ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೌಲ್ಯಾಧಾರಿತವಾಗಿ ರಾಷ್ಟ್ರಕ್ಕಾಗಿ ತನ್ನನ್ನೇ ಸಮರ್ಪಣೆ ಮಾಡಿಕೊಂಡಿರುವ ಆರ್’ಎಸ್’ಎಸ್ ವಿರುದ್ಧ ಪದೇ ಪದೇ ಪಿತೂರಿ ಮಾಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗರು ತಮ್ಮ ರಾಜಕೀಯ ಅಂತ್ಯಕ್ಕೆ ತಾವೇ ನಾಂದಿ ಹಾಡಿಕೊಳ್ಳುತ್ತಿದ್ದಾರೆ ಎಂದು ಎಪಿಎಂಸಿ, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಕಿಡಿ ಕಾರಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶದ ಬಲಿಷ್ಠ ಸೈನ್ಯ ಪಡೆ ಇದ್ದಂತೆ. ಇಂತಹ ಮೌಲ್ಯಾಧಾರಿತ ಸಂಘದ ಸಮವಸ್ತ್ರವನ್ನು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆ ಎನ್’ಎಸ್’ಯುಐ ಪ್ರತಿಭಟನೆಯ ಹೆಸರಿನಲ್ಲಿ ಸಂಘದ ಸಮವಸ್ತ್ರ ಸಾರ್ವಜನಿಕವಾಗಿ ಸುಟ್ಟು ಹಾಕಿರುವುದನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಬೆಳದ ಪ್ರತಿಯೊಬ್ಬ ಕಾರ್ಯಕರ್ತನು ದೇಶಕ್ಕಾಗಿ ತನ್ನ ಉಸಿರನ್ನು ನೀಡುವ ಭಾರತ ಮಾತೆಯ ಮಗನಾಗಿ ರೂಪಿತನಾಗುತ್ತಾನೇ ವಿನಾ ಸಮಾಜಘಾತುಕ ಶಕ್ತಿಯಾಗಿ ಎಂದಿಗೂ ಗುರುತಿಸಿ ಕೊಳ್ಳುವುದಿಲ್ಲ ಎಂಬುದನ್ನು ಆರೋಪ ಮಾಡುವ ಮೊದಲು ಪ್ರತಿಪಕ್ಷದವರು ಅರಿಯಬೇಕು. ಒಂದು ವೇಳೆ ಎನ್’ಎಸ್’ಯುಐ ಅಥವಾ ಕಾಂಗ್ರೆಸ್ ಕಾರ್ಯಕರ್ತರು ಕೇವಲ ಒಂದೇ ಒಂದು ದಿನ ಸಂಘವು ನೀಡುವ ಮೂಲ ತರಬೇತಿಗಾಗಿ ಶಾಖೆಗೆ ಬಂದರೆ ನಿಮ್ಮ ಕೆಟ್ಟ ರಾಜಕೀಯ ಮನಸ್ಥಿತಿಗೆ ಸೂಕ್ತ ಮುಲಾಮು ದೊರೆಯುತ್ತದೆ ಎಂದು ಹೇಳುವ ಮೂಲಕ ಆಹ್ವಾನ ನೀಡಿದರು.
ಸಂಘದಲ್ಲಿ ಯಾವುದೇ ಜಾತಿ ಸಂಘರ್ಷಕ್ಕೆ ಅವಕಾಶವಿಲ್ಲ. ಸಂಘಕ್ಕೆ ಬರುವ ಪ್ರತಿಯೊಬ್ಬ ಸ್ವಯಂ ಸೇವಕನನ್ನು ಸೇವೆ ಎಂಬ ಯಜ್ಞದಲ್ಲಿ ಉರಿಯುವ ಸಮಿತ್ತು ಇದ್ದ ಹಾಗೆ. ರಾಷ್ಟ್ರೀಯತೆಯನ್ನು ಶಿಖರದೆತ್ತರಕ್ಕೆ ಕೊಂಡೊಯ್ಯುವ ರೀತಿಯಲ್ಲಿ ತಯಾರು ಮಾಡುತ್ತಾರೆ. ಇಲ್ಲಿ ಜಾತಿ ಹಾಗೂ ರಾಜಕೀಯಕ್ಕೆ ಯಾವುದೇ ಅವಕಾಶವಿಲ್ಲ. ಇಂತಹ ದೇಶ ಭಕ್ತ ಸಂಘಟನೆಯ ವಿರುದ್ಧ ಪದೇ ಪದೇ ಪಿತೂರಿ ಮಾಡುವುದರಿಂದ ನಿಮ್ಮ ರಾಜಕೀಯ ಅಂತ್ಯಕ್ಕೆ ನಾಂದಿ ಹಾಡಿದಂತೆ ಎಂದು ಭವಿಷ್ಯ ನುಡಿದಿದ್ದಾರೆ.

ರಾಜ್ಯದಾದ್ಯಂತ ಸಂಘದ ಸಮವಸ್ತ್ರಕ್ಕೆ ಸಾರ್ವಜನಿಕವಾಗಿ ಬೆಂಕಿ ಹಚ್ಚುತ್ತೇವೆ ಎಂದು ಹೇಳಿಕೆ ನೀಡುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ ಅವರು ಈ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಿಮ್ಮ ಹೇಳಿಕೆಯ ತೀವ್ರತೆ ಯಾವ ಮಟ್ಟಕ್ಕೆ ಪೆಟ್ಟು ಕೊಡುತ್ತದೇ ಎಂಬುದನ್ನು ಬರುವ ಚುನಾವಣೆಯಲ್ಲಿ ನೀವೇ ನೋಡುತ್ತೀರ ಎಂದು ಸವಾಲು ಹಾಕಿದರು.
ಒಂದು ವಿದ್ಯಾರ್ಥಿ ಸಂಘಟನೆಯನ್ನು ರಾಜಕೀಯ ದಾಳವಾಗಿ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು, ಜೊತೆಗೆ ಸಂಘದ ಸಮವಸ್ತ್ರಕ್ಕೆ ಬೆಂಕಿ ಇಡುವ ಮೂಲಕ ರಾಷ್ಟ್ರೀಯತೆಗೆ ಅವಮಾನ ಮಾಡುತ್ತಿದ್ದಾರೆ. ಇದು ಪುರಾಣದ ಕಥೆಯಲ್ಲಿ ಭಸ್ಮಾಸುರ ಹೇಗೆ ತನ್ನನ್ನು ತಾನು ಸುಟ್ಟುಕೊಂಡನೋ ಹಾಗೆಯೇ ನಿಮ್ಮನ್ನು ನೀವೇ ರಾಜಕೀಯವಾಗಿ ಸುಟ್ಟುಕೊಳ್ಳಲು ವೇದಿಕೆ ಸಿದ್ಧತೆಗೆ ತಯಾರಿ ಮಾಡಿಕೊಡಂತೆ ಭಾಸವಾಗುತ್ತಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post