ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಸೊರಬ |
ಶಿವಮೊಗ್ಗ ಜಿಲ್ಲೆ ರಾಜ್ಯಕ್ಕೆ ಮೂರು ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಅದರಲ್ಲಿ ಜನಮಾನಸದಲ್ಲಿ ಉಳಿದಿರುವ ಜನಪ್ರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಕೊಟ್ಟ ಹತ್ತಾರು ಯೋಜನೆಗಳು ಸೂರ್ಯ ಚಂದ್ರ ಇರುವವರೆಗೂ ಶಾಶ್ವತವಾಗಿ ಇರುತ್ತದೆ ಎಂದು ಸಿಎಂ ಬೊಮ್ಮಾಯಿ CM Basavaraja Bommai ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾರತೀಯ ಜನತಾ ಪಕ್ಷದ ವತಿಯಿಂದ ಶಿವಮೊಗ್ಗ ಜಿಲ್ಲೆ ಸೊರಬದ ಆನವಟ್ಟಿಯ ಹೈಸ್ಕೂಲ್ ಗ್ರೌಂಡ್ ಆವರಣದಲ್ಲಿ ಆಯೋಜಿಸಿದ್ದ “ಜನ ಸಂಕಲ್ಪ ಯಾತ್ರೆ”ಯನ್ನು ಉದ್ಘಾಟಿಸಿ ಮಾತನಾಡಿದರು.
ಬಿ.ಎಸ್. ಯಡಿಯೂರಪ್ಪ ಅವರು ರೈತರಿಗಾಗಿ ಸಾಲ ಮನ್ನ ಜೊತೆಗೆ 10 ಎಚ್ ಪಿ ಉಚಿತ ವಿದ್ಯುತ್ ನೀಡಿದ ಧಿಮಂತ ನಾಯಕರು. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಕೊಡುವುದು, ಭೂ ಚೇತನ ಕಾರ್ಯಕ್ರಮವನ್ನು ಕೊಟ್ಟು ಕರ್ನಾಟಕದ ಭೂ ಶಕ್ತಿಯನ್ನು ಹೆಚ್ಚಿಸಿದ್ದು, ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ, ಶಾಲಾ ಮಕ್ಕಳಿಗೆ ಸೈಕಲ್ ಯೋಜನೆ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಭರವಸೆಯ ಬೆಳಕನ್ನು ನೀಡಿರುವುದು ಮಣ್ಣಿನ ಮಗ ಯಡಿಯೂರಪ್ಪ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಬಂಗಾರಪ್ಪ ಯಾವುದೇ ಪಕ್ಷಕ್ಕೆ ಸೇರಿದವರಲ್ಲ
ಬಂಗಾರಪ್ಪ ಅವರು ಯಾವುದೇ ಪಕ್ಷವನ್ನು ನಂಬಿ ರಾಜಕಾರಣ ಮಾಡಲಿಲ್ಲ, ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಆದರೆ ಎಲ್ಲ ರಾಜಕೀಯ ಪಕ್ಷಗಳು ಬಂಗಾರಪ್ಪ ಅವರಿಗೆ ಸೇರಿದವು. ಅವರು ಕರ್ನಾಟಕದ ಮೂಲೆ ಮೂಲೆಯಲ್ಲೂ ಈ ಪ್ರಭಾವವನ್ನು ಉಳಿಸಿದ್ದಾರೆ. ಹಲವಾರು ಮಂದಿ ನಾವು ಹಿಂದುಳಿದ ವರ್ಗದ ನಾಯಕರು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಾರೆ. ಆದ್ರೆ ನಿಜವಾದ ಹಿಂದುಳಿದ ವರ್ಗದ ನಾಯಕರು ದೇವರಾಜ ಅರಸು ಮತ್ತು ಬಂಗಾರಪ್ಪ ಅವರು. ಸೊರಬ ಮಣ್ಣಿನಲ್ಲಿ ನಿಂತು ಮಾತಾಡುವಾಗ ಇವರ ಪ್ರೇರಣೆ ಪಡೆದುಕೊಂಡು ಮಾತಾಡುತ್ತಿದ್ದೀನಿ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಡೀ ಶಿವಮೊಗ್ಗ ಜಿಲ್ಲೆಯ ಚಿತ್ರಣವನ್ನೇ ಬದಲಾವಣೆ ಮಾಡಿದರು. ಜನಸಾಮಾನ್ಯರ ಬದುಕನ್ನು ಹಸನು ಮಾಡುವ ಕೆಲಸವನ್ನು ಯಡಿಯೂರಪ್ಪ ಅವರು ಮಾಡಿದ್ದಾರೆ. ಆದ್ದರಿಂದ ಶಿವಮೊಗ್ಗ ಜಿಲ್ಲೆ ಜನತೆ ಸದಾ ಯಡಿಯೂರಪ್ಪ ಅವರೊಟ್ಟಿಗೆ ನಿಲ್ಲಬೇಕು. ಜನರಿಗೆ ಇನ್ನಷ್ಟು ಸೇವೆ ಮಾಡಬೇಕೆಂದು ಉತ್ಸಾಹದಿಂದ ರಾಜ್ಯದ ಮೂಲೆ ಮೂಲೆಗೂ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದರು.
