ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶ್ರಾವಣದ ಸಾಲು ಹಬ್ಬಗಳಿಗೆ ನಾಗರಪಂಚಮಿ ಮುನ್ನುಡಿ. ನಾಗಪಂಚಮಿ ಅಂದರೆ ಅದು ನಾಗದೇವತೆಯ ಆರಾಧನೆ, ವರ್ಷದ ಮೊದಲ ಹಬ್ಬವೆಂಬ ಗರಿಯೂ ಇದಕ್ಕಿದೆ, ಒಡಹುಟ್ಟಿದವರಲ್ಲಿ ತೋರಿಕೊಳ್ಳುವ ವೈಮನಸ್ಯಗಳನ್ನು ತೊಳೆಯಲು ಬೆನ್ನಿಗೆ ಹಾಲು ತುಪ್ಪ ಹಚ್ಚುವುದು ವಾಡಿಕೆ. ಶುರುವಾತ್ರಿ ಇನ್ನು ಹಬ್ಬಗಳ ಸಾಲು, ಖರ್ಚು ಹೆಂಗ ಹೊಂದಿಸೋದು ಏನೋ ಎಂದು ಚಿಂತಿಸುವ ಮನೆಗಳಲ್ಲಿ ಪಂಚಮಿಹಬ್ಬದ ಸಡಗರ ಜೋರು.
ಜನಮೇಜಯ ಮಹಾರಾಜನು ತಾನು ಮಡುತ್ತಿದ್ದ ಸರ್ಪಯಜ್ಞವನ್ನು ನಿಲ್ಲಿಸಿ, ಮಹಾಭಾರತವನ್ನು ಕೇಳಲು ಶುರು ಮಾಡಿದುದು ಶ್ರಾವಣ ಶುದ್ಧ ಪಂಚಮಿ ದಿನ. ನಾಗಪಂಚಮಿ ಎಂದು ಪ್ರಸಿದ್ಧವಾದ ಈ ದಿನ ಗೋಮಯದಿಂದ ಬಾಗಿಲು ಸಾರಿಸಿ, ಚಿತ್ರಗಳನ್ನು ಬರೆದು ನೇಮದಿಂದ ನಾಗನನ್ನು ಪೂಜಿಸಬೇಕು. ಈ ನಾಗಪಂಚಮಿಯ ಆಚರಣೆಗಾಗಿ ಹೆಣ್ಣು ಮಕ್ಕಳು ಗಂಡನ ಮನೆಯಿಂದ ತೌರುಮನೆಗೆ ಹೋಗುತ್ತಾರೆ. ಹಬ್ಬಕೆ ನಾಲ್ಕು ದಿನುವಿರುವಾಗಲೇ ಅಣ್ಣ ಬಂದು ತಂಗಿಯನ್ನು ತವರಿಗೆ ಕರೆದುಕೊಂಡು ಹೋಗುವ ಸಂಪ್ರದಾಯ ಕರ್ನಾಟಕದ ಹಲವು ಭಾಗಗಳಲ್ಲಿ ಇಂದಿಗೂ ಇದೆ.
ಹಬ್ಬಗಳು ಬರುವುದು ಮನುಷ್ಯ ಮನುಷ್ಯರ ಸಂಬಂಧವನ್ನು ಬೆಳಸಲಿಕ್ಕೆ ಮತ್ತು ಗಟ್ಟಿಗೊಳಿಸಲಿಕ್ಕೆ. ಹಬ್ಬಗಳಿಲ್ಲದೆ ಇದ್ದರೇ ಎಂದಿನಂತೆ ಎಡಬಿಡದ ವ್ಯಾವಹಾರಿಕ, ವ್ಯಾವಸಾಯಿಕ ಒತ್ತಡಗಳ ನಡುವೆ ಬದುಕು ಸಂಪೂರ್ಣ ಯಾಂತ್ರಿಕವಾಗಿಬಿಡುತ್ತದೆ. ಇದನ್ನೆಲ್ಲ ನಮ್ಮ ಪೂರ್ವಜರು ಅರಿತಿರಲೂ ಸಾಕು. ಹೀಗಾಗಿ ಮಳೆಗಾಲದಲ್ಲಿ ಉಳಿದೆರಡು ಕಾಲಗಳಿಗೆ ಹೋಲಿಸಿದರೆ ಸ್ವಲ್ಪ ಜಾಸ್ತಿ ಬಿಡುವಿರುವುದರಿಂದ ಹಬ್ಬಗಳ ಸರದಿ ಈ ಕಾಲದಲ್ಲಿ ಜಾಸ್ತಿ ಇರುತ್ತದೆ. ಅದಕ್ಕೆ ಮೇಲುಹೊದಿಕೆಯಾಗಿ ದಕ್ಷಿಣಾಯನದಲ್ಲಿ ಸ್ವರ್ಗದ ಬಾಗಿಲು ಹಾಕಿ ದೇವತೆಗಳೆಲ್ಲಾ ಭೂಮಿಯಲ್ಲಿ ಸಲ್ಲಿಸುವ ಪೂಜೆಗಳನ್ನು ಸ್ವೀಕರಿಸಲು ಇಲ್ಲಿಗೆ ಬರುತ್ತಾರೆ.
