ಶಿವಮೊಗ್ಗ: ಮನುಷ್ಯ ಕುಲಕ್ಕೆ ಅಹಿಂಸೆಯೇ ಮೂಲ ಧರ್ಮವಾಗಿರಬೇಕು ಎಂದು ತೇರ ಪಂಥ್‌ನ ಆಚಾರ್ಯ ಮಹಾಶ್ರಮಣ್ ಜೀ ಸಂದೇಶ ನೀಡಿದರು.
ತಮ್ಮ ಅಹಿಂಸಾ ಪಾದಯಾತ್ರೆಯ ನಿಮಿತ್ತ ತೆರಳುವ ವೇಳೆ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಆಗಮಿಸಿ ಪ್ರವಚನ ನೀಡಿದರು.
ಪ್ರಸ್ತುತ ಪ್ರಪಂಚ ಅನ್ಯಾಯ ಮತ್ತು ಅಧರ್ಮದ ದೋರಣೆಯ ನಿಲುವುಗಳತ್ತ ಸಾಗುತ್ತಿದೆ. ಪ್ರಕೃತಿಯ ನಾಶ, ಪ್ರಾಣಿ-ಪಕ್ಷಿಗಳ ಅವನತಿ, ಯುದ್ದಗಳು, ಭಯೋತ್ಪಾದನೆ ತಾಂಡವವಾಡುತ್ತಿದೆ. ಈ ಕಾಲಮಾನದಲ್ಲಿ ಭಗವಾನ್ ಮಹಾವೀರರ ಅಹಿಂಸಾ ತತ್ವ ಜಗತ್ತಿನೆಲ್ಲಡೆ ರೂಡಿಗೆ ಬರಬೇಕಿದೆ. ಜನರಲ್ಲಿ ಅಹಿಂಸ ಭಾವನೆ ಮೂಡಬೇಕು. ಆಗ ಮಾತ್ರ ಜಗತ್ತನ್ನು ವಿನಾಶದ ಅಂಚಿನಿಂದ ರಕ್ಷಿಸಲು ಸಾಧ್ಯ ಎಂದರು.
ಅಹಿಂಸೆಯಿಂದಲೇ ವಿಶ್ವಶಾಂತಿ ಎಂಬ ಸಂದೇಶದ ಮೂಲಕ ಸಕಲ ಜೀವಿಗಳಿಗೂ ಶಾಂತಿಯನ್ನು ಬಯಸಿದ ಭಗವಾನ್ ಮಹಾವೀರರ ತತ್ವ ಇಂದಿಗೂ ಪ್ರಸ್ತುತವಾಗಿದೆ. ಮಹಾವೀರರು ಅಹಿಂಸೆ, ಸತ್ಯ, ಬ್ರಹ್ಮಚರ್ಯ, ಅಪರಿಗ್ರಹ, ಅಚೌರ್ಯ ವೆಂಬ ಪಂಚಶೀಲ ತತ್ವವನ್ನು ಬೋಧಿಸಿದರು. ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಕಾಯಾ, ವಾಚಾ, ಮನಸಾ ಪ್ರಯತ್ನಿಸಿದರು ಎಂದರು.
ಭೂಮಿಯ ಸಕಲ ಜೀವಕುಲಗಳಿಗೂ ಬದುಕು ಹಕ್ಕಿದೆ. ಸರ್ವಜನ ಸುಖಾಯ ಎಂಬ ಧ್ಯೇಯ ವಾಕ್ಯದಲ್ಲಿ ಮುನ್ನಡೆದು ಜೈನ ಧರ್ಮವು ಜೀವ ಪ್ರೇಮದ ಮಹತ್ವವನ್ನು ಸಾರುತ್ತಾ ಸಮುದಾಯದ ಒಳಿತನ್ನು ಸಾರುತ್ತಿದೆ ಎಂದರು.
ತೇರ ಪಂಥ್‌ನ ಆಚಾರ್ಯ ಮಹಾಶ್ರಮಣ್ ಜೀ ಅವರು 18 ಸಾವಿರ ಕಿಮೀ ಪಾದಯಾತ್ರೆಯನ್ನು ಮುಗಿಸಿದ್ದು. ಮಾನವೀಯ ಮೌಲ್ಯವನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಅಹಿಂಸಾಯಾತ್ರೆಯನ್ನು ನಡೆಸಲಾಗುತ್ತಿದೆ. ಹೊಳೆಹೊನ್ನೂರು ಮಾರ್ಗವಾಗಿ ಚಿತ್ರದುರ್ಗ, ಗದಗ ತೆರಳಲಿದ್ದಾರೆ.
ಈ ಸಂದರ್ಭದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಛೇರ‌್ಮನ್ ಟಿ. ಸುಬ್ಬರಾಮಯ್ಯ, ವೈದ್ಯಕೀಯ ನಿರ್ದೇಶಕ ಡಾ. ಎಸ್. ನಾಗೇಂದ್ರ, ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಲತಾ ನಾಗೇಂದ್ರ, ಟ್ರಸ್ಟಿಗಳಾದ ಡಾ. ಎಸ್. ಶ್ರೀನಿವಾಸ್, ಡಾ. ವಿನಯಾ ಶ್ರೀನಿವಾಸ್, ವಿಶ್ವನಾಥ್, ಡಾ. ಪುಷ್ಪಲತಾ, ಡಾ. ಆರ್.ಪಿ. ಪೈ, ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಿ.ಎಸ್. ಸುರೇಶ್, ಉಪಪ್ರಾಂಶುಪಾಲ ಡಾ. ಮಿಥುನ್, ತೇರಾ ಪಂಥ್‌ನ ಶ್ವೇತಾಂಭರ ಸಂಘದ ಅಧ್ಯಕ್ಷ ಮದನ್‌ಲಾಲ್ ಜೀ ಸಂಚೇತ್, ಕಾರ್ಯದರ್ಶಿ ಹನುಮಾನ್ ಚಂದ್ ಕೊಠಾರಿ, ಜೈನ ಮುಖಂಡರಾದ ನರೇಂದ್ರ ಜೈನ್ ಇನ್ನಿತರರು ಉಪಸ್ಥಿತರಿದ್ದರು.
Discussion about this post