾ ಪ್ರಾಚಾರ್ಯರಾದ ಪಿ. ವಿಶ್ವನಾಥ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ಕಾನೂನುಗಳನ್ನು ಅರಿಯು ವುದರಿಂದ ಸಮಾಜ ನಿರೀಕ್ಷಿತ ಬದುಕು ರೂಪಿಸಿಕೊಳ್ಳಲು ಸಾಧ್ಯ. ಅರ್ಹತೆಯಿಲ್ಲದೇ ವಾಹನ ಚಾಲನೆ ಮಾಡಿ ಅಪಘಾತಗಳಾದರೆ ಪರಿಹಾರ ಸಿಗದೇ ಕುಟುಂಬಗಳು ಬೀದಿಗೆ ಬರುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಪರವಾನಗಿಗೆ ನಿರ್ದಿಷ್ಟ ವಯಸ್ಸು ತಲುಪಿದ ನಂತರ ಚಾಲನಾ ಪರವಾನಗಿ ಪಡೆದು ವಾಹನಗಳನ್ನು ಚಲಾಯಿಸಬೇಕು ಎಂದರು.
ಶಾಲಾ ಸಂಚಾಲನಾ ಸಮಿತಿಯ ಸದಸ್ಯರಾದ ನಿರ್ಮಲಾ ಪೈ, ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಲಲಿತಾ ಪ್ರಾರ್ಥಿಸಿ, ಚಂದ್ರಮತಿ ಸ್ವಾಗತಿಸಿದರು. ಮಂಜುಳಾ ಪಾಟೀಲ್ ವಂದಿಸಿ, ರೇಖಾ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