ಶಿವಮೊಗ್ಗದ ಎಲ್ಲ ಕ್ಷೇತ್ರಗಳಗಳಲ್ಲೂ ಬಿಜೆಪಿ ಗೆಲ್ಲಲಿದೆ
ಸೊರಬ ಶಾಸಕರಾದ ಕುಮಾರ್ ಬಂಗಾರಪ್ಪ ಅವರು ತಮ್ಮ ಕ್ಷೇತ್ರಕ್ಕೆ ಹಲವು ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ರೈತರಿಗೆ ಅನುಕೂಲಕ್ಕೆ ನೀರಿನ ಕೊರತೆ ಆಗದಂತೆ ಅಂತರ್ಜಲ ಹೆಚ್ಚಿಸುವ ಸಲುವಾಗಿ 200 ಕೆರೆಗಳನ್ನು ತುಂಬಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಪೈಪೋಟಿಯಿಂದ ಕೆಲಸ ಮಾಡುವ ಟೀಂ ಅನ್ನು ಯಡಿಯೂರಪ್ಪ ಅವರು ಸಿದ್ಧ ಮಾಡಿದ್ದಾರೆ. ಆದ್ದರಿಂದ ಮುಂಬರುವ 2023ರ ಚುನಾವಣೆಯಲ್ಲಿ ಭದ್ರಾವತಿ ಸಹಿತ ಎಲ್ಲ ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಳ್ಳಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಅನವಟ್ಟಿ ಭಾಗಕ್ಕೆ ದಂಡಾವತಿ ಏತನೀರಾವರಿ ಬಹಳ ಪ್ರಮುಖವಾದ್ದು. ನಮ್ಮ ಯೋಜನೆಗೆ ನೆರೆಯ ರಾಜ್ಯ ಅಡಚಣೆ ಉಂಟು ಮಾಡಿತ್ತು. ಹಾಗಾಗಿ ಈ ಬಾರಿ ಯಾವುದೇ ಮುಳುಗಡೆ ಆಗದಂತೆ, ಯಾವುದೇ ರೈತನಿಗೆ ತೊಂದರೆ ಆಗದಂತೆ ಯೋಜನೆಯ ಸ್ವರೂಪವನ್ನು ಬದಲಿಸಿ ಲಿಫ್ಟ್ ಮುಖಾಂತರ ನೀರೆತ್ತುವ ಕಾಮಗಾರಿಗೆ ಶೀಘ್ರದಲ್ಲೇ ಅನುಮೋದನೆ ಕೊಟ್ಟು ಅಡಿಗಲ್ಲು ಹಾಕುತ್ತೀವಿ. ಜನವರಿ ತಿಂಗಳಲ್ಲಿ ಸುಮಾರು 800 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡುತ್ತಿದ್ದೀವಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
Also read: ಮುಷ್ಟಿ ಅಕ್ಕಿ ಸಂಗ್ರಹ ಅಭಿಯಾನಕ್ಕೆ ಶಾಸಕ ಈಶ್ವರಪ್ಪ ಚಾಲನೆ
ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದೀರಿ?
