ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ದೇಶದಲ್ಲಿ ಕಾಂಗ್ರೆಸ್ ಗೆಲುವು ಸಾಧ್ಯವೇ ಇಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಉಸಿರಾಡುತ್ತಿದೆ. ಆ ಪಕ್ಷದ ಕೆಲ ನಾಯಕರು ಅನಾವಶ್ಯಕ ಟೀಕೆಗಳನ್ನು ಮಾತನಾಡುತ್ತಿದ್ದಾರೆ. ಇದಕ್ಕೆ ಉತ್ತರ ಕೊಡಲು ಸರಳ ಸಜ್ಜನಿಕೆ, ಪ್ರಾಮಾಣಿಕ ವ್ಯಕ್ತಿ ಡಿ.ಎಸ್. ಅರುಣ್ ಅವರಿಗೆ ಮತ ನೀಡಿ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಅವರು ಇಂದು ಭಾರತೀಯ ಜನತಾ ಪಾರ್ಟಿ ಶಿಕಾರಿಪುರ ಮಂಡಳದ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಧಾನಪರಿಷತ್ ಚುನಾವಣಾ ಪ್ರಚಾರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪುರಸಭೆ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಡಿ. ಎಸ್. ಅರುಣ್ ಅವರು ಮೊದಲನೇ ಸುತ್ತಿನಲ್ಲೇ ವಿಜಯಿಯಾಗುತ್ತಾರೆ. ಅವರು ಅತೀ ಹೆಚ್ಚು ಮತಗಳಿಂದ ಜಯ ಸಾಧಿಸಲು ನಮ್ಮ ಪಕ್ಷದ ಬೆಂಬಲಿತ ಸದಸ್ಯರು, ಪಟ್ಟಣ ಪಂಚಾಯಿತಿ ಸದಸ್ಯರುಗಳು, ಅನ್ಯಪಕ್ಷದ ಮತ್ತು ಪಕ್ಷೇತರ ಅಭ್ಯರ್ಥಿಗಳು ನಮ್ಮ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಬೇಕು ಎಂದರು.
ರಾಜ್ಯದಲ್ಲಿ ನಾವು 15 ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ. ಆದ್ದರಿಂದ ಪರಿಷತ್ ಸದಸ್ಯರ ಸಂಖ್ಯೆ ಬಿಜೆಪಿ ಪಕ್ಷ ಹೆಚ್ಚಿಸಲಿದೆ. ತಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕಾರಿಪುರಕ್ಕೆ ಮತ್ತು ರಾಜ್ಯಕ್ಕೆ ನೀಡಿದ ಅನೇಕ ಜನಪರ ಕಾರ್ಯಗಳು ಮತ್ತು ಅಭಿವದ್ಧಿ ಯೋಜನೆಗಳಿಂದ ನಾವು ಗೆಲುವು ಸಾಧಿಸಲು ಸಾಧ್ಯ. ನಮ್ಮ ಪಕ್ಷವನ್ನು ರಾಜ್ಯದಲ್ಲಿ ಬಲಪಡಿಸಲು ಮತ್ತು 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು, ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಾಗುವುದು ಎಂದರು.
ಸಂಸದ ರಾಘವೇಂದ್ರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಭಿನ್ನ ಶೈಲಿಯಲ್ಲಿ ಜನರಿಗೆ ಅಭಿವೃದ್ಧಿ ಕಾರ್ಯಕ್ರಮವನ್ನು ಮಾಡಿದೆ. ರಾಜ್ಯದಲ್ಲಿ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಅನೇಕ ಜನಪರ ಕೆಲಸವನ್ನು ಮಾಡಿದ್ದಾರೆ. ಅಭಿವೃದ್ಧಿಗಾಗಿ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಅರುಣ್ ಅವರನ್ನು ಭಾರಿ ಅಂತರದಲ್ಲಿ ಗೆಲ್ಲಿಸೋಣ, ಎಲ್ಲರೂ ಒಟ್ಟಿಗೆ ಸೇರಿ ಪಕ್ಷವನ್ನು ಭಲ ಪಡಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಹರತಾಳು ಹಾಲಪ್ಪ, ಅಶೋಕ್ ನಾಯ್ಕ, ಎಸ್. ರುದ್ರೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ. ಡಿ. ಮೇಘರಾಜ್, ಅಭ್ಯರ್ಥಿ ಡಿ. ಎಸ್. ಅರುಣ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಎಸ್. ದತ್ತಾತ್ರಿ, ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷ ರೇವಣಪ್ಪ, ಶಿಕಾರಿಪುರ ತಾಲ್ಲೂಕು ಅಧ್ಯಕ್ಷ ವೀರೇಂದ್ರ ಪಾಟೀಲ್, ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಪ್ಪ ನಿಂಬೆಗುಂದಿ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post