ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಮ್ಮ 15ನೆಯ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭದಿಂದಲೇ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸುವ ವೇದಿಕೆಯನ್ನಾಗಿ ಮಾಡಿಕೊಂಡಿದ್ದು, ಬಿಜೆಪಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಬಜೆಟ್ ಮಂಡನೆ ಆರಂಭಿಸಿದ ಸಿದ್ದರಾಮಯ್ಯ ಆರಂಭದಿಂದಲೂ ಕೇಂದ್ರ ಸರ್ಕಾರ ಹಾಗೂ ಹಿಂದಿನ ಬಿಜೆಪಿ ರಾಜ್ಯ ಸರ್ಕಾರವನ್ನು ಟೀಕಿಸಲು ಆರಂಭಿಸಿದರು.

ರಾಜ್ಯ ಸರ್ಕಾರ ಯೋಜಿಸಿದ ಯೋಜನೆಗಳು ಕೇವಲ ಚುನಾವಣಾ ಗಿಮಿಕ್ ಅಲ್ಲ. ನಿಷ್ಪಕ್ಷಪಾತ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸಂಪತ್ತನ್ನು ಎಲ್ಲೆಡೆ ