ಶಿವಮೊಗ್ಗ: ಅ.10ರ ನಾಳೆಯಿಂದ ನವರಾತ್ರಿ ಆರಂಭವಾಗುವ ಹಿನ್ನೆಲೆಯಲ್ಲಿ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಅ.25ರವರೆಗೂ ಶರನ್ನವರಾತ್ರಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಅ.10ರಂದು ಬೆಳಿಗ್ಗೆ 6:30ಕ್ಕೆ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಪ್ರತಿನಿತ್ಯ, ಚಂಡಿಕಾಯಾಗ, ಚಂಡಿಕಾಪಾರಾಯಣ, ಸಹಸ್ರನಾಮಾರ್ಚನೆ, ಪೂಜೆ ಮತ್ತು ಪೂರ್ಣಾಹುತಿ ನಡೆಯಲಿದೆ.
ಈ ನಿಮಿತ್ತ 10ರಿಂದ ಪ್ರತಿದಿನ ಸಂಜೆ 6ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಇದನ್ನು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದ ಸುಪ್ರಸಿದ್ದ ಗಾಯಕ ಸುದರ್ಶನ್ ಜೀ ಉದ್ಘಾಟಿಸಲಿದ್ದು, ಅತಿಥಿಗಳಾಗಿ ವಿದ್ವಾನ್ ವಿಷ್ಣುಮೂರ್ತಿ ಉಡುಪ, ದೇವಸ್ಥಾನ ಸಮಿತಿಯ ಅಧ್ಯಕ್ಷ ಎನ್. ಉಮಾಪತಿ ಆಗಮಿಸುವರು.
10ರಂದು ಸಂಜೆ ಸುದರ್ಶನ್ ಮತ್ತು ತಂಡದವರಿಂದ ದಿವ್ಯಸತ್ಸಂಗ ನಡೆಯಲಿದೆ. 11ರಂದು ಗರ್ತಿಕೆರೆ ರಾಘಣ್ಣ ಮತ್ತು ತಂಡದಿಂದ ಸುಗಮ ಸಂಗೀತ, ಭಕ್ತಿಗೀತೆ. 12ರಂದು ಕೆ.ಎಸ್. ಶ್ರೀವತ್ಸ ತಂಡದಿಂದ ಕೊಳಲುವಾದನ, 13ರಂದು ಎಚ್.ಎಸ್. ನಾಗರಾಜ್ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀ ಯ ಸಂಗೀತ, 14ರಂದು ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಕುಮಾರಸ್ವಾಮಿ ಮತ್ತು ತಂಡದವರಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ.
15ರಂದು ಶಾರದಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ನಾದಕುಸುಮಾಂಜಲಿ, 16ರಂದು ಐನಬೈಲ್ ಪರಮೇಶ್ವರ ಹೆಗಡೆ ನೇತೃತ್ವದ ತಂಡದಿಂದ ಯಕ್ಷಗಾನ-ತಾಳಮದ್ದಳೆ, 17 ರಂದು ನಗರದ ಬಿ.ಕೆ. ಜಯಲಕ್ಷ್ಮೀ ಮತ್ತು ವೃಂದದವರಿಂದ ವೀಣಾ ವೈಭವ, 18ರಂದು ಡಾ. ಕೆ.ಎಸ್. ಪವಿತ್ರಾ ಮತ್ತು ತಂಡದವರಿಂದ ಕವಿ ಕಂಡ ದೇವಿ ನೃತ್ಯ ಕಾರ್ಯಕ್ರಮ ನಡೆಯಲಿದೆ.
19ರಂದು ರಾಮನ್ ಸಹೋದರಿಯರಿಂದ ವೀಣಾ ಮತ್ತು ಗಿಟಾರ್ ವಾದನ, 20ರಂದು ಯಕ್ಷಾನುಗ್ರಹ ಸಂವರ್ಧನಾ ಸಭಾದವರಿಂದ ಯಕ್ಷಗಾನ, 21ರಂದು ಹೊಸಳ್ಳಿ ವೆಂಕಟ್‌ರಾಮ್ ತಂಡದವರಿಂದ ವಯೋಲಿನ್ ವಾದನ, 22ರಂದು ಕೋಣಂದೂರಿನ ಕೆ.ಜಿ. ಶಶಿಕುಮಾರ್ ತಂಡದವರಿಂದ ಭಕ್ತಭಾವಾಂಜಲಿ ಮತ್ತು 23ರಂದು ಸಹಚೇತನಾ ನಾಟ್ಯಾಲಯದವರಿಂದ ಭರತನಾಟ್ಯ ನಡೆಯಲಿದೆ.
24ರಂದು ಮಧ್ಯಾಹ್ನ ಶತಚಂಡಿಕಾಯಾಗವು ನಡೆಯಲಿದೆ. ಸಂಜೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು 6:30ಕ್ಕೆ ಹರಿದಾಸ ಗಣಪತಿ ಹೆಗಡೆ ಇವರಿಂದ ಹರಿಕೀರ್ತನೆ ಹಾಗೂ 25ರಂದು ಸಂಜೆ 4:30ಕ್ಕೆ ವಿವಿಧ ಜಾನಪದ ಕುಣಿತಗಳೊಂದಿಗೆ, ಕೇರಳದ ಪಂಚವಾದ್ಯ ದೊಂದಿಗೆ ಮೂಕಾಂಬಿಕಾ ದೇವಿಯ ಮೆರವಣಿಗೆ ಮತ್ತು ರಾಜಬೀದಿ ಉತ್ಸವ ನಡೆಯಲಿದೆ. ರವೀಂದ್ರನಗರ ದೇವಸ್ಥಾನದಿಂದ ಹೊರಡುವ ಮೆರವಣಿಗೆಯು ಸವಳಂಗ ರಸ್ತೆ, ಕುವೆಂಪು ರಸ್ತೆ, ದುರ್ಗಿಗುಡಿ, ನೆಹರೂ ರಸ್ತೆ, ಗಾಂಧೀಬಜಾರ್ ಮೂಲಕ ಭೀಮೇಶ್ವರ ದೇವಸ್ಥಾನ ತಲುಪಿ ತುಂಗಾನದಿಯಲ್ಲಿ ವಿಸರ್ಜನೆಗೊಳ್ಳಲಿದೆ.
ದೇವಸ್ಥಾನದ ಮುಖ್ಯಅರ್ಚಕ ಅ.ಪ. ರಾಮಭಟ್ಟ ಅವರ ನೇತೃತ್ವದಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
Discussion about this post