ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅವನಲ್ಲಿ ಜ್ಞಾನ, ಬಲ, ಕ್ರಿಯಾ ಇವುಗಳಿವೆ. ಯಾರಲ್ಲಿ ಸರಿಯಾದ ತಿಳಿವಳಿಕೆ, ಶರೀರ ದಾರ್ಢ್ಯ, ಸಮಯೋಚಿತವಾದ ಕೆಲಸ ಇರುತ್ತವೆಯೋ ಅವನು ಲಕ್ಷ್ಮೀಯನ್ನು ಪಡೆಯುವುದಕ್ಕೆ ಅರ್ಹ. ರಾಜ್ಯಲಕ್ಷ್ಮೀಯನ್ನು ಆಳುವವರಿಗೆ ಈ ಗುಣಗಳು ಅಗತ್ಯ. ಇಲ್ಲವಾದರೆ ಅವರು ತಮ್ಮ ಗಾದಿಯನ್ನು ಕಳೆದುಕೊಳ್ಳುತ್ತಾರೆ. ತನ್ನ ಉಪಾಸಕರು ಕರ್ಮಯೋಗಿಗಳಾಗಬೇಕು. ವ್ಯವಹಾರ ಕುಶಲರಾಗಬೇಕೆಂದು ಲಕ್ಷ್ಮೀ ಆಶಿಸುತ್ತಾಳೆ. ಬ್ರಹ್ಮನು ಸೃಷ್ಟಿಯನ್ನು ಸರಸ್ವತೀ ಮತ್ತು ಲಕ್ಷೀಯರ ಸಹಾಯದಿಂದ ಮಾಡಿದನೆನ್ನುತ್ತಾರೆ. ಸರಸ್ವತಿ ಅಂದರೆ ತಿಳಿವಳಿಕೆ, ಲಕ್ಷ್ಮೀಯೆಂದರೆ ಜಗತ್ತು! ತಿಳಿವಳಿಕೆಯಿದ್ದರೆ ಜಗತ್ತಿನ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು.
ಲಕ್ಷ್ಮೀಗೂ ತಾವರೆ ಹೂವಿಗೂ ವಿಶೇಷವಾದ ನಂಟು!
ಆಕೆ ಪದ್ಮಿನೀ (ತಾವರೆ ಹೂವನ್ನು ಹಿಡಿದವಳು), ಪದ್ಮೇಸ್ಥಿತಾ (ತಾವರೆ ಹೂವಿನ ಮೇಲೆ ಇರುವಳು), ಪದ್ಮವರ್ಣಾ (ತಾವರೆ ಹೂವಿನ ಬಣ್ಣದವಳು), ಪದ್ಮಸಂಭವಾ (ತಾವರೆ ಹೂವಿನಿಂದ ಹುಟ್ಟಿದವಳು), ಪದ್ಮಪ್ರಿಯೆ (ತಾವರೆ ಹೂವು ಇಷ್ಟವಾದವಳು) ಇತ್ಯಾದಿ… ಲಕ್ಷ್ಮೀಯನ್ನು ತಾವರೆ ಹೂವಿನ ಹೆಸರುಗಳಾದ ಕಮಲಾ, ಪದ್ಮಾ ಎನ್ನುವ ಮಾತುಗಳಿಂದಲೇ ವ್ಯವಹರಿಸುವುದು ಸ್ವಾರಸ್ಯವಾದುದು.
ಲಕ್ಷ್ಮೀ ಕಾಣಿಸಿಕೊಂಡಾಗ ಅವಳಿಗೆ ಅಂಟಿಕೊಂಡು ಬಂದ ಕಲ್ಪನೆಗಳನ್ನು ಕೊಂಚ ಪರೀಕ್ಷಿಸಿದರೆ ಆಕೆಯ ಸ್ಥಿತಿ ದೇವತಾ ಲಕ್ಷಣ ಬಯಲಾಗುತ್ತದೆ. ಋಗ್ವೇದದ ಖಿಲ ಸೂಕ್ತದಲ್ಲಿ ಆಕೆಗೂ ಕಲಾ ಪ್ರಪಂಚದಲ್ಲಿ ವಿಶಿಷ್ಟವಾದುದು. ಅಸಂಖ್ಯದಳಗಳ ಕಮಲ ಸಹಸ್ರಾಧೀಪತಿಯಾದ ಸೂರ್ಯನಿಗೆ ಸಂಬಂಧಿಸಿದ್ದು, ಸೂರ್ಯೋದಯದಲ್ಲಿಯೇ ಕಮಲದ ಹೂವು ಅರಳುವುದು ಎನ್ನುವುದಂತೂ ಸುಪ್ರಸಿದ್ಧವಷ್ಟೇ. ನೀರಿನಿಂದ ಎದ್ದು ನಿಂತು ಚೇತನವನ್ನು ಪ್ರಾಣಿಶಕ್ತಿಯನ್ನು ಸ್ಥಿತಿಯನ್ನು ಪ್ರತಿನಿಧಿಸುತ್ತದೆ ಈ ಹೂ; ಕಮಲದ ಹೂವಿನ ಚೆಲುವೇ ಲಕ್ಷ್ಮೀಯ ಸೌಂದರ‌್ಯದ ಹಿನ್ನೆಲೆ. ನೀರಿನಲ್ಲಿ ಹುಟ್ಟಿದ ಕಮಲ ಸಮುದ್ರ ಸಂಭೂತಳಾದ ಲಕ್ಷ್ಮೀಯನ್ನು ಸಂಕೇತಿಸಿತು.
