ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸ್ವಾಮಿ ವಿವೇಕಾನಂದರು ಭಾರತ ಕಂಡ ಒಬ್ಬ ಶ್ರೇಷ್ಠ ಆಧ್ಯಾತ್ಮಿಕ ಸಂತರು, ಶಿಕ್ಷಣ ತಜ್ಞರು, ಯುವ ಜನಾಂಗಕ್ಕೆ ಸ್ಪೂರ್ತಿಯ ಸೆಲೆಯಾಗಿದ್ದು, ಯುವಕರು ದೇಶವನ್ನು ಮುನ್ನಡೆಸಲು ಶಕ್ತಿವಂತರಾಗಬೇಕು ಎಂದು ಸದಾ ಬಯಸುತ್ತಿದ್ದರು ಎಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಪ್ರತಿನಿಧಿಗಳು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಆದ ಡಾ. ಜಿ.ಎಸ್. ಶಿವಕುಮಾರ್ ಹೇಳಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಎಲ್ಲಾ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ರಾಷ್ಟ್ರೀಯ ಯುವ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, 2047ರ ವೇಳೆಗೆ ಭಾರತ ಹೇಗೆ ಅಭಿವೃದ್ಧಿ ಹೊಂದಿರಬೇಕು ಎಂಬುದನ್ನು ಇಂದಿನ ಯುವ ಜನಾಂಗ ಅರಿಯಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರ ಕನಸಿನ ಭಾರತವೆಂದರೆ ಸ್ವಾವಲಂಬಿ, ಅಭಿವೃದ್ಧಿ ಹೊಂದಿದ ‘ವಿಕಸಿತ ಭಾರತ’ವನ್ನು ನಿರ್ಮಿಸುವುದು, ಇದು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಬಲವಾಗಿರಬೇಕು. ಈ ಕನಸಿನಲ್ಲಿ ಆತ್ಮವಿಶ್ವಾಸ, ತಂತ್ರಜ್ಞಾನ, ನವೋದ್ಯಮ, ಕಲೆ, ಕೃಷಿ ಮತ್ತು ಯುವಜನರ ಶಕ್ತಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಅಲ್ಲದೇ, ಆತ್ಮ ನಿರ್ಭರ ಭಾರತ, ಬ್ರಾಂಡ್ ಇಂಡಿಯಾ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಕೃಷಿ, ಮಹಿಳೆಯರ ಸಬಲೀಕರಣ, ನೈಸರ್ಗಿಕ ಸಂಪನ್ಮೂಲಗಳು, ಯುವಶಕ್ತಿ, ಪ್ರಜಾಪ್ರಭುತ್ವ ಮತ್ತು ಜ್ಞಾನದಂತಹ ಪ್ರಮುಖ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುವುದು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಯುವಶಕ್ತಿ ಮುನ್ನಡೆಯಬೇಕು ಎಂದರು.
ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ. ವೀರೇಂದ್ರ ಅವರು ಮಾತನಾಡಿ, ದಿನಕ್ಕೊಮ್ಮೆಯಾದರೂ ನಿಮ್ಮ ಜೊತೆ ನೀವು ಮಾತನಾಡಿಕೊಳ್ಳಿ. ಇಲ್ಲದಿದ್ದರೆ, ಈ ಜಗತ್ತಿನಲ್ಲಿ ಒಬ್ಬ ಬುದ್ಧಿವಂತ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವನ್ನು ನೀವು ಕಳೆದುಕೊಳ್ಳಬಹುದು ಎಂದರು.
ಸ್ವಾಮಿ ವಿವೇಕಾನಂದರವರು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಭಾರತದ ಸನಾತನ ಧರ್ಮ ಏನು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟರು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಕುಮದ್ವತಿ ಕೇಂದ್ರೀಯ ವಿದ್ಯಾಲಯ ವಿದ್ಯಾರ್ಥಿಗಳಾದ ಮನ್ವಿತ್ ಮತ್ತು ಯುಕ್ತ ಅವರುಗಳು ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಕುರಿತು ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಪರ್ವೀಜ್ ಅಹಮದ್ ಸ್ವಾಗತಿಸಿ, ಚಂದ್ರಶೇಖರ್ ವಂದಿಸಿದರು. ಜಿ ಶಿವರಾಜ್ ನಿರೂಪಣೆ ಮಾಡಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಗಳ ಎಲ್ಲಾ ಮುಖ್ಯಸ್ಥರಾದ ಕೆ. ಕುಬೇರಪ್ಪ, ವಿಶ್ವನಾಥ್, ರವೀಂದ್ರ, ವಿದ್ಯಾಶಂಕರ್ ಹಾಗೂ ಪ್ರಶಾಂತ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















