ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಇಲ್ಲಿನ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಇಂದು ಇಲ್ಲಿನ ತಾಲ್ಲೂಕು ಕಚೇರಿ ಎದುರು ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಮಹಿಳಾ ಘಟಕದ ಪದಾಧಿಕಾರಿಗಳು ಪ್ರತಿಭಟನೆಯ ಮೂಲಕ ಮನವಿ ಸಲ್ಲಿಸಿದರು.
ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ Shikaripura Government Hospital ಮೂಲಭೂತ ಸೌಕರ್ಯಗಳಿಲ್ಲದೇ ರೋಗಿಗಳಿಗೆ ತುಂಬಾ ಸಂಕಷ್ಟವಾಗಿದೆ. ಸರಿಯಾದ ಸಮಯಕ್ಕೆ ವೈದ್ಯರು ಬಾರದೇ ಪರದಾಡುವಂತಾಗಿದೆ. ವೈದ್ಯರ ಸಂಖ್ಯೆಯೂ ಕೂಡ ಕಡಿಮೆ ಇದೆ. ವೈದ್ಯರು ಬಂದರೂ ಕೂಡ ರೋಗಿಗಳ ನೋಡದೇ ಒಪಿಡಿಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ರೋಗಿಗಳು ದಿನಗಟ್ಟಲೆ ಕಾಯಬೇಕು. ಆದ್ದರಿಂದ ಆಸ್ಪತ್ರೆಯಲ್ಲಿ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಬಿಸಿಯೂಟ ಕಾರ್ಯಕರ್ತೆಯರಿಗೆ ಮೂರು ತಿಂಗಳಿಂದ ವೇತನ ನೀಡಿಲ್ಲ. ಕಾರ್ಯಕರ್ತೆಯರು ತುಂಬಾ ಸಂಕಷ್ಟದಲ್ಲಿದ್ದಾರೆ. ಕೂಡಲೇ ಅವರ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
Also read: ಕುವೆಂಪು ವಿವಿ ಎನ್’ಎಸ್’ಎಸ್ ಸಂಯೋಜನಾಧಿಕಾರಿಯಾಗಿ ಡಾ. ಶುಭಾ ಮರವಂತೆ ನೇಮಕ
ನಗರದಲ್ಲಿ ವಾಣೀಜ್ಯ ಮಳಿಗೆಗಳು, ಸರ್ಕಾರಿ ಕಚೇರಿಗಳ ನಾಮಫಲಕಗಳಲ್ಲಿ ಶೇಕಡ 60 ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿರಬೇಕು. ಇಲ್ಲದಿದ್ದರೆ ಸಂಘಟನೆ ವತಿಯಿಂದ ಮಸಿ ಬಳಿಯುವ ಕಾರ್ಯಕ್ರಮ ರೂಪಿಸಲಾಗುವುದು. ಶಾಲೆಗಳಲ್ಲಿ ಕನ್ನಡ ಬೋಧನೆ ಕಡ್ಡಾಯವಾಗಬೇಕು. ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಯಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ನಮ್ಮ ಬೇಡಿಕೆಗಳು ಈಡೇರದಿದ್ದರೆ ಮಹಿಳಾ ಸಂಘಟನೆ ವತಿಯಿಂದ ಜಿಲ್ಲಾಧ್ಯಂತ ಹೋರಾಟ ರೂಪಿಸಲಾಗುವುದು ಎಂದು ಪದಾಧಿಕಾರಿಗಳು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಜೀಮಾ, ತಾಲ್ಲೂಕು ಅಧ್ಯಕ್ಷೆ ಅಕ್ಕಮ್ಮಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾ ಎನ್. ಶೆಟ್ಟಿ, ಪದಾಧಿಕಾರಿಗಳಾದ ರೇಖಾ, ಸುಮ, ಹುಲುಗಮ್ಮ, ಚೆನ್ನಮ್ಮ, ಲಕ್ಷ್ಮಮ್ಮ, ನಂದಮ್ಮ, ಮಂಜುಳ, ಶಾರದಮ್ಮ, ರೇಣುಕಮ್ಮ, ಜರೀನಾ, ರಘು ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post