ಆಧ್ಯಾತ್ಮಿಕ , ಧಾರ್ಮಿಕ ಚಿಂತನೆಗಳು ಸಂಶಯ ರಹಿತ – ಭಯರಹಿತವಾಧ ಶ್ರದ್ಧಾ ಪರಿಸರದಿಂದಲೇ ಸಾಧ್ಯ. ವಿಸ್ಮಯ ,ಶರಣಾಗತಿಯಂತಹ ನಿಲುವುಗಳು ನಮ್ಮ ಆಧ್ಯಾತ್ಮಿಕ ವಿಕಸನಕ್ಕೂ ಅತ್ಯವಶ್ಯ. ನಂಬಿಕೆ ಬೇಕು ನಿಜ, ಆದರೆ ನಂಬಿಕೆ ಯಾವತ್ತು ಮಾನಸಿಕ ದೌರ್ಬಲ್ಯವಾಗಬಾರದು .ಶ್ರದ್ಧೆ ಮಾನಸಿಕ ಬಲವನ್ನು ಒಗ್ಗೂಡಿಸುತ್ತದೆ, ಆತ್ಮಜ್ಞಾನವನ್ನು ಹೆಚ್ಚಿಸುತ್ತದೆ. ಇತ್ಯಾತ್ಮಕವಾದ ದೈವೀವೃತ್ತಿಗಳು, ನೇತ್ಯಾತ್ಮಕವಾದ ಅಸುರಿ ವೃತ್ತಿಗಳು ನಮ್ಮೊಳಗೇ ಇವೆ. ಪ್ರತಿ ಸಮಯ – ಸಂದರ್ಭಗಳಲ್ಲೂ ಇವುಗಳೊಡನೆ ನಿರಂತರ ಸಂಗ್ರಾಮವೂ ನಡೆಯುತ್ತಿರುತ್ತದೆ. ನಮ್ಮ ಬುದ್ಧಿ, ಚಿತ್ತ ,ಅಹಂದ್ರವ್ಯ, ಅಂತರಾತ್ಮನ ಕಿಡಿಯೇ ನಮ್ಮ ಬದುಕಿನಲ್ಲಿ ಸಂಚಿತ ಪುಣ್ಯರೂಪದಲ್ಲಿ ನಮ್ಮ ಜೊತೆಯೇ ಇಲ್ಲೂ- ಸಾವಿನ ಬಳಿಕವೂ ಬೆಂಬಿಡದೇ ಅನುಸರಿಸುವುದು ಎಂದು ತಿಳಿದೂ ನಾವಿಂದು ಆತ್ಮಜ್ಞಾನದ ವಿರುದ್ಧ ದಿಕ್ಕಿನತ್ತಲೇ ಮುನ್ನೆಡೆಯತೊಡಗಿದ್ದೇವೆ. ನಂಬಿಕೆಯಡಿಯಲ್ಲಿಯೇ ನಿರಾಳವಾಗಿ ಪಯಣಿಸತೊಡಗಿದ್ದೇವೆ, ಬದುಕಿನಲ್ಲೊಂದು ಆದರ್ಶ , ಗುರಿ ಸೇರುವ ತವಕ, ಪ್ರಾಮಾಣಿಕವಾದ ಯತ್ನ ಏನನ್ನೂ ಮಾಡಹೊರಡದೆ ಬಿಮ್ಮನೆ ನಿಂತಿದ್ದೇವೆ.