ಕೊಡುವುದು, ಅನುಭವಿಸುವುದು, ನಾಶಪಡಿಸುವುದು ಇವು ಲಕ್ಷ್ಮೀಯ ಮೂರು ಗತಿಗಳು. ಯಾರು ಕೊಡುವುದಿಲ್ಲವೋ, ಅನುಭವಿಸುವುದಿಲ್ಲವೋ ಅವರ ಹಣ ಮೂರನೇ ಗತಿ ಅಂದರೆ ನಾಶ ಹೊಂದುತ್ತದೆ.
ಲಕ್ಷ್ಮೀ ಎಲ್ಲರಿಗೂ ಬೇಕಾದ ದೇವತೆ. ಇವಳು ಯಾವ ವರ್ಗಕ್ಕೂ ಸೀಮಿತಳಾಗಿಲ್ಲ. ಸರ್ವಮಂಗಳೆಯಾದ ಲಕ್ಷ್ಮೀಯು ಎಲ್ಲರಿಗೂ ಧನಧಾನ್ಯ ಸಮದ್ಧಿಯನ್ನು ಕೊಡಲಿ ಎಂಬುದೇ ಶುಭಾಶಯ.
ಭಾವೈಕೈದ ಸುಂದರ ಪರ್ವ ರಕ್ಷಾಬಂಧನ
ಶ್ರಾವಣ ಪೂರ್ಣಿಮೆಯು ರಕ್ಷಾಬಂಧನವೆಂದು ಪ್ರಸಿದ್ದವಾಗಿದೆ. ಸಹೋದರ ಸಹೋದರಿಯರಲ್ಲಿ ಸಹಜ ಪ್ರೇಮ ಅಂತಃಕರಣಗಳ ಬಾಂಧವ್ಯವನ್ನು ತೆಳುರೇಷ್ಮೆಯ ದಾರದೊಂದಿಗೆ ಇನ್ನೂ ಗಟ್ಟಿಗೊಳಿಸುವ ಸುಂದರ ಆಚರಣೆ.
ಹೆಣ್ಣಿನ ಜನ್ಮಕ್ಕೆ ಅಣ್ಣ ತಮ್ಮಂದಿರಬೇಕು ಎಂಬುದು ಹಿರಿಯರ ಅನುಭವದ ಮಾತು, ಪ್ರತೀ ಹೆಣ್ಣಿಗೂ ಅಣ್ಣನ ನೆನಪಾಗುವುದು ಅವಳ ಸಂಕಷ್ಟದಲ್ಲಿ ಹೌದು ಪ್ರತಿ ಹೆಣ್ಣು ಅಣ್ಣ ತಮ್ಮಂದಿರ ಸಾಂಗತ್ಯಕ್ಕಾಗಿ ಚಡಪಡಿಸುವಳು. ಅಣ್ಣನ ಗಂಭೀರತನ, ತಮ್ಮನೊಂದಿಗಿನ ತುಂಟಾಟಗಳು, ಮುನಿಸುಗಳು ಬಾಳಿನುದ್ದಕ್ಕೂ ಮರೆಯಲಾಗದ ಸಿಹಿ ಘಟನೆಗಳು, ಯಾರೊಂದಿಗೆ ಹೇಳಿಕೊಳ್ಳಲಿ ನನ್ನ ನೋವುಗಳನ್ನು ಎಂದು ಮನಸ್ಸು ಹಲುಬಿದಾಗ ನೆನಪಾಗುವುದು ಅಣ್ಣನ ಗಂಭೀರ ವದನ.. ಮನದ ತುಂಬಾ ಹಾಡುವುದು ಅವನ ಗುಣಗಾನ… ಆ ನೆನಪೇ ಎಲ್ಲಾ ನೋವ ಮರೆಸುವ ಸಾಧನ.
