ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ನಾನಾಗಲಿ ಅಥವಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದಾಗಲಿ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ರೈತರೊಂದಿಗೆ ಹಾಗೂ ರೈಲ್ವೇ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಿ ಅವರು ಮಾತನಾಡಿದರು.
ಈ ಸಭೆಯಲ್ಲಿ ಪಾಲ್ಗೊಂಡಿದ್ದ ರೈತರೊಬ್ಬರಾದ ಗುತ್ತಿ ಕನ್ನಪ್ಪ ಎಂಬುವವರು, ಹಳಿಯೂರು ಭಾಗದ ಸರ್ವೆ ನಂಬರ್ 172 ರಲ್ಲಿ ಸುಮಾರಷ್ಟು ಜಮೀನಿದ್ದು, ಇಲ್ಲಿ ಜಮೀನು ಮಂಜೂರು ಆಗಿರುವುದು ಒಬ್ಬರಿಗೆ, ಪಹಣಿ ಆಗಿರುವುದು ಒಬ್ಬರಿಗೆ,ಪೋಡಿ ಆಗಿರುವುದು ಇನ್ನೊಬ್ಬರಿಗೆ, ಉಳುಮೆ ಮಾಡುತ್ತಿರುವುದು ಇನ್ನೊಬ್ಬರು ಹೀಗಿರುವಾಗ ಭೂ ಸ್ವಾಧೀನ ಪ್ರಕ್ರಿಯೆ ನಡೆದ ಮೇಲೆ ಪರಿಹಾರ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂದು ಪ್ರಶ್ನಿಸಿದರು.
ಇನ್ನು ಕೆಲವರು ಈ ಭೂಮಿ ಸ್ವಾಧೀನಕ್ಕೆ ಕೊಡುವ ಬೇಗೂರು, ಸದಾಶಿವಪುರ ತಾಂಡ, ಸೇರಿದಂತೆ ಅನೇಕ ರೈತರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗದವರಾಗಿದ್ದು, ಅತಿ ಕಡಿಮೆ ಪ್ರಮಾಣದಲ್ಲಿ ಭೂಮಿಯನ್ನು ಹೊಂದಿದ್ದೇವೆ. ಈ ಅಲ್ಪಸ್ವಲ್ಪ ಜಮೀನಿನಲ್ಲೇ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದೇವೆ ಇದಕ್ಕೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ನಮ್ಮಲ್ಲಿ ವಿದ್ಯಾವಂತರಿದ್ದಾರೆ ಅವರಿಗೆ ಒಂದು ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಹೆತ್ತ ತಾಯಿ ಬೇರೆಯಲ್ಲ ಅನ್ನ ನೀಡೋ ಭೂಮಿ ಬೇರೆಯಲ್ಲ. ಹೆತ್ತ ತಾಯಿ ಒಂಬತ್ತು ತಿಂಗಳು ಹಾಲುಣಿಸಿದರೆ, ಭೂಮಿ ನಮ್ಮ ಕೊನೇ ಉಸಿರು ಇರೋವರೆಗೂ ಅನ್ನ ನೀಡುತ್ತಾಳೆ. ಇಂತಹಾ ಭೂಮಿಯನ್ನು ಉತ್ತಿ ಬಿತ್ತಿ ಬೆಳೆ ಬೆಳೆದು ಎಲ್ಲರಿಗೂ ಅನ್ನ ನೀಡೋ ರೈತರಿಗೆ ತಾವಾಗಲೀ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಾಗಲಿ ಅನ್ಯಾಯ ಆಗಲು ಬಿಡುವುದಿಲ್ಲ ಎಂದರು.