ನಾಗಪಂಚಮಿ ಬಂತೂ ಎಂದರೆ ಹಬ್ಬಗಳು ಆರಂಭವಾದಂತೆ, ನಾಗನಕಟ್ಟೆಗೆ ಹೋಗಿ ನಾಗನಿಗೆ ಹಾಲು ಎಳನೀರು ಆಭಿಷೇಕ ಮಾಡಿ ಬರುವುದೆಂದರೆ ಎಲ್ಲಿಲ್ಲದ ಸಂಭ್ರಮ. ದೊಡ್ಡ ದೊಡ್ಡ ಮರಗಳ ನಡುವೆ ಬುಡದಲ್ಲಿ ನಾಗನ ಕಲ್ಲುಗಳೂ, ಪಕ್ಕದಲ್ಲಿ ಕೆರೆ ಅಬ್ಬಬ್ಬಾ ಆ ಪರಿಸರವೇ ನಮ್ಮಲ್ಲಿ ಭಯ ಭಕ್ತಿ ಹುಟ್ಟಿಸುತ್ತಿತ್ತು! ಆದರೆ ಇಂದು ಅದಕ್ಕೆ ಗುಡಿಯನ್ನು ಕಟ್ಟಿಸಿ ಮೂಲ ಸ್ವರೂಪವೇ ಮಾಯವಾಗಿ ಸಿಮೆಂಟ್ ಗೋಡೆಗಳ ನಡುವೆ ಬಂಧಿಸಲ್ಪಟ್ಟಿವೆ.
ಇಂದು ನಾಗ ಅನೇಕರ ಜಿಜ್ಞಾಸೆಗೆ ಕಾರಣವಾಗಿದೆ, ನಾಗಮಂಡಲದ ಅದ್ದೂರಿ ಖರ್ಚುಗಳಿಗೆ ಟೀಕೆಟಿಪ್ಪಣಿಗಳು ಬರುತ್ತಿವೆ, ನಾಗದರ್ಶನಗಳು ಪ್ರಶ್ನೆಯ ಚಿಹ್ನೆ ಮೂಡಿಸುತ್ತಿವೆ. ಹರಕೆಯ ರೂಪವಾದ ಮಡೆಸ್ನಾನಗಳು ವಿವಾದಕ್ಕೆ ಕಾರಣವಾಗಿದೆ. ಆಧುನಿಕ ಸೌಲಭ್ಯಗಳು ನಾಗನ ಕುರಿತಂತೆ ಇನ್ನೊಂದು ಚಿತ್ರಣ ನೀಡಲಾರಂಭಿಸಿದೆ.
ಕಾಳೀಯ ಮರ್ದನದ ನೆನಪಿಗೆ
ನಾಗರ ಪಂಚಮಿ ಆಚರಣೆ ಹಿನ್ನೆಲೆಯಾಗಿ ಇರುವ ಪ್ರತೀತಿಗಳಲ್ಲಿ ಕಾಳೀಯ ಮರ್ದನವೂ ಒಂದು. ವೃಂದಾವನದಲ್ಲಿ ಬೆಳೆಯುತ್ತಿದ್ದ ಬಾಲಕೃಷ್ಣನು ಯಮುನೆಯಲ್ಲಿ ಸೇರಿಕೊಂಡು ವಿಷಮಯ ಮಾಡುತ್ತಿದ್ದ ಕಾಳೀಯನನ್ನು ಮರ್ದಿಸುತ್ತಾನೆ. ಅವನ ಸಾವಿರ ಹೆಡೆಗಳ ಮೇಲೆ ನರ್ತಿಸಿ ವಿಷರಹಿತನ್ನಾಗಿ ಮಾಡುತ್ತಾನೆ ಕೊನೆಗೆ ನಾಗಪತ್ನಿಯರು ಪತಿಯ ಪ್ರಾಣಭಿಕ್ಷೆ ಬೇಡುತ್ತಾರೆ, ಗೋಪಾಲಕರು ಮತ್ತು ಸರ್ಪಸಂಕುಲದ ನಡುವೆ ಸೌಹಾರ್ದ ಮೂಡಿಸುವುದಕ್ಕಾಗಿ ನಾಗಪೂಜೆಯ ಸಲಹೆ ಕೊಡುತ್ತಾನೆ.
