ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಶೋಷಿತರ ಧ್ವನಿಯಾಗಿ ಉನ್ನತ ಆದರ್ಶಗಳನ್ನು ಮೈಗೂಡಿಸಿಕೊಂಡು ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನವನ್ನು ರಚಿಸಿ ಮಾನವೀಯತೆಯನ್ನು ಜಗತ್ತಿಗೆ ಸಾರಿದ ಮಹಾನ್ ಪುರುಷರು ಎಂದು ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಹೇಳಿದರು.
ಅಂಬೇಡ್ಕರ್ ಜೀವನ ಚರಿತ್ರೆ ಆಧರಿಸಿ ಝೀಟಿವಿ ಕನ್ನಡದಲ್ಲಿ ಪ್ರಸಾರ ಮಾಡುತ್ತಿರುವ ಮಹಾನ್ ನಾಯಕ ಧಾರಾವಾಹಿಯನ್ನು ಬೆಂಬಲಿಸಿ ದಲಿತ ಸಂಘರ್ಷ ಸಮಿತಿ ಹಳೇನಗರದ ಜೈಭೀಮ್ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಅವರು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಜೀವನದ ಆದರ್ಶಗಳ ಪಾಲನೆಯನ್ನು ಎಲ್ಲರೂ ಅರಿಯುವುದು ಅತ್ಯಗತ್ಯ ಎಂದರು.
ನಗರಸಭೆಯ ಪೌರಾಯುಕ್ತ ಮನೋಹರ್ ಮಾತನಾಡಿ, ಅಂಬೇಡ್ಕರ್ ಅವರ ಹೆಸರು ಕೇಳಿದರೇ ರೋಮಾಂಚನವಾಗುತ್ತದೆ. ಅವರು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಜೀವನದಲ್ಲಿ ಮೇಲೆ ಬಂದು ಉಳಿದವರೂ ಸಹ ಶಿಕ್ಷಣವನ್ನು ಪಡೆದು ಸುಶಿಕ್ಷಿತರಾಗಿ ಸಮಾಜದಲ್ಲಿ ಸಮಾನತೆಯ ದೀಪ ಬೆಳಗಬೇಕು ಎಂದು ಆಶಿಸಿದವರು. ಈ ಅಂಶವನ್ನು ಎಲ್ಲರೂ ಅರಿಯಬೇಕಿದೆ. ವಿಶೇಷವಾಗಿ ಪೌರಕಾರ್ಮಿಕರು ಅರ್ಥ ಮಾಡಿಕೊಂಡು ಸರ್ಕಾರ ನೀಡಿರುವ ಸೌಲಭ್ಯವನ್ನು ಬಳಸಿಕೊಂಡು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡಿ ಅವರು ಐಟಿಬಿಟಿ ಉದ್ಯೋಗಿಗಳಾಗಿ ಅಥವಾ ಸರ್ಕಾರದ ಉನ್ನತ ಹುದ್ಧೆಗಳನ್ನು ಅಲಂಕರಿಸುವಂತೆ ಮಾಡಿದಾಗ ಅಂಬೇಡ್ಕರ್ ಆಶಯವನ್ನು ಎಲ್ಲರೂ ಪಾಲಿಸಿದಂತಾಗುತ್ತದೆ. ನಮ್ಮ ಅಧಿಕಾರದ ಅವಧಿಯಲ್ಲಿ ಪೌರಕಾರ್ಮಿಕರ ಮಕ್ಕಳು ಎಲ್‌ಕೆಜಿಯಿಂದ ಎಂಬಿಬಿಎಸ್‌ವರೆಗೆ ಶಿಕ್ಷಣ ಪಡೆಯುಂತಹ ಯೋಜನೆ ಮಾಡಿದ್ದೇನೆ. ಅದನ್ನು ಸದುಪಯೋಗ ಮಾಡಿಕೊಂಡಾಗ ಮಾತ್ರ ಅಂಬೇಡ್ಕರ್ ಕಂಡಕನಸು ನನಸಾಗುತ್ತದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಕೆ.ಎನ್. ಶ್ರೀಹರ್ಷ ಮಾತನಾಡಿ, ಶಿಕ್ಷಣದಿಂದ ಮಾತ್ರ ಏನನ್ನಾದರು ಸಾಧಿಸಲು ಸಾಧ್ಯ ಎಂಬುದಕ್ಕೆ ಅಂಬೇಡ್ಕರ್ ಅವರ ಜೀವನವೇ ನಮಗೆ ಉದಾಹರಣೆ ಮತ್ತು ಪ್ರೇರಣೆ ಎನ್ನಬಹುದು. ಅವರು ಜೀವನದಲ್ಲಿ 27 ಪದವಿಗಳನ್ನು ಗಳಿಸಿ ಕಾನೂನು ತಜ್ಞರಾಗಿ ಭಾರತ ಸಂವಿಧಾನ ರಚಿಸಿದರು ಎಂದರು.
ಡಿಎಸ್‌ಎಸ್ ರಾಜ್ಯ ಖಜಾಂಚಿ ಭದ್ರಾವತಿ ಸತ್ಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ಜೀವನ ಚರಿತ್ರೆಯನ್ನು ಮರಾಠಿ ಭಾಷೆಯ ಧಾರವಾಹಿಯನ್ನು ರಾಘವೇಂದ್ರ ಹುಣಸೂರು ಕನ್ನಡದಲ್ಲಿ ಅನುವಾದಿಸಿ ಝೀಟಿವಿಯ ಮೂಲಕ ಮಹಾನ್ ನಾಯಕ ಹೆಸರಲ್ಲಿ ಪ್ರಸಾರ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಮುಖಂಡರಾದ ಜಿಲ್ಲಾ ಸಂಚಾಲಕ ಚಿನ್ನಯ್ಯ, ಮುಖಂಡರಾದ ಮಣಿ, ರಂಗನಾಥ್, ಈಶ್ವರಪ್ಪ, ಕಾಣಿಕ್ ರಾಜ್, ಮಾರುತಿ ಮೆಡಿಕಲ್ಸ್ ಆನಂದ್, ಅಂಜನಪ್ಪ, ಗೋವಿಂದ್ ಮುಂತಾದವರಿದ್ದರು. ಶಿಕ್ಷಕ ತಿಪ್ಪೇಸ್ವಾಮಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಆರು ಮಂದಿ ಪೌರ ಕಾರ್ಮಿಕರನ್ನು ಸತ್ಕರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post