ತಂದೆ-ತಾಯಿ ಅಕ್ಕ ತಂಗಿಯರಿಗಿಂತಲೂ ಹೆಚ್ಚಾಗಿ ಅಣ್ಣನ ಆಪ್ತತೆ ಬಲು ಪ್ರಿಯ. ಶಾಲೆಗೆ ಹೋಗಲು ಅವನದೇ ಸೈಕಲು, ಯಾರಾದರೂ ಚುಡಾಯಿಸಿದಾಗ ‘ನಮ್ಮಣ್ಣಂಗೆ ಹೇಳಿ ಮಾಡಿಸ್ತೀನಿ ಎಂದು ಹೇಳಿಕೊಳ್ಳುವಾಗಿನ ಭದ್ರತಾಭಾವ, ಬಣ್ಣಿಸಲಸದಳ. ಅವನೊಂದಿಗಿನ ಬಾಂಧವ್ಯದ ನಂಟು ಅಕ್ಷಯ ಪಾತ್ರೆಯಿದ್ದಂತೆ. ಅಲ್ಲಿ ಅಕ್ಕ ತಂಗಿಯರಿಗೆ ಅವನದೇ ರಕ್ಷೆ, ಅಕ್ಕ ತಂಗಿಯರ ಮದುವೆಯಲ್ಲಿ ಸಂಭ್ರಮದಿಂದ ಓಡಾಡಿದ ಜೀವ ಅವಳನ್ನು ಗಂಡನ ಮನೆಗೆ ಕಳುಹಿಸುವಾಗ ಕಣ್ಮರೆಯಲ್ಲೇ ಕಂಬನಿ ಹರಿಸುವ, ಶುಭ ಹಾರೈಸುವ ನಿಸ್ವಾರ್ಥ ಜೀವ.
ಅಣ್ಣ-ತಮ್ಮಂದಿರು, ಅಕ್ಕತಂಗಿಯರು ಪ್ರೀತಿಯಿಂದ ಕಾಯುವ ಹಬ್ಬ ರಾಖೀ ಹಬ್ಬ. ರಕ್ಷಾಬಂಧನ…ಹೀಗೆ ನಾನಾ ರೀತಿಯಾಗಿ ಕರೆಸಿಕೊಳ್ಳುವ ಹಬ್ಬ ಬರುವುದು ಶ್ರಾವಣ ಮಾಸದಲ್ಲಿ. ತನ್ನ ಸೋದರನಿಗೆ ಸದಾ ಶುಭವಾಗಲೆಂದು, ನನ್ನ ರಕ್ಷಣೆಯಾಗಿರಲೆಂದು ಸೋದರಿ ರಕ್ಷಾಬಂಧನ…ಕಟ್ಟಿ ಆರತಿ ಬೆಳಗಿ ಸಿಹಿ ತಿನಿಸಿದರೆ, ಸೋದರ ಉಡುಗೊರೆ ನೀಡಿ ಸಂಭ್ರಮಿಸುವ ಶುಭದಿನ. ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.
ರಾಖಿ ಎಂದರೆ ಎಳೆ ಹುಡುಗಿಯರಲ್ಲಿ ಹರ್ಷೋಲ್ಲಾಸಗಳು ಉಕ್ಕೇರುತ್ತದೆ,ಪ್ರೌಢ ಮಹಿಳೆಯರಲ್ಲಿ ಭಾವೋತ್ಕಟತೆ ಹಾಗು ವೃದ್ದರಲ್ಲಿ ಸಹಜ ಸಾರ್ಥಕ ಭಾತೃಪ್ರೇಮವನ್ನು ಚಿಮ್ಮಿಸುತ್ತದೆ.