ಶ್ರಾವಣದಲ್ಲಿ ಮಳೆಯ ಆರ್ಭಟ ಅದರಿಂದ ರಕ್ಷಣೆ ಪಡೆಯಲು ಬಿಲಗಳಿಂದ ಸರ್ಪಗಳು ಹೊರಬರುವವು, ಮೃಣ್ಮಯನಾಗನ ಪೂಜೆಗೆ ಕಾರಣ ರೈತನಿಗೆ ಮಣ್ಣೆ ಸರ್ವಸ್ವವಾದುದರಿಂದ ಮಣ್ಣಿನ ಪೂಜೆ ಕೂಡ ಮಹತ್ವದ್ದು. ನಿಜಕ್ಕೂ ಹುತ್ತವನ್ನು ಕಟ್ಟುವುದು ಪ್ರಕೃತಿಯಲ್ಲಿಯೇ ವಿಸ್ಮಯದ ಆರ್ಕಿಟೆಕ್ಟ್ ಎಂದು ಗುರತಿಸಲಾಗುವ ಗೆದ್ದಲು.ಪರಿಸರ ಸ್ನೇಹಿಯಾದ ಗೆದ್ಲಿನ ಮನೆಗೆ ಹಾವು ಬಂದು ಸೇರಿಕೊಳ್ಳುತ್ತದೆ. ಕಾಲಿಲ್ಲದಿದ್ದರೂ ತೆವಳಿ ಸರಿದು ಹೋಗುವವು ಭುಜಂಗಗಳು ಅವುಗಳಂತೆ ನಾವು ಶಕ್ತಿಮೀರಿ ಧರ್ಮಮಾರ್ಗಿಗಾಮಿಗಳಾಗಬೇಕು ಎಂಬುದನ್ನು ಹೇಳುತ್ತದೆ.ಒಂದೇ ಹುತ್ತದಲ್ಲಿ ಹಲವು ಸರ್ಪಗಳು ನೆಲೆಸುವ ಅನ್ಯೋನತೆ ,ಒಟ್ಟಾಗಿ ಬ್ರಹ್ಮನನ್ನು ಪ್ರಾರ್ಥಿಸಿದ ಆ ಧಾರ್ಮಿಕ ಒಗಟ್ಟು, ಸಹೋದರ ಭಾವನೆ ನಮಗೆ ಆದರ್ಶಪ್ರಾಯ.
ಶ್ರಾವಣದ ಸಂಭ್ರಮಕ್ಕೆಲ್ಲಾ ಗರಿ ಇಟ್ಟಂತಿರುವ ವರಮಹಾಲಕ್ಷ್ಮೀ ವ್ರತ
ವರವ ಕೊಡೇ ತಾಯಿ
ಶ್ರಾವಣ ಮಾಸವೇ ಹಾಗೆ, ಹಬ್ಬಗಳು ಸಾಲು ಸಾಲಾಗಿ ಬರುತ್ತವೆ ಹೀಗೆ ಆಚರಿಸಲ್ಪಡುವ ಮುಖ್ಯವಾದ ಹಬ್ಬಗಳಲ್ಲಿ ಸಂಪತ್ತಿನ ಅಧಿದೇವತೆ ವರಮಹಾಲಕ್ಷ್ಮೀ ವ್ರತವೂ ಒಂದು. ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ಮಹಾಲಕ್ಷ್ಮೀ ದೇವಿಯ ಪೂಜೆಯ ಪರ್ವಕಾಲ. ಈ ವ್ರತವನ್ನು ಶ್ರಾವಣ ಹುಣ್ಣಿಮೆಯ ಮೊದಲು ಎರಡನೇ ಶುಕ್ರವಾರ ಆಚರಿಸಲಾಗುತ್ತದೆ.
ದೇವತೆಗಳು 33 ಕೋಟಿ ಇದ್ದರು, ನಮಗೆ ತಿಳಿದಿರುವಂತೆ ಕೆಲವರು ಮಾತ್ರ ಪ್ರಮುಖರು. ಶಿವನೇ ಮಹಾದೇವನೆಂದು ಶೈವರು ಹೇಳಿದರೆ, ವಿಷ್ಣುವೇ ಲೋಕಸ್ವಾಮಿಯೆಂದು ವೈಷ್ಣವರು ಹೇಳುತ್ತಾರೆ. ಸೂರ್ಯ ಅಂಬಿಕೆ ಗಣಪತಿ ಷಣ್ಮುಖರಿಗೂ ಪ್ರಾಮುಖ್ಯತೆ ದೊರೆಯುವುದುಂಟು. ಆದರೆ ನಿಜವಾಗಿ ನೋಡಿದರೆ ಲಕ್ಷ್ಮೀದೇವಿಗೆ ದೊರೆಯುವ ಪ್ರಾಧಾನ್ಯತೆ ಬೇರೆ ಯಾರಿಗೂ ದೊರೆಯುವುದಿಲ್ಲ. ಅವಳ ಕರುಣೆಯಿಲ್ಲದೆ ಯಾರೂ ಸಮೃದ್ದಿಯಿಂದ ಜೀವಿಸಲಾರರು.
ಭಾರತೀಯ ಪರಂಪರೆಯಲ್ಲಿ ಲಕ್ಷ್ಮೀಯನ್ನು ಸೌಂದರ್ಯ, ಸಂಪತ್ತು, ವಿಜಯ, ಯಶಸ್ಸಿನ ಸಂಕೇತವೆಂದು ಗುರುತಿಸಲಾಗಿದೆ. ದೇವಾಸುರರು ಅಮೃತ ಮಂಥನ ಮಾಡುತ್ತಿರುವಾಗ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಲಕ್ಷ್ಮೀದೇವಿ ಎದ್ದು ಬಂದಿದ್ದಾಳೆ! ವಿಷ್ಣುವಿನ ಸನ್ನಿಧಿ ಸೇರಿದ್ದಾಳೆ! ಆ ಸುಂದರ ನೆನಪೂ ಅಚ್ಚಳಿಯದೆ ಉಳಿದು ಶ್ರಾವಣ ಶುಕ್ರವಾರದಂದು ಮತ್ತೆ ಜೀವ ತಾಳುತ್ತದೆ. ಶುಕ್ರವಾರವೆಂದರೆ ಅದು ಈ ಪೃಥ್ವೀಗೆ ಲಕ್ಷ್ಮೀಯ ವರ ಆಗಮನದ ವಾರ. ವರಮಹಾಲಕ್ಷ್ಮೀವ್ರತಕ್ಕೆ ಪ್ರಾಶಸ್ತ್ಯ ಸಿಕ್ಕಿದ್ದು ಹೀಗೆ.
ಶ್ರಾವಣ ಮಾಸಕ್ಕೆ ಘನತೆಯನ್ನು ಹೊತ್ತು ತರುವುದೇ ಈ ವ್ರತ. ಈ ಹಬ್ಬಕ್ಕಾಗಿ ಮಹಿಳೆಯರು ಬಹಳಷ್ಟು ದಿನಗಳಿಂದ ತಯಾರಿ ಮಾಡಿಕೊಳ್ಳುತ್ತಾರೆ. ಅವರಲ್ಲಿರುವ ಪ್ರತಿಭೆಯನ್ನು ಹೊರಸೂಸಲು ಇದು ಅತ್ಯಂತ ಪ್ರಶಸ್ತಕಾಲವೆಂದೇ ಹೇಳಬಹುದು. ಇಷ್ಟಾರ್ಥಗಳ ಈಡೇರಿಕೆಗಾಗಿ ನಿಜವಾದ ಶ್ರದ್ಧೆ, ಭಕ್ತಿ ಹಾಗೂ ನಿಷ್ಟೆಯಿಂದ ತಾಯಿಯ ಸೇವೆಗೈಯಬೇಕು.
ಈ ವ್ರತವನ್ನು ಆಚರಿಸುವವರು ಹನ್ನೆರಡು ತಂತುಗಳಿಂದ ಮಾಡಿದ, ದಾರವನ್ನು ಪೂಜಿಸಿ ಬಲಗೈಗೆ ಕಟ್ಟಿಕೊಳ್ಳಲಾಗುವುದು. ಹನ್ನೆರಡು ಎನ್ನುವುದು ವಾಸುದೇವನಿಗೆ ಪ್ರಿಯವಾದ ಸಂಖ್ಯೆ, ದ್ವಾದಶಾತ್ಮಕನ ಪರಾಶಕ್ತಿಯಾಗಿ ವರಮಹಾಲಕ್ಷ್ಮೀಯು ಈ ಪೂಜೆಯನ್ನು ಸ್ವೀಕರಿಸಿ ವರವನ್ನು ಕರುಣಿಸುತ್ತಾಳೆ. ಅಭ್ಯಂಜನ ಮಾಡಿ ಶುಭ್ರವಸ್ತ್ರವನ್ನು ಧರಿಸಿ ಅಹ್ನೀಕ ಮುಗಿಸಿ, ಸಾಲಂಕೃತ ಮಂಟಪದಲ್ಲಿ ಪಂಚವರ್ಣಗಳಿಂದ ಕೂಡಿದ ಅಷ್ಟದಳಪದ್ಮವನ್ನು ರಚಿಸಿ ಕಲಶವನ್ನಿಟ್ಟು ಅದರಲ್ಲಿ ವರಮಹಾಲಕ್ಷ್ಮೀಯನ್ನು ಆವಾಹಿಸಿ ಶ್ರೀಸೂಕ್ತ ವಿಧಾನದಿಂದ ಕಲ್ಪೋಕ್ತ ಷೋಡಶೋಪಚಾರದಿಂದ ಪೂಜಿಸಿ ನಾನಾ ವಿಧದ ಭಕ್ಷ್ಯ ಭೋಜ್ಯಗಳನ್ನು ಅರ್ಪಿಸಿ ಪಾರ್ಥಿಸಬೇಕು.
Get In Touch With Us info@kalpa.news Whatsapp: 9481252093
Discussion about this post