ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶ್ರೀವಿಜಯ ಕಲಾನಿಕೇತನದಿಂದ ಆಗಸ್ಟ್ 7 ರ ಶನಿವಾರ ಸಂಜೆ 6 ಗಂಟೆಗೆ ರಾಜೇಂದ್ರನಗರದ ಪವಿತ್ರಾಂಗಣದಲ್ಲಿ ಪುರಂದರ ರಚನೆಗಳನ್ನು ಆಧರಿಸಿದ ನವರಸ ಧಾರೆ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವೈದ್ಯ ಸಹೋದರಿಯರು ಮತ್ತು ಕಲಾವಿದೆಯರಾದ ಡಾ. ಕೆ.ಎಸ್. ಚೈತ್ರ ಮತ್ತು ಡಾ. ಕೆ.ಎಸ್. ಶುಭ್ರತಾ ಅವರು ನವರಸ ಧಾರೆಯನ್ನು ಪ್ರಸ್ತುತ ಪಡಿಸುತ್ತಿದ್ದಾರೆ.
ನಟ್ಟುವಾಂಗದಲ್ಲಿ ಡಾ. ಕೆ.ಎಸ್. ಪವಿತ್ರ, ಹಾಡುಗಾರಿಕೆಯಲ್ಲಿ ವಿದ್ವಾನ್ ವಿನಯ್ ರಾಜಮಾನ್ಯ, ಮೃದಂಗದಲ್ಲಿ ವಿದ್ವಾನ್ ಜಿ.ಎಸ್. ನಾಗರಾಜ್ ಮತ್ತು ಕೊಳಲಿನಲ್ಲಿ ವಿದ್ವಾನ್ ರಾಕೇಶ್ ಸುಧೀರ್ ಅವರು ಪಾಲ್ಗೊಳ್ಳಲಿದ್ದಾರೆ.
ಸುಬ್ಬಯ್ಯ ದಂತ ವೈದ್ಯಕೀಯ ವಿದ್ಯಾಲಯದ ನಿರ್ದೇಶಕರು ಮತ್ತು ಲೇಖಕಿಯೂ ಆದ ವಿನಯಾ ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಡಾ. ಕೆ.ಆರ್. ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ದಾಸ ಸಾಹಿತ್ಯದ ವಿವರಣೆ:
ದಾಸ ಸಾಹಿತ್ಯ ನಡುಗನ್ನಡ ಕಾಲದಲ್ಲಿ ಆರಂಭವಾಗಿ ಸುಮಾರು ೨೦ನೆಯ ಶತಮಾನದ ವರೆಗೂ ಬೆಳೆದು ಬಂದ ಕನ್ನಡ ಸಾಹಿತ್ಯ ಪ್ರಕಾರ. ಮಧ್ಯ ಯುಗದ ಕರ್ನಾಟಕದ ಚರಿತ್ರೆಯಲ್ಲಿ ಸಾಮಾಜಿಕ ಆಂದೋಲನದ ದೃಷ್ಠಿಯಿಂದ ಹರಿದಾಸರು ವಹಿಸಿದ ಪಾತ್ರ ಬಹುಮುಖ್ಯದ್ದಾಗಿದೆ.
ದಾಸ ಸಾಹಿತ್ಯದ ಮುಖ್ಯ ಉದ್ದೇಶ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಧರ್ಮ ಪ್ರಚಾರ ಮತ್ತು ಸಮಾಜ ಸುಧಾರಣೆ ಮಾಡುವುದು. ಈ ಕಾರ್ಯಕ್ಕೆ ಹರಿದಾಸರು ಉಪಯೋಗಿಸಿದ ಮಾಧ್ಯಮ ಸಂಗೀತ ಮತ್ತು ನೃತ್ಯದ್ದಾಗಿತ್ತು. ದಾಸರೆಂದರೆ ಪುರಂದರ ದಾಸರಯ್ಯ ಎಂದು ತಮ್ಮ ಗುರುಗಳಿಂದಲೇ ಹೊಗಳಿಸಿಕೊಂಡ ದಾಸಶ್ರೇಷ್ಠರು ಪುರಂದರದಾಸರು.
ಸಾಹಿತ್ಯ ಸಂಗೀತ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ, ನೀಡಿದ ಬೆಳಕು ಅದ್ಭುತವಾದದ್ದು. ಪುರಂದರ ವಿಠ್ಠಲ ಎಂಬ ಅಂಕಿತದಲ್ಲಿ ತಮ್ಮ ಕೀರ್ತನ ಕೈಂಕರ್ಯವನ್ನು ನೆರವೇರಿಸಿದ ಪುರಂದರ ದಾಸರು ಬರೆದ ಕೀರ್ತನೆಗಳನ್ನು ಪುರಂದರ ಉಪನಿಷತ್ ಎಂದು ಗೌರವಿಸಲಾಗಿದೆ.
ಪುರಂದರದಾಸರ ಸಾಹಿತ್ಯ ಕೃಷಿ ಬಹಳ ವಿಸ್ತಾರವಾದದ್ದು. ಆಗಿನ ಕಾಲದ ಜನಜೀವನದ ಹೊಳಹುಗಳನ್ನು ಇವರ ರಚನೆಗಳಲ್ಲಿ ನಾವು ಕಾಣಬಹುದು. ತನ್ನ ಕಾಲದ ಸಮಾಜದ ಮೂಢನಂಬಿಕೆಗಳನ್ನು, ಆಡಂಬರಗಳನ್ನು, ತೋರಿಕೆಯ ನಿಷ್ಠೆಯನ್ನು, ಅಂಧಶ್ರದ್ಧೆಯನ್ನು, ಧಾರ್ಮಿಕ ಮೌಢ್ಯವನ್ನು ಕೃತಿಗಳಲ್ಲಿ ಚೆನ್ನಾಗಿ ಬಯಲಿಗೆಳೆದಿದ್ದಾರೆ.
ಪುರಂದರ ದಾಸರ ಕೃತಿಗಳನ್ನು ಗಮನಿಸಿದಾಗ ಅವರು ಸಂಗೀತ ನೃತ್ಯವನ್ನು ಮೂರು ಮಟ್ಟಗಳಲ್ಲಿ ನೋಡುವುದು ಕಂಡುಬರುತ್ತದೆ. ಜೀವನ ಪ್ರೀತಿ ಹರಿಭಕ್ತಿ ಮತ್ತು ಮುಕ್ತಿ ಸಾಧನೆ. ಪುರಂದರ ದಾಸರ ರಚನೆಗಳಲ್ಲಿ ಕೆಲವನ್ನು ಆಯ್ದು ಅವುಗಳಲ್ಲಿ ವಿವಿಧ ರಸಗಳ ಸೆಲೆಯನ್ನು ಗುರುತಿಸಿ ಅದಕ್ಕೊಂದು ಮೂರ್ತರೂಪ ಕೊಡುವ ಪ್ರಯತ್ನ ನವರಸ ಧಾರೆ.
ಈ ಕಾರ್ಯಕ್ರಮವು ಕೋವಿಡ್ ನಿಯಮಗಳ ಅನುಸಾರವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ನಡೆಯಲಿದ್ದು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀವಿಜಯದ ಮುಖ್ಯಸ್ಥೆ ಡಾ. ಕೆ.ಎಸ್. ಪವಿತ್ರಾ ಅವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post