ತಾಲೂಕಿನ ಹಾರೋಗೊಪ್ಪ, ಎರೆಕಟ್ಟೆ, ದೂಪದಳ್ಳಿ, ಸದಾಶಿವಪುರ ತಾಂಡ, ಬೇಗೂರು ಸೇರಿದಂತೆ ಒಟ್ಟು 11 ಗ್ರಾಮಗಳಲ್ಲಿ ರೈಲ್ವೇ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸಲಾಗುವುದು. ಈ ಗ್ರಾಮಗಳಲ್ಲಿ ಒಟ್ಟಾರೆಯಾಗಿ 277 ಎಕ್ಕರೆ ಜಮೀನು ಸ್ವಾಧೀನ ಪ್ರಕ್ರಿಯೆಗೆ ಒಳ ಪಡಿಸಲಾಗುವುದು. ಇದರಲ್ಲಿ 73 ಎಕ್ಕರೆ ಬಗರ್ ಹುಕುಂ, 55 ಎಕ್ಕರೆ ಸರ್ಕಾರಿ ಜಮೀನು, 10 ಎಕ್ಕರೆ ಕಂದಾಯ ಇಲಾಖೆಯ ಜಮೀನು, 5.18 ಎಕ್ಕರೆ ಶೃಂಗೇರಿ ಮಠದ ಜಮೀನು, ಹೀಗೆ ಜಮೀನು ಗಳಿದ್ದು, ಇದರಲ್ಲಿ ಉಳುಮೆ ಮಾಡುವ ಎಲ್ಲಾ ರೈತರಿಗೂ ಮುಖ್ಯಮಂತ್ರಿ ಹಾಗೂ ತಾವು ಸೇರಿ ಅಧಿಕಾರಿಗಳ ಜೊತೆ ಸಮಾಲೋಚನೆ ಸಭೆ ನಡೆಸಿ ಸೂಕ್ತ ಪರಿಹಾರ ಕೊಡಿಸಲು ಬದ್ಧರಾಗಿದ್ದೇವೆ ಎಂದರು.
ತಾಲೂಕಿನ ನೀರಾವರಿ ಯೋಜನೆಗೆ ಹಿರೇಕೆರೂರು ತಾಲೂಕಿನಲ್ಲಿ ಸುಮಾರು 37 ಎಕರೆಯಷ್ಟು ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಅಲ್ಲಿನ ಎಲ್ಲಾ ರೈತರು ಭೂಮಿಯನ್ನು ಮುಕ್ತ ಮನಸ್ಸಿನಿಂದ ಬಿಟ್ಟು ಕೊಡಲು ನಿರ್ಧರಿಸಿದ್ದಾರೆ. ಅದೇರೀತಿ ತಾಲ್ಲೂಕಿನ ಅಭಿವೃದ್ಧಿಗೆ ರೈತರು ಸಹಕಾರ ನೀಡಬೇಕು ಎಂದರಲ್ಲದೇ, ಭೂ ಸ್ವಾಧೀನ ಪ್ರಕ್ರಿಯೆ ಸಮಯದಲ್ಲಿ ಅಡಿಕೆ, ತೆಂಗು, ಬಾಳೆ, ಗಂಧ ಈ ರೀತಿಯಾಗಿ ವಿವಿಧ ರೀತಿಯ ಬೆಳೆಗಳನ್ನು ಬೆಳೆದಂತಹ ರೈತರಿಗೆ ಅವರವರ ಬೆಳೆಗಳಿಗನುಸಾರವಾಗಿ ಜಂಟಿ ಸರ್ವೆ ಕಾರ್ಯ ನಡೆಸಿ ಪರಿಹಾರ ನೀಡಲು ಪ್ರಯತ್ನ ನಡೆಸಲಾಗುವುದು ಎಂದರು.
ರೈತರು ಭೂಮಿಯನ್ನು ಬಿಟ್ಟು ಕೊಡಲಿ ಕೊಡದಿರಲಿ ಸರ್ಕಾರ ರೈಲ್ವೇ ಯೋಜನೆ ನಿಲ್ಲಿಸುವುದಿಲ್ಲ. ಭೂಮಿ ಬಿಟ್ಟು ಕೊಟ್ಟವರಿಗೆ, ಕೊಡದಿದ್ದವರಿಗೆ ಅವರವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಸ್ವತಂತ್ರ್ಯಾ ನಂತರ ಶಿವಮೊಗ್ಗಕ್ಕೆ ಮಾತ್ರ ಸೀಮಿತವಾಗಿದ್ದ ರೈಲ್ವೇ ಯೋಜನೆ ಉತ್ತರ ಕರ್ನಾಟಕಕ್ಕೂ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Get In Touch With Us info@kalpa.news Whatsapp: 9481252093
Discussion about this post