ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕು ಮಟ್ಟದಲ್ಲಿ ಮೂಲಭೂತ ಸೌಲಭ್ಯದೊಂದಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಮಹತ್ವದ ಸಂಸ್ಥೆಯಾಗಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಆರ್. ಮಂಜುನಾಥ್ ಪ್ರಶಂಸಿಸಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಶಿಕಾರಿಪುರದ ವತಿಯಿಂದ ಆಯೋಜಿಸಲಾಗಿದ್ದ ಅಂಗಸಂಸ್ಥೆಗಳ ವಾರ್ಷಿಕ ಕುಮದ್ವತಿ ಸಾಂಸ್ಕೃತಿಕ ಉತ್ಸವ – 2024 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕು ಮಟ್ಟದಲ್ಲಿ ಮೂಲಭೂತ ಸೌಲಭ್ಯವನ್ನು ಹೊಂದಿದೆ. ಉತ್ತಮ ಶಿಕ್ಷಣ ನೀಡುತ್ತಿರುವ ಮಹತ್ವದ ವಿದ್ಯಾಸಂಸ್ಥೆಯಾಗಿದೆ. ಶಿಕ್ಷಕರು ಶಾಲೆಗಳಲ್ಲಿ ಎಷ್ಟೇ ಓದಿಸಬಹುದು. ಆದರೆ, ಮನೆಯಲ್ಲಿ ಅಮ್ಮ ಹೇಳಿಕೊಡುವ ವಿದ್ಯೆ ಬಹಳ ಪ್ರಮುಖವಾದದ್ದು. ಓದುವಾಗ ಮಕ್ಕಳಿಗೆ ಟಿವಿ ಧಾರವಾಹಿಗಳ ಗೀಳನ್ನು ಕಡಿಮೆ ಮಾಡಿ ಓದಿನ ಕಡೆ ಹೆಚ್ಚು ಒಲವನ್ನು ಮೂಡಿಸಬೇಕಾಗಿದೆ ಎಂದರು.
ಸಪೋಷಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಓದಿನ ಸಂದರ್ಭದಲ್ಲಿ ಕಷ್ಟದ ಅರಿವನ್ನು ಮೂಡಿಸಬೇಕು. ಮಗು ಶಾಲೆಯಲ್ಲಿ ಮಾತ್ರವಲ್ಲದೇ ಮನೆಯಲ್ಲಿ ಸಾಂಸ್ಕೃತಿಕವಾಗಿ ಬೆಳೆಯುವಂತೆ ಮಾಡುವುದು ಶಿಕ್ಷಕರ ಮತ್ತು ಪೋಷಕರ ಪ್ರಮುಖ ಕರ್ತವ್ಯವಾಗಿದೆ. ಶಿಕಾರಿಪುರವು ಡಾ.ಜಿ.ಎಸ್.ಶಿವರುದ್ರಪ್ಪರಂತಹ ರಾಷ್ಟ್ರಕವಿಗಳನ್ನು. ವಚನಕಾರರನ್ನು ಶಿವಶರಣರನ್ನು ರಾಷ್ಟಕ್ಕೆ ನೀಡಿದ ಶಿವಶರಣ ತಪೋಭೂಮಿಯಾಗಿದೆ. ಹಾಗಯೇ ಶಿಕ್ಷಣ ಮತ್ತು ಇತರೆ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುತ್ತಿದೆ ಎಂದು ತಿಳಿಸಿದರು.
Also read: ಜೋಗ ಜಲಪಾತಕ್ಕೆ ಹೋಗುವ ಪ್ಲಾನ್ ಮಾಡ್ತಿದಿರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಲೋಕೇಶಪ್ಪ ಮಾತನಾಡಿ, ಕೆಲವು ವರ್ಷಗಳ ಹಿಂದೆ ಮಕ್ಕಳ ಕೈಯಲ್ಲಿ ಗೊಂಬೆ ಕೊಡುವ ಪದ್ಧತಿ ಇತ್ತು. ಆದರೆ ಇಂದು ಮೊಬೈಲ್ ಕೊಡುವ ಸಂಪ್ರದಾಯ ಬೆಳೆಯುತ್ತಿದೆ. ಇದರಿಂದ ಮಕ್ಕಳಲ್ಲಿ ಹಠ, ಸಿಟ್ಟು, ಮಾನಸಿಕ ಉದ್ವೇಗಗಳು ಹೆಚ್ಚಾಗುತ್ತಿವೆ. ಇಂದು ಮಕ್ಕಳಲ್ಲಿ ಇನ್ನೊಬ್ಬರೊಂದಿಗೆ ಸ್ಪಂದಿಸುವ ನೈತಿಕ ಗುಣಗಳು ಕಡಿಮೆಯಾಗಿ ಕೇವಲ ವೈಯಕ್ತಿಕ ಹಿತಾಸಕ್ತಿಗಳ ಕಡೆಗೆ ಗಮನ ಹರಿಸುವಂತಾಗುತ್ತಿರುವುದು ದುರಂತ ಎಂದರು.
