ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಾಲಾ ಸಂಸತ್ತು ಶಾಲೆಯ ಆಡಳಿತದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಒಂದು ಉತ್ತಮ ಮಾರ್ಗವಾಗಿದೆ. ಶಾಲಾ ಸಂಸತ್ತು ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳನ್ನು ಬೆಳೆಸಲು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಯಲು ಅವಕಾಶ ನೀಡುತ್ತದೆ ಎಂದು ಅರಿವಳಿಕೆ ತಜ್ಞ ಡಾ. ಸುರೇಶ ತಿಳಿಸಿದರು.
ನಗರದ ಭವಾನಿರಾವ್ ಕೇರಿಯ ಕುಮದ್ವತಿ ಪ್ರೌಢಶಾಲೆ ಮತ್ತು ಮೈತ್ರಿ ಪ್ರಾಥಮಿಕಯಲ್ಲಿ ಶಾಲಾ ಸಂಸತ್ ನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಶಾಲಾ ಸಂಸತ್ತು ಶಾಲೆಯ ಮೂಲಸೌಕರ್ಯ, ಕಲಿಕಾ ವಾತಾವರಣ ಮತ್ತು ಶಾಲೆಯ ಇತರ ವಿಷಯಗಳ ಸುಧಾರಣೆಗೆ ಸಲಹೆಗಳನ್ನು ನೀಡುತ್ತದೆ.
ಶಾಲಾ ಸಂಸತ್ತಿನ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಂವಹನ ಕೌಶಲ್ಯ, ಸಮಸ್ಯೆ-ಪರಿಹರಿಸುವ ಕೌಶಲ್ಯಗಳು, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಮಕ್ಕಳೂ ಸಹ ದೇಶದ ಪ್ರಜೆಗಳಾಗಿರುವುದರಿಂದ ಶಾಲಾ ಕಲಿಕೆಯ ಜೊತೆಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ನಾಗರೀಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು. ಈ ಹಿನ್ನಲೆಯಲ್ಲಿ ಮಕ್ಕಳ ಸಂಸತ್ತು ಹೆಚ್ಚು ಮಹತ್ವ ಪಡೆದಿದೆ. ಶಾಲೆಯ ಪ್ರತಿಯೊಂದು ಚಟುವಟಿಕೆ ಹಾಗೂ ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆ ಅತ್ಯಂತ ಮಹತ್ವದ್ದು. ಶಾಲೆಗೆ ಸಂಬಂಧಿಸಿದ ಕೆಲ ಚಟುವಟಿಕೆಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಮಕ್ಕಳೂ ಕೂಡಾ ಅರ್ಹರು. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಮಕ್ಕಳಿಗೆ ಸಂಬಂಧಿಸಿದ ಪ್ರತಿಯೊಂದು ಚಟುವಟಿಕೆ ಹಾಗೂ ನಿರ್ಣಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಮಕ್ಕಳಿಗೆ ಇದೆ. ಈ ಶಾಲೆಯಲ್ಲಿ ರಚನೆಯಾಗಿರುವ ಶಿಸ್ತಿನ ಮಂತ್ರಿಯ ಹಾಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿಯೂ ಸಚಿವ ಸ್ಥಾನ ರಚನೆ ಆಗಬೇಕಾಗಿದೆ.ವಿದ್ಯಾರ್ಥಿಗಳು ಗುರುಗಳ ಮಹತ್ವ ತಿಳಿದುಕೂಳ್ಳಬೇಕು.ಗುರುಗಳಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ವಿದ್ಯಾರ್ಜನೆ ಜೊತೆಯಲಿ ಕ್ರೀಡೆ ಮತ್ತು ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿಬೇಕು.ಆರೋಗ್ಯದ ಕಡೆಗೆ ಹೆಚ್ಚು ಗಮನ ಕೂಡಬೇಕು.ಜಂಕ್ ಆಹಾರಗಳನ್ನು ಸೇವನೆ ಮಾಡಬಾರದು.ದೇಹವನ್ನು ದಂಡಿಸಿ ದೈಹಿಕ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಆಡಳಿತ ಪ್ರತಿನಿಧಿಗಳು ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಶಿವಕುಮಾರ ಜಿ.