ಸಿದ್ದರಾಮಯ್ಯ ಅವರು ನಾನು ಮುಖ್ಯಮಂತ್ರಿ ಆಗಬೇಕು ಅಂದ್ರೆ ಕಾಂಗ್ರೆಸ್ ಗೆ ಓಟ್ ಹಾಕಿ ಅಂತಾರೆ. ಆದರೆ ಡಿಕೆ ಶಿವಕುಮಾರ್ ಅವರಿಂದ ಮುಂದಿನ ಮುಖ್ಯಮಂತ್ರಿ ನೀವೇ ಎಂದು ಹೇಳಿಸಿ. ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದೀರಿ. 5 ವರ್ಷ ಜನತೆ ಮುಖ್ಯಮಂತ್ರಿಯಾಗಿ ಅವಕಾಶ ಕೊಟ್ಟಾಗಲೂ ನೀವು ಏನೂ ಮಾಡಿಲ್ಲ. 5 ವರ್ಷದಲ್ಲಿ ರಾಜ್ಯವನ್ನು ಅಧೋಗತಿಗೆ ತಂದು ಜಾತಿಜಾತಿಗಳ ಮಧ್ಯೆ ವಿಷ ಬೀಜವನ್ನು ಬಿತ್ತಿ ಧರ್ಮ ಒಡೆಯುವ ಕೆಲಸ ಮಾಡಿದಿರಿ. ಹಿಂದುಳಿದ ವರ್ಗವನ್ನೇ ಚೂರು ಚೂರು ಮಾಡಿದಿರಿ. ಕರ್ನಾಟಕದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

5 ವರ್ಷದ ಆಡಳಿತದಲ್ಲಿ ರಾಜ್ಯವನ್ನು ಅಧೋಗತಿಗೆ ತಂದಿದ್ದಕ್ಕೆ ಮತದಾರ ನಿಮ್ಮನ್ನು ಮೂಲೆಯಲ್ಲಿ ಕೂರಿಸಿದ. ಈಗ ನಾವು ಮಾಡುವ ಕೆಲಸಗಳಿಗೆಲ್ಲಾ ಟೀಕೆ ಮಾಡುವುದೇ ನಿಮ್ಮ ಕೆಲಸವಾಗಿದೆ. ಸುಮಾರು 8 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ಕೊಟ್ಟು ವಿವೇಕ ಎಂದು ಹೆಸರಿಟ್ಟರೆ ಅದಕ್ಕೂ ಟೀಕೆ ಮಾಡುತ್ತಾರೆ. ಈ ಮೂಲಕ ಸ್ವಾಮಿ ವಿವೇಕಾನಂದರಿಗೆ ಅವಮಾನ ಮಾಡಿದ್ದಾರೆ. ಇಂತಹವರ ಕೈಲಿ ಮತ್ತೆ ಅಧಿಕಾರ ಕೊಟ್ಟರೆ ಪ್ರಗತಿಪರವಾಗಿರುವ ರಾಜ್ಯ ಮತ್ತೆ ಅಧೋಗತಿಗೆ ಹೋಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಶಿವಮೊಗ್ಗದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬರಲಿದೆ
ಶಿವಮೊಗ್ಗ ಜಿಲ್ಲೆಗೆ ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಕೊಡುತ್ತಿದ್ದೇವೆ. ಜಿಲ್ಲೆಗೆ ವಿಮಾನ ನಿಲ್ದಾಣ ಬರಲಿದೆ. ಜೋಗ ಜಲಪಾತವನ್ನು ಅಂತರಾಷ್ಟ್ರೀಯ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ. ಈ ಮೂಲಕ ಯುವಕರಿಗೆ ಕೆಲಸ ಸಿಗುತ್ತದೆ. ಆರ್ಥಿಕ ಅಭಿವೃದ್ಧಿ ಆಗುತ್ತದೆ. ರಾಣಿಬೆನ್ನೂರು ವರೆಗೆ ರೈಲನ್ನು ತೆಗೆದುಕೊಂಡು ಹೋಗಲು ಈಗಾಗಲೇ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿದೆ. ನಾವು ಅಧಿಕಾರದ ರಾಜಕಾರಣ ಮಾಡದೇ ಜನಪರ ರಾಜಕಾರಣ ಮಾಡುತ್ತಿದ್ದೇವೆ. ಸೊರಬ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಯಡಿಯೂರಪ್ಪ ಅವರ ಚಿಂತನೆಗೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರುಗಳಾದ ಆಗರ ಜ್ಞಾನೇಂದ್ರ, ನಾರಾಯಣ ಗೌಡ, ಬೈರತಿ ಬಸವರಾಜು, ಸಂಸದ ಬಿ ವೈ ರಾಘವೇಂದ್ರ, ಶಾಸಕ ಕುಮಾರ್ ಬಂಗಾರಪ್ಪ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post