ಶಿವಮೊಗ್ಗ: ಸಹ್ಯಾದ್ರಿ ಉತ್ಸವವನ್ನು ಜನವರಿ 23ರಿಂದ 27ರವರೆಗೆ ಐದು ದಿನಗಳ ಕಾಲ ಅರ್ಥಪೂರ್ಣವಾಗಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಈ ಕುರಿತು ವಿವರ ನೀಡಿದ ಅವರು, 10 ವರ್ಷಗಳ ಬಳಿಕ ಜಿಲ್ಲೆಯಲ್ಲಿ ಸಹ್ಯಾದ್ರಿ ಉತ್ಸವವನ್ನು ಆಚರಿಸಲಾಗುತ್ತಿದೆ. ಲಭ್ಯವಿರುವ ಅನುದಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಹ್ಯಾದ್ರಿ ಉತ್ಸವವನ್ನು ಆಯೋಜಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಹಳೆ ಜೈಲು ಆವರಣದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ. ರಾಷ್ಟçಮಟ್ಟದ, ರಾಜ್ಯಮಟ್ಟದ ಹಾಗೂ ಸ್ಥಳೀಯ ಕಲಾವಿದರಿಗೆ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅವಕಾಶ ನೀಡಲಾಗುವುದು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರವಲ್ಲದೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಕಾರ್ಯಕ್ರಮಗಳನ್ನು ಸಹ ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಯಲ್ಲಿ ಸಾಹಸ ಕ್ರೀಡೆಗಳು, ಜನಪದ ಕ್ರೀಡೆಗಳು, ಮ್ಯಾರಥಾನ್, ಪಾರಂಪರಿಕ ನಡಿಗೆಯಂತಹ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಇದರೊಂದಿಗೆ ರೈತರು, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸವಾಲುಗಳ ಕುರಿತಾಗಿ ಹಾಗೂ ಜಿಲ್ಲೆಯ ಉದ್ಯಮಶೀಲತೆ ಹೆಚ್ಚಿಸುವ ಕುರಿತಾದ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಸಹ್ಯಾದ್ರಿ ಉತ್ಸವ ಜಿಲ್ಲೆಯ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿದ್ದು, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಉತ್ಸವ ಆಚರಣೆಯಿಂದ ಕಲಾವಿದರಿಗೆ ಆರ್ಥಿಕ ಸಹಾಯ ಸಿಗುವುದು ಮಾತ್ರವಲ್ಲದೆ ಸ್ಥಳೀಯ ಕಲೆಗಳಿಗೆ ಪ್ರೋತ್ಸಾಹ ನೀಡಲು ಸಾಧ್ಯವಿದೆ. ಇದರೊಂದಿಗೆ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಜಿಲ್ಲೆಯಲ್ಲಿ ಉತ್ತೇಜನ ದೊರೆಯಲಿದೆ ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು.
Discussion about this post