ಎಸ್ ರವರು ಮಕ್ಕಳು, ಮಕ್ಕಳಿಂದ, ಮಕ್ಕಳಿಗಾಗಿ ಆಯ್ಕೆಯಾದ ಸದಸ್ಯರ ಒಂದು ಸಂಸ್ಥೆ ಅಥವಾ ಸಂಘವೇ ಶಾಲಾ ಮಕ್ಕಳ ಸಂಸತ್ ಆಗಿದೆ. ಮಕ್ಕಳ ಸಂಸತ್‌ನಲ್ಲಿ ಮಕ್ಕಳೇ ಸಂಪೂರ್ಣ ಭಾಗೀದಾರರಾಗಿರುತ್ತಾರೆ. ತಮ್ಮ ಹಕ್ಕುಗಳನ್ನು ಪಡೆಯುವ ಮೂಲಕ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಕಲಿಯುವ ವೇದಿಕೆ. ಮಕ್ಕಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಣ ಮೌಲ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಸಂಸತ್ ಹೆಚ್ಚು ಮಹತ್ವ ಪಡೆದಿದೆ. ಶಿಸ್ತು ಎಲ್ಲರಲ್ಲಿಯೂ ಇರಬೇಕಾದ ಒಂದು ಒಳ್ಳೆಯ ಗುಣವಾಗಿದೆ. ತರಗತಿಯ ಕೊಣೆಯಲ್ಲಿ ಮುಂದೆ ಕುಳಿತ ವಿದ್ಯಾರ್ಥಿಗಳಿಗೆ ಕಪ್ಪು ಹಲಗೆ ಮಾತ್ರ ಕಾಣಿಸಿದರೆ,ಹಿಂದೆ ಕುಳಿತ ವಿದ್ಯಾರ್ಥಿಗಳಿಗೆ ವಿಶ್ವವೆ ಕಾಣಿಸುತ್ತದೆ.ವಿದ್ಯೆಕ್ಕಿಂತ ವಿಧೇಯತೆ ವಿನಯತೆ ಮುಖ್ಯವಾಗಿದೆ. ನಿರಂತರ ಪ್ರಯತ್ನ, ಶಿಸ್ತು, ಆತ್ಮವಿಶ್ವಾಸ, ಧನಾತ್ಮಕ ಮನೋಭಾವ ಇದ್ದರೆ ಸಾಧನೆ ಮಾಡಬಹುದು.ಶಾಲೆಯ ವಿಕಾಸದಲ್ಲಿ ಪೋಷಕರ ಸಹಕಾರ ಮುಖ್ಯವಾಗಿದೆ.ಅದಕ್ಕಾಗಿ ಶಾಲಾ ಪ್ರಾಚಾರ್ಯರು ಮತ್ತು ಶಿಕ್ಷಕರು ಪೋಷಕರ ಮನೆಗಳಿಗೆ ತೆರಳಿ ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಚರ್ಚೆ ಮಾಡುತ್ತಿರುವುದು ಒಳ್ಳೆಯ ಕೆಲಸವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚುನಾಯಿತ ಪ್ರತಿನಿಧಿಗಳಿಗೆಗೆ ಪ್ರಮಾಣ ವಚನ ಬೋಧಿಸಿದ ಶಾಲಾ ಪ್ರಾಚಾರ್ಯರಾದ ಶ್ರೀಯುತ ವಿಶ್ವನಾಥ ಪಿ.ರವರು ಶಾಲಾ ಸಂಸತ್ತು ಶಾಲೆಯೊಳಗೆ ವಿದ್ಯಾರ್ಥಿ ನಾಯಕತ್ವಕ್ಕೆ ಅವಕಾಶಗಳನ್ನು ಒದಗಿಸುತ್ತದೆ, ಇದು ಅಲ್ಪಾವಧಿಯಲ್ಲಿ ಪರಿಣಾಮಕಾರಿಯಾಗಿದೆ ಮತ್ತು ವಿದ್ಯಾರ್ಥಿಗಳನ್ನು ನಿಜ ಜೀವನದ ನಾಯಕತ್ವಕ್ಕೆ ಸಿದ್ಧಪಡಿಸಲು ಸಹಾಯ ಮಾಡುತ್ತದೆ. ಪ್ರತಿ ವರ್ಷ ಹೊಸ ಶೈಕ್ಷಣಿಕ ಅವಧಿಯ ಆರಂಭದಲ್ಲಿ ವಿದ್ಯಾರ್ಥಿಗಳು ಶಾಲಾ ನಾಯಕರ ಅಭ್ಯರ್ಥಿಯಾಗಿ ತಮ್ಮನ್ನು ನಾಮನಿರ್ದೇಶನ ಮಾಡಲು ಪ್ರೋತ್ಸಾಹಿಸಲಾಗುತ್ತದೆ. ಒಂದು ಸಣ್ಣ ಪ್ರಚಾರದ ನಂತರ ಎಲ್ಲಾ ಅಭ್ಯರ್ಥಿಗಳು ತಮ್ಮ ಚುನಾವಣಾ ಭಾಷಣವನ್ನು ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಸ್ತುತಪಡಿಸುತ್ತಾರೆ. ಅವರಿಗೆ ಮತದಾನವನ್ನು ರಹಸ್ಯ ಮತದಾನದ ಮೂಲಕ ನಡೆಸಲಾಗುತ್ತದೆ ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗದ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಶಾಲಾ ನಾಯಕರನ್ನು ಮತಪತ್ರಗಳಲ್ಲಿ ಆಯ್ಕೆ ಮಾಡುತ್ತಾರೆ. ಪದಗ್ರಹಣ ದಿನದಂದು ಚುನಾಯಿತ ಸದಸ್ಯರು ತಮ್ಮ ಬ್ಯಾಡ್ಜ್‌ಗಳನ್ನು ಸ್ವೀಕರಿಸಿ , ಅಧಿಕಾರ ವಹಿಸಿಕೊಂಡಿದ್ದಾರೆ.ಎಂದು ಚುನಾವಣೆಯ ಕಾರ್ಯವೈಖರಿಯ ಬಗ್ಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುತ ಎಂ.ಬಿ.ಶಿವಕುಮಾರರವರು ಬ್ಯಾಡ್ಜ್‌ಗಳನ್ನು ಚುನಾಯಿತ ಪ್ರತಿನಿಧಿಗಳಿಗೆ ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕ ಪ್ರಶಾಂತ ಕುಬಸದ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕು ಸಾನ್ವಿ ಮತ್ತು ಸಂಗಡಿಗರು ಪ್ರಾರ್ಥಿಸಿ, ವರ್ಷ ಸ್ವಾಗತಿಸಿ, ಧನುಷ್ ವಂದಿಸಿ ,ಪ್ರಣತಿ ಮತ್ತು ಹೇಮಾ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post