ಮಾನವೀಯ ಮೌಲ್ಯಗಳು ಕಡಿಮೆಯಾಗಿ ಆನ್ಲೈನ್, ಡಿಜಿಟಲ್’ನಂತಹ ಸಂಪರ್ಕಗಳಿಗೆ ಮೊನೇಷನ್ ಕಟ್ಟಿ ನೀಡುತ್ತೇವೆ. ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅದೇ ಹಣದಿಂದ ತಂದೆ ತಾಯಿಯರನ್ನು ವೃದ್ಧಾಶ್ರಮದಲ್ಲಿಟ್ಟು ನೋಡಿಕೊಳ್ಳುವ ಮನಸ್ಥಿತಿಗೆ ಬಂದಿದ್ದಾರೆ. ಇಂದಿನ ಜಗತ್ತು ಬದಲಾಗುತ್ತಿರುವುದನ್ನು ಹೋಗಲಾಡಿಸಬೇಕಾದರೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಗುವನ್ನು ನಿರಂತರ ತೊಡಗಿಸಬೇಕು ಎಂದು ತಿಳಿಸಿದರು.
ಶಿವಮೊಗ್ಗದ ಝಾನ್ಸಿ ಕಿಯಾ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್. ಸುಭಾಷ್ ಮಾತನಾಡಿ, ಮಗುವಿನ ಮುಂದಿನ ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ಮೌಲ್ಯಗಳನ್ನು ಬೆಳೆಸುವುದು ಪ್ರಮುಖವಾಗಿದೆ. ಶಿಕ್ಷಣ ಎಂಬುದು ಮಗು ಕೇಂದ್ರಿತ ಎಂಬುದಕ್ಕಿಂತ ಸಮಗ್ರ ಶಿಕ್ಷಣ ಎಂಬುದು ಇಂದಿನ ಸವಾಲಾಗಿದೆ. ಮಕ್ಕಳು ಕೇವಲ ಶಿಕ್ಷಣವನ್ನು ಪಡೆದರೆ ಸಾಲದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಿಕ್ಷಣದಲ್ಲಿನ ಸವಾಲುಗಳು ಮತ್ತು ಬದ್ಧತೆಯನ್ನು ಎದುರಿಸುವ ಜಾಣ್ಮೆಯನ್ನು ಕಲಿಯುವುದರಿಂದ ಮಾತ್ರ ಭವಿಷ್ಯದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸಲು ಶಿಕ್ಷಣ ಸಹಾಯವನ್ನು ಮಾಡುತ್ತದೆ ಎಂದು ತಿಳಿಸಿದರು.
ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ. ಶಿವಕುಮಾರ್ ಅವರು ಬಹುಮಾನವನ್ನು ನೀಡುವುದರ ಮೂಲಕ ಪ್ರೋತ್ಸಾಹ ನೀಡಿದರು.
ಶಿಕಾರಿಪುರದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಹಾಗೂ ಆಡಳಿತ ಮಂಡಳಿ ಪ್ರತಿನಿಧಿಗಳು, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಪ್ರಾಂಶುಪಾಲ ಡಾ.ಜಿ.ಎಸ್. ಶಿವಕುಮಾರ್ ಆಶಯನುಡಿಗಳನ್ನು ಆಡಿದರು. ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ ಉಪಪ್ರಾಚಾರ್ಯ ಎಚ್.ಡಿ. ಪ್ರಶಾಂತ್ ಸ್ವಾಗತಿಸಿದರು.
ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ ಶಿಕ್ಷಕಿ ಸಂಗೀತಾ ಗೊಂದಿ ನಿರೂಪಿಸಿದರು.
ಸಂಸ್ಥೆಯ ಸಮನ್ವಯಾಧಿಕಾರಿಗಳಾದ ಕೆ. ಕುಬೇರಪ್ಪ, ಸಂಸ್ಥೆಗಳ ಮುಖ್ಯಸ್ಥರು, ಪ್ರಾಚಾರ್ಯರು, ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ವೇದಿಕೆಯ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post