ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ: ಬರುವ ಜುಲೈ 26ರಿಂದ ಕುವೆಂಪು ವಿಶ್ವವಿದ್ಯಾಲಯದ ಪದವಿ, ಸ್ನಾತಕೋತ್ತರ ಪದವಿ, ಮತ್ತು ಬಿ.ಎಡ್ ಆಫ್‌ಲೈನ್ ತರಗತಿಗಳು ಪುನರಾರಂಭಗೊಳ್ಳಲಿದ್ದು, ವಿದ್ಯಾರ್ಥಿಗಳು ಕನಿಷ್ಠ ಪ್ರಥಮ ಡೋಸ್ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದು ಹಾಜರಾಗಲು ಸೂಚನೆ ನೀಡಲಾಗಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಕುಲಸಚಿವರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಕರ್ನಾಟಕ ಸರ್ಕಾರದ ನಿರ್ದೇಶನದ ಮೇರೆಗೆ ಜುಲೈ 26ರ ಸೋಮವಾರದಿಂದ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಭೌತಿಕ ತರಗತಿಗಳು ಪುನರಾರಂಭಗೊಳ್ಳಲಿದ್ದು, ವಿದ್ಯಾರ್ಥಿಗಳು ಕೋವಿಡ್-19 ಸಂಬಂಧ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿರುವ ಕುವೆಂಪು ವಿಶ್ವವಿದ್ಯಾಲಯ, ತರಗತಿಗೆ ಹಾಜರಾಗುವಾಗ ಕನಿಷ್ಠ ಪ್ರಥಮ ಡೋಸ್ ಲಸಿಕೆ ಪಡೆಯುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಭೌತಿಕ ಅಂತರವನ್ನು ಕಾಯ್ದುಕೊಳ್ಳುವುದು, ಮತ್ತು ಸಾನಿಟೈಸರ್ ಬಳಸುವ ಮೂಲಕ ಶುಚಿತ್ವ ಕಾಪಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.
ತರಗತಿ ಪುನರಾರಂಭದ ತಯಾರಿಯ ಕುರಿತು ಮಾತನಾಡಿರುವ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ‘ಯುಜಿಸಿ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ವಿವಿ ತರಗತಿಗಳನ್ನು ಪ್ರಾರಂಭಿಸಲಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ಯಾಂಪಸ್ ಅನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ನಿರ್ಭೀತರಾಗಿ ಹಾಗೂ ಜಾಗೃತರಾಗಿ ತರಗತಿಗಳಿಗೆ ಹಾಜರಾಗಬಹುದು’ ಎಂದಿದ್ದಾರೆ.










Discussion about this post