ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಸದಾ ಸುದ್ದಿಯಲ್ಲಿರುವ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ ಕೆಲವು ದಿನಗಳ ಹಿಂದೆ ಅನಾನುಭವಿ ಆಡಳಿತಗಾರರ ಕೈಗೆ ಸಿಕ್ಕಿ ನೊಂದ ರೋಗಿಗಳ ಶಾಪಕ್ಕೆ ಗುರಿಯಾಗಿತ್ತು. ಈಗ ಸಂಸ್ಥೆಯು ಮೈಕೊಡವಿ ಎಲ್ಲ ಆರೋಪಗಳಿಂದ ಮುಕ್ತವಾಗಿ ರೋಗಿಗಳ ಪ್ರಶಂಸೆಗೆ ಕಾರಣವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ, ಹೊಸದಾಗಿ ನೇಮಕಗೊಂಡ ವೈದ್ಯಕೀಯ ಅಧೀಕ್ಷಕರಾದ ಡಾ. ಶ್ರೀಧರ್.
ಅವರ ಕಾರ್ಯದಕ್ಷತೆ ಮತ್ತು ದೃಢ ನಿಲುವು ಈ ಯಶಸ್ಸಿಗೆ ಕಾರಣವಾಗಿದೆ. ಸರ್ಕಾರಿ ಆಸ್ಪತ್ರೆಯ ಕಡೆಗೆ ಮುಖಮಾಡದ ರೋಗಿಗಳು ಈಗ ಹುಡುಕಿ ಕಂಡುಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಡಾ.ಶ್ರೀಧರ್ ಅವರ ಕಾರ್ಯವೈಖರಿಯೇ ಅಚ್ಚರಿ ಎನಿಸುವಂತೆ ಆಸ್ಪತ್ರೆ ರೌಂಡ್ಸ್ ಆರಂಭಿಸುತ್ತಾರೆ. ಯಾವುದೇ ಸಮಯ ಸಂದರ್ಭ ಅಂತ ಇದಕ್ಕೆ ಮೀಸಲಿಲ್ಲ. ಪ್ರತಿ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
ಹಲವು ವರ್ಷ ಪ್ರಭಾವಿಗಳ ಹೆಸರು ಹೇಳಿಕೊಂಡು ಕೆಲಸ ಮಾಡದೆ ಕಳ್ಳಾಟವಾಡುತ್ತಿದ್ದ ಎತ್ತುಗಳಿಗೂ ಮೂಗುದಾರ ಬಿದ್ದಿದೆ. ಬೇರುಬಿಟ್ಟ ಸಿಬ್ಬಂದಿಗಳನ್ನು ಮುಲಾಜಿಲ್ಲದೆ ಬದಲಾವಣೆ ಮಾಡಿ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಇವರಿಂದಾಗಿ ಕೋವಿಡ್19ನಂತಹ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಬೇಕಾದ ಪೌಷ್ಟಿಕ ಆಹಾರ, ಐಸಿಯುನಲ್ಲಿದ್ದ ರೋಗಿಗಳಿಗೆ ಅವಶ್ಯಕತೆಯಿರುವ ದ್ರವರೂಪದ ಪೌಷ್ಟಿಕಾಂಶ, ಉತ್ತಮ ಗುಣಮಟ್ಟ ಹೊಂದಿರುವ ಆಹಾರ ನೀಡುವಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು.
ಇದಲ್ಲದೇ, ಶಾಶ್ವತ ಸುಸಜ್ಜಿತ ಆಕ್ಸಿಜನ್ ಟ್ಯಾಂಕರ್, ಡುಯಲ್ ಮೈಕ್ ಸಿಸ್ಟಮ್ ಅಳವಡಿಸಿ ರಾಜ್ಯಕ್ಕೆ ಮಾದರಿ, ಅಚ್ಚು ಕಟ್ಟಾದ ಪಾರ್ಕಿಂಗ್ ವ್ಯವಸ್ಥೆ, ಇದೇ ಮೊದಲ ಬಾರಿಗೆ 24×7 ಫಾರ್ಮಸಿ, ಅವಶ್ಯಕತೆ ಇರುವ ಯಂತ್ರೋಪಕರಣಗಳು, ಅವಶ್ಯಕತೆಯಿರುವ ಹೊಸ ರಕ್ತಪರೀಕ್ಷೆ ವ್ಯವಸ್ಥೆ, ಹೆಚ್ಚುವರಿ ಸಿಬ್ಬಂದಿ ಯೋಜನೆ ಹೀಗೆ ಇನ್ನೂ ಹತ್ತು ಹಲವು ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಅನುಭವಿ ಹಿರಿಯ ನಿರ್ದೇಶಕರು ಮತ್ತು ಆಡಳಿತ ವರ್ಗ ಇವರಿಗೆ ಹೆಗಲು ಕೊಟ್ಟು ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೆಗ್ಗಾನ್ ಬೋಧಕ ಆಸ್ಪತ್ರೆ ರಾಜ್ಯಕ್ಕೆ ಮಾದರಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news














Discussion about this post