ರಕ್ಷಾಬಂಧನ ನಮ್ಮ ಜೀವನ ಯಜ್ಞದ ಕಂಕಣವೂ ಹೌದು, ರಥೋತ್ಸವ, ಯಜ್ಞ, ಮದುವೆ ಮೊದಲಾದ ಉತ್ಸವಗಳು ನಿರ್ವಿಘ್ನವಾಗಿ ನಡೆಯಲೆಂದು ಶ್ರೀದೇವರನ್ನು ಪ್ರಾರ್ಥಿಸಿ, ದೀಕ್ಷೆತೊಟ್ಟು ಕಂಕಣಕಟ್ಟುವ ಆಚರಣೆ ನಮ್ಮಲ್ಲಿ ಪ್ರಾಚೀನಕಾಲದಿಂದಲೂ ರೂಢಿಯಲ್ಲಿದೆ. ನಮ್ಮ ಜೀವನವೂ ಒಂದು ಯಜ್ಞವಷ್ಟೇ. ವರ್ಷದಲ್ಲಿ ಒಂದು ದಿನ ಪವಿತ್ರವಾದ ರಕ್ಷೆಯನ್ನು ಕಂಕಣದಂತೆ ಧರಿಸಿ, ಆ ವರ್ಷವೆಲ್ಲ ನಮ್ಮ ಕಾರ್ಯಗಳು ಆತಂಕವಿಲ್ಲದೆ ನಡೆಯಲಿ, ಜೀವನ ಯಜ್ಞಕ್ಕೆ ದುಷ್ಟಶಕ್ತಿಗಳು ಆತಂಕವೊಡ್ಡದಿರಲಿ ಎಂದು ಭಗವಂತನ್ನು ಪ್ರಾರ್ಥಿಸುವ ಪವಿತ್ರ ಆಚರಣೆ ಈ ರಕ್ಷಾಬಂಧನ.
ಪೌರಾಣಿಕ ಕಥೆಯಂತೆ ಒಮ್ಮೆ ದೇವೇಂದ್ರನು ಸೋಲುವ ಲಕ್ಷಣ ಕಂಡು ಬಂದಾಗ ಬೃಹಸ್ಪತಿಯ ಸಲಹೆಯಂತೆ ಶ್ರಾವಣ ಹುಣ್ಣಿಮೆಯಂದು ರಕ್ಷಾಸೂತ್ರವನ್ನು ಇಂದ್ರಾಣಿ ಕಟ್ಟಲು ಮರಳಿ ಅಮರಾವತಿಯನ್ನು ಪಡೆ ಯುತ್ತಾನೆ.ರಜಪೂತ ಹಾಗು ಮರಾಠ ಹಿಂದೂ ರಾಣಿಯರು ತಮ್ಮ ರಕ್ಷಣೆಗಾಗಿ ಮುಸ್ಲಿಮ್ ರಾಜರಿಗೆ ರಾಖಿ ಕಳುಹಿಸಿಕೊಟ್ಟ ಉದಾಹರಣೆಗಳೂ ಇವೆ. ಕರ್ಣಾವತಿ ಹುಮಾಯೂನನಿಗೆ ಕಳಿಸಿದ ರಾಖಿಯ ಕಥೆ ಇದಕ್ಕೆ ಪುಷ್ಟಿ ಕೊಡುತ್ತದೆ. ಉತ್ತರ ಭಾರತದಲ್ಲಿನ ಈ ಪ್ರಸಿದ್ಧ ಹಬ್ಬ ಈಗೀಗ ದಕ್ಷಿಣ ಭಾರತದಲ್ಲೂ ಸಾಕಷ್ಟು ಪ್ರಚಲಿತವಾಗಿದೆ.
ರಕ್ಷಾ ಬಂಧನಕ್ಕೆ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಇದೆ. ಮಹಾಭಾರತದಲ್ಲಿ ಶ್ರೀಕೃಷ್ಣನು ಶಿಶುಪಾಲನನ್ನು ವಧಿಸಿದಾಗ ಅವನ ಕೈಗೆ ಗಾಯಾ ಆಗಿ ರಕ್ತ ಸೋರುತ್ತಿತ್ತಂತೆ ಆಗ ದ್ರೌಪದಿಯು ತನ್ನ ಸೆರಗಿನ ಅಂಚನ್ನೇ ಹರಿದು ಕೃಷ್ಣನ ಕೈಗೆ ಕಟ್ಟಿದಳಂತೆ. ಇದಕ್ಕೆ ಪ್ರತಿಯಾಗಿ ಆಕೆಗೆ ಕಷ್ಟ ಬಂದಾಗ ತಾನು ರಕ್ಷಿಸಲು ಬರುತ್ತೇನೆಂದು ಮಾತು ಕೊಟ್ಟನಂತೆ. ಅದರಂತೆ ವಸ್ತ್ರಾಪಹರಣ ಸಂದರ್ಭದಲ್ಲಿ ಶ್ರೀಕೃಷ್ಣನೇ ರಕ್ಷಿಸಿದ. ಅಣ್ಣನಿಗೆ ಯಾವುದೇ ಹಾನಿ ಯಾದರೂ ತಂಗಿ ಅದನ್ನು ಸಹಿಸಿಕೊಳ್ಳಲಾರಳು ಹಾಗೂ ತಂಗಿಗೆ ಅನ್ಯರಿಂದ ತೊಂದರೆಯಾದಾಗ ಅಣ್ಣ ಕೂಡಲೇ ಧಾವಿಸುತ್ತಾನೆ ಎಂಬ ಸೂಚ್ಯಾರ್ಥವೂ ಇದರ ಹಿಂದಿದೆ. ಪರಸ್ತ್ರೀ-ಪುರುಷರಲ್ಲಿ ಸೋದರ ಮನೋಭಾವ ಬೆಳೆಸುವಲ್ಲಿ, ಐಕ್ಯತೆಯ ಭಾವನೆಯನ್ನು ಪ್ರಬೋಧಿಸುವಲ್ಲಿ ಸ್ನೇಹ ಸಂಜೀವಿನಿ ಮಂತ್ರದ ದ್ಯೋತಕವಾಗಿದೆ.
ಮಾರುಕಟ್ಟೆಯಲ್ಲಿಂದ ತರಹೇವಾರಿ ರಾಖಿಗಳು ಬಂದು ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳುತ್ತಿವೆ. ಜೊತೆ ಜೊತೆಗೆ ರಕ್ಷಾಬಂಧನವೆಂಬ ಪವಿತ್ರ ಹಬ್ಬ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿರುವುದು ವಿಷಾದದ ಸಂಗತಿ. ಇದನ್ನು ತಡೆಗಟ್ಟಲು ಹಬ್ಬದ ಹಿನ್ನೆಲೆ, ಸಂಪ್ರದಾಯ ಅರಿತುಕೊಳ್ಳಬೇಕು. ರಾಖಿ ಕಟ್ಟಿದ ಅಥವಾ ಕಟ್ಟಿಸಿಕೊಂಡ ಕ್ಷಣ ಅಲ್ಲಿ ಸೋದರ – ಸೋದರಿ ಬಾಂಧವ್ಯ ಮೂಡದು. ಅದಕ್ಕೆ ಮೊದಲು ಮನಸುಗಳು ಸೋದರತ್ವಕ್ಕೆ ಪರಿಪಕ್ವವಾಗಬೇಕು. ಆಗ ಮಾತ್ರ ಆ ಬಾಂಧವ್ಯ ಹಾಗೂ ರಾಖಿ ಹಬ್ಬ ಪರಿಪೂರ್ಣವೆನಿಸುವುದು.
ನಾವಿಂದು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿದಿದ್ದರೂ ರಕ್ತ ಸಂಬಂಧಗಳನ್ನು ಮರೆಯಬಾರದು. ರಕ್ಷಾಬಂಧನದಂತಹ ಹಬ್ಬಗಳು ಮನಸ್ಸನ್ನು ಮತ್ತಷ್ಟು ಗೆಲುವಿನೆಡೆಗೆ ಕೊಂಡೊಯ್ಯುವುದೆಂಬ ಅರಿವಿರಬೇಕು. ಅಣ್ಣತಮ್ಮಂದಿರಿಗೆ ಹಬ್ಬದ ಶುಭಾಶಯ ಕೋರಿ, ಸಿಹಿ ಹಂಚಿ, ಅದು ಇಡೀ ಒಂದು ವರ್ಷ ಹರ್ಷದಿಂದಿರಲು ನೆರವಾಗುವುದು. ಇದು ಮುಂದಿನ ಪೀಳಿಗೆಗೂ ಬುನಾದಿಯಾದೀತು. ಹಾಗೇ ತಾಯಂದಿರಿಗೊಂಡು ಕಿವಿಮಾತು. ಅಪರಿಚಿತ ಅಥವಾ ಪರಿಚಿತ ವ್ಯಕ್ತಿ ಮಗುವನ್ನು ‘ಅಣ್ಣ ಎಂದು ಕರೆ ಎಂದು ಹತ್ತಿರವಾದಾಗ ಅವನ ನಡವಳಿಕೆ ಬಗ್ಗೆ ನಿಗಾಯಿರಲಿ, ಸಂಬಂಧಗಳ ಪಾವಿತ್ರ್ಯತೆಯ ಬಗ್ಗೆ ಮನವರಿಕೆ ಮಾಡಿಸುವುದು ಪೋಷಕರ ಕರ್ತವ್ಯವಲ್ಲವೇ? ರಕ್ಷಾಬಂಧನ ರಕ್ಷೆಯಾಗಲಿ ಮುಗ್ಧ, ಹೆಣ್ಣು ಮಕ್ಕಳ ಬಾಳಿಗೆ ಶಿಕ್ಷೆಯಾಗದಿರಲಿ ಅಲ್ಲವೇ?!
Get In Touch With Us info@kalpa.news Whatsapp: 9481252093






Discussion about this post