ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವದ ಅಂಗವಾಗಿ ಸುಮಾರು 12 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ನಡೆದ ‘ಅಮೃತ ನಡಿಗೆ’ ದಾಖಲೆ ಬರೆದಿದ್ದು, ಮಲೆನಾಡಿಗರ ಮನಗೆದ್ದಿದೆ.
36 ವಿವಿಧ ವಿದ್ಯಾಸಂಸ್ಥೆಯ 12ಕ್ಕೂ ಅಧಿಕ ಮಕ್ಕಳಿಂದ ನಡೆದ ಅಮೃತ ನಡಿಗೆ ನಗರದಲ್ಲಿ ಸುಮಾರು 2 ಗಂಟೆಗಳ ಕಾಲ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಹಾದು ಹೋಯಿತು.
ನಗರದ ವಿವಿಧ ಭಾಗಗಳಿಂದ ಸುಮಾರು 6 ತಂಡಗಳಲ್ಲಿ ಬಂದ ವಿದ್ಯಾರ್ಥಿಗಳು ಅಮೃತ ನಡಿಗೆಯ ಮೂಲಕ ಗಮನ ಸೆಳೆದರು. ಈ ಅಮೃತ ನಡಿಗೆಯಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಪ್ರೌಢ ಮತ್ತು ಪದವೀ ಶಾಲೆಗಳ ಮಕ್ಕಳು ಅತ್ಯಂತ ಶಿಸ್ತಿನಿಂದ ಎನ್‍ಇಎಸ್ ಸಂಸ್ಥೆಯ ಪರವಾಗಿ ಘೋಷಣೆಗಳನ್ನು ಕೂಗಿ ನಮ್ಮ ಶಾಲೆ, ನಮ್ಮ ಸಂಸ್ಥೆ, ನಮ್ಮ ಹೆಮ್ಮೆ ಎಂದು ಬಣ್ಣಿಸಿದರು. ಸುಮಾರು ಮೂರು ಕಿ.ಮೀ. ಉದ್ದಕ್ಕೂ ವಿದ್ಯಾರ್ಥಿಗಳ ಸಾಲಿತ್ತು. ಅತ್ಯಂತ ಆಕರ್ಷಕವಾದ ಮೆರವಣಿಗೆ ಇದಾಗಿತ್ತು. ಎನ್‍ಇಎಸ್ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ವಿದ್ಯಾರ್ಥಿಗಳು ಹೀಲಿಯಂ ಬೆಲೂನ್ ಆಕಾಶಕ್ಕೆ ಹಾರಿಸಿ ಸಂಭ್ರಮಿಸಿದರು. ಅಕ್ಷರಶಃ ಹಬ್ಬದ ವಾತಾವರಣ ಅಲ್ಲಿತ್ತು. ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನಡೆಸಿದರು.
ವಿದ್ಯಾರ್ಥಿಗಳೆಲ್ಲ ವಿವಿಧ ಘೋಷಣೆಗಳನ್ನು ಕೂಗುತ್ತ ಸಂತಸದಿಂದ ಸಾಗಿದರು. ಈ ಅಮೃತ ನಡಿಗೆಯಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸೇರಿದಂತೆ ಎಲ್ಲಾ ಶಾಖೆಗಳ ಅಧ್ಯಾಪಕರು, ಸಿಬ್ಬಂದಿ ವರ್ಗದವರು ಸೇರಿದಂತೆ ಸಾವಿರಾರು ಜನರು ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದರು.
ಎನ್ಇಎಸ್ ಸಂಸ್ಥೆಯ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಲೋಗೋ ಬಿಡುಗಡೆ ಮಾಡಿ ಮಾತನಾಡಿ, ಇತಿಹಾಸದಲ್ಲಿ ನೆನಪಿಡುವ ದಿನ ಇದಾಗಿದೆ. ರಾಷ್ಟ್ರೀಯ ಶಿಕ್ಷಣ ಸಮಿತಿ ಗ್ರಾಮೀಣ ಮಟ್ಟಕ್ಕೂ ಶಿಕ್ಷಣವನ್ನು ವಿಸ್ತರಿಸಬೇಕು ಎಂಬ ಹಿನ್ನೆಲೆಯಲ್ಲಿ ಕಳೆದ 75 ವರ್ಷಗಳಿಂದ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಾ ಬಂದಿದೆ. ಲಕ್ಷಾಂತರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಲ್ಲಿ ಕಲಿತು ಉನ್ನತ ಸ್ಥಾನಗಳಲ್ಲಿದ್ದಾರೆ. ಅಮೃತ ಮಹೋತ್ಸವ ಎನ್‍ಇಎಸ್ ಹಬ್ಬ ಎಂದು ಬಣ್ಣಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವ ಜೂ.20ಮತ್ತು 21ರಂದು ಎನ್‍ಇಎಸ್ ಮೈದಾನದಲ್ಲಿ ನಡೆಯಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳು ಸೇರಿದಂತೆ ಹಲವು ಗಣ್ಯರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಎರಡೂ ದಿನಗಳ ಕಾಲವೂ ಮಕ್ಕಳಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ಸುಮಾರು 35 ಸಂಸ್ಥೆಗಳ 18 ಸಾವಿರ ಮಕ್ಕಳು ಈ ಅಮೃತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಎನ್‌ಇಎಸ್ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್, ಉಪಾಧ್ಯಕ್ಷರಾದ ಸಿ.ಆರ್. ನಾಗರಾಜ್, ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ್, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ. ರಮೇಶ್, ನಿರ್ದೇಶಕರಾದ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ, ಎನ್.ಟಿ. ನಾರಾಯಣರಾವ್, ಅನಂತದತ್ತಾ, ಎಚ್.ಸಿ. ಶಿವಕುಮಾರ್, ಮಧುರಾವ್, ವಿಜಯ್ ದಿನಕರ್, ರುಕ್ಮಿಣಿ ವೇದವ್ಯಾಸ, ರವೀಂದ್ರ, ಗುರುಪ್ರಸಾದ್, ರಾಮಪ್ರಸಾದ್, ಆನಂದ, ಕುಲಸಚಿವರಾದ ಪ್ರೊ. ಎನ್.ಕೆ. ಹರಿಯಪ್ಪ, ಆಡಳಿತಾಧಿಕಾರಿ ರಾಮಚಂದ್ರ, ಪಿಆರ್’ಓ ಸಿ.ಎಂ. ನೃಪತುಂಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post