ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಬಂಜಾರ ಸಮುದಾಯವರನ್ನು ಮತಾಂತರ ಮಾಡುವ ಯತ್ನಕ್ಕೆ ಕೈ ಹಾಕಿದರೆ ಹುಷಾರ್, ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ಶಾಸಕ ಪಿ. ರಾಜೀವ ಕುಡಚಿ ಅವರು ಕ್ರೈಸ್ತ ಮಿಷನರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದರು.
ತಾಲೂಕಿನ ಹಿರೇಮಾಗಡಿ ತಾಂಡಾದಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಸೋಮವಾರ ಸಂಜೆ ಹಮ್ಮಿಕೊಂಡ ಬಲವಂತದ ಮತಾಂತರ ತಡೆಯುವ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮತಾಂತರಿಗಳು ಹಣ, ಆಮೀಷ ಮತ್ತು ಭ್ರಮೆಗಳನ್ನು ತುಂಬುವ ಮೂಲಕ ಬಲವಂತದ ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಬಂಜಾರ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಮಾಜದವರು ಜಾಗೃತರಾಗಬೇಕಾದ ಕರ್ತವ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮತಾಂತರ ಮಾಡುವುದು ಕಾನೂನಿನಲ್ಲಿ ಎಷ್ಟು ಅಪರಾಧವೋ, ಅದಕ್ಕೆ ಪ್ರೋತ್ಸಾಹ ನೀಡುವುದು ಸಹ ಮಾತೃ ದ್ರೋಹ ಬಗೆದಂತೆ ಎಂದರು.
ಪಾಸ್ಟರ್‌ಗಳನ್ನು ಮರಕ್ಕೆ ಕಟ್ಟಿಹಾಕಿ
ದೇಶದಲ್ಲಿ ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಬಂಜಾರ ಸಮಾಜ ಹೊಂದಿದೆ. ಲಿಪಿ ಇಲ್ಲದಿದ್ದರೂ ಬಂಜಾರ ಭಾಷೆಯನ್ನಾಡುವ ಸಮಾಜದವರು ದೇಶದ ವಿವಿಧ ರಾಜ್ಯಗಳಲ್ಲಿ 4.5 ಕೋಟಿಯಷ್ಟು ಜನಸಂಖ್ಯೆ ಹೊಂದಿದ್ದೇವೆ. ಸರ್ವ ಧರ್ಮ ಸಹಿಷ್ಣುತೆಯ ದೇಶದಲ್ಲಿ ಎಲ್ಲಾ ಧರ್ಮವನ್ನು ಗೌರವಿಸುತ್ತೇವೆ. ಆದರೆ, ಸಮಾಜದವರನ್ನು ಬಲವಂತವಾಗಿ ಮತಾಂತರ ಮಾಡುವುದು ಹಾಗೂ ಭಾವನಾತ್ಮಕವಾಗಿ ಸುಳ್ಳು ಸುದ್ದಿ ಹಬ್ಬಿಸುವುದು ಕಾನೂನಿನಲ್ಲಿ ಅಪರಾಧವಾಗಿದೆ. ಗ್ರಾಮೀಣ ಭಾಗದದಲ್ಲಿ ಮತಾಂತರಕ್ಕೆ ಮುಂದಾಗುವ ಪಾಸ್ಟರ್‌ಗಳನ್ನು ಸೆರೆಹಿಡಿದು ಕಾನೂನನ್ನು ಕೈಗೆತ್ತಿಕೊಳ್ಳದೇ ಮರಕ್ಕೆ ಕಟ್ಟಿಹಾಕಿ ಪೊಲೀಸ್ ವಶಕ್ಕೆ ನೀಡುವಂತೆ ಕರೆ ನೀಡಿದರು.
ಜಾತಿ ಪ್ರಮಾಣ ಪತ್ರ ರದ್ದುಗೊಳಿಸಲು ಸೂಚನೆ
ಒಮ್ಮೆ ಮತಾಂತರಗೊಂಡು ಜಾತಿಯನ್ನು ತೊರೆದು ಹೋದ ವ್ಯಕ್ತಿ ಹಾಗೂ ಕುಟುಂಬಕ್ಕೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳಿಗೆ ಕಡಿವಾಣ ಹಾಕಬೇಕು. ಅವರ ಜಾತಿ ಪ್ರಮಾಣ ರದ್ದು ಪಡಿಸುವ ಜವಾಬ್ದಾರಿ ಸಂಬಂಧ ಪಟ್ಟ ಇಲಾಖೆಯ ಮೇಲಿದೆ. ಮತಾಂತರರಾದ ದಿನದಿಂದ ಪಡೆದ ಸೌಲಭ್ಯಗಳನ್ನು ಪಟ್ಟಿ ಮಾಡಿ ಪುನಃ ವಾಪಾಸ್ಸು ಪಡೆಯಬೇಕು. ಜೊತೆಗೆ ಮತಾಂತರಕ್ಕೆ ಪ್ರಚೋದನೆ ನೀಡಿದ ನೌಕರರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಸಭೆಯಲ್ಲಿದ್ದ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೋಲ್‌ಮಾಲ್ ಮಾಡಿದರೆ ಎಚ್ಚರ
ಸುಮಾರು 300ರಿಂದ 600 ಕುಟುಂಬಗಳಿರುವ ತಾಂಡಾಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿಗಳು ನಡೆಯಬೇಕು. ಪ್ರತಿಯೊಬ್ಬ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತರ ಬಳಿ ಕಾರ್ಡ್ ಇರಬೇಕು. ಕಡ್ಡಾಯವಾಗಿ ಫಲಾನುಭವಿಯ ಬಳಿಯೇ ಕಾರ್ಡ್ ಇರುವಂತೆ ಎಚ್ಚರ ವಹಿಸುವುದು ಹಾಗೂ ಹೊಸದಾಗಿ ಜಾಬ್ ಕಾರ್ಡ್‌ಗಳನ್ನು ನೀಡುವುದು ಸ್ಥಳೀಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಹೊಣೆಯಾಗಿದೆ ಎಂದ ಅವರು, ಖಾತ್ರಿ ಯೋಜನೆಯಡಿ ಅಕ್ರಮ ಎಸಗಿದರೆ ಎಚ್ಚರ. ಉದ್ಯೋಗ ಖಾತ್ರಿಯಲ್ಲಿ ಅಕ್ರಮ ತಡೆಗಟ್ಟಲು ರೋಜ್‌ಗಾರ್ ಮಿತ್ರ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಹಿರೇಮಾಗಡಿ ತಾಂಡಾದ ಅಭಿವೃದ್ಧಿಗಾಗಿ ಸ್ಥಳದಲ್ಲಿಯೇ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದರು.
ಬಂಜಾರ ಮಹಿಳೆಯರ ಉಡುಗೆಗೆ ಆಧುನಿಕ ಸ್ಪರ್ಶ ನೀಡಲು ಈಗಾಗಲೇ ಯೋಜನೆ ರೂಪಿತವಾಗಿದೆ. ಇಂದಿನ ಯುವ ಪೀಳಿಗೆಯು ಬಂಜಾರ ಉಡುಗೆಯನ್ನು ತೊಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಕಾರ್ಯ ನಡೆಯುತ್ತಿದ್ದು, ಆನ್‌ಲೈನ್‌ನಲ್ಲೂ ನಮ್ಮ ಸಂಸ್ಕೃತಿಯ ಉಡುಗೆಗಳು ದೊರೆಯುವಂತೆ ಮಾಡಲಾಗುವುದು. ಜೊತೆಗೆ ಬಂಜಾರ ಬಟ್ಟೆಗಳ ಮಳಿಗೆಯನ್ನು ಸ್ಥಾಪಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಈಗಾಗಲೇ ಸಿದ್ಧವಾಗಿದೆ.
-ಪಿ. ರಾಜೀವ್ ಕುಡಚಿ, ಅಧ್ಯಕ್ಷರು, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ
ಧರ್ಮ ಜಾಗರಣದ ಜಿಲ್ಲಾ ಸಂಯೋಜಕ ಬಿ.ಡಿ. ರವಿ ಮಾತನಾಡಿದರು. ಇದಕ್ಕೂ ಮೊದಲು ಇತ್ತೀಚೆಗೆ ನಿಧನರಾದ ಬಂಜಾರ ಸಮಾಜದ ಧರ್ಮಗುರು ಮಹಾರಾಷ್ಟ್ರದ ಸಂತ ಡಾ. ರಾಮರಾವ ಮಹಾರಾಜ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆ ಸಲ್ಲಿಸಲಾಯಿತು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತದ ನಿರ್ದೇಶಕರಾದ ಸವಿತಾ ಶಿವಕುಮಾರ್, ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ನಫೀಸಾ ಬೇಗಂ, ತಾಪಂ ಸಹಾಯಕ ನಿರ್ದೇಶಕ ದಿನೇಶ್, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಕೆ.ಎನ್. ಪ್ರವೀಣ್, ವೃತ್ತ ನಿರೀಕ್ಷಕ ಆರ್.ಡಿ. ಮರುಳಸಿದ್ದಪ್ಪ, ಪಿಎಸ್‌ಐ ಅರವಿಂದ್, ಹಿರೇಮಾಗಡಿ ತಾಂಡಾದ ಹಟ್ಟಿನಾಯಕ ತುಟ್ಯಾನಾಯ್ಕ್, ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಧರ್ಮಾನಾಯ್ಕ್ ಇತರರಿದ್ದರು. ಕುಸುಮಾ ಪ್ರಾರ್ಥಿಸಿದರು. ಎಸ್. ಚಂದ್ಯಾನಾಯ್ಕ್ ಸ್ವಾಗತಿಸಿದರು. ಸುಭಾಷ್ ನಾಯ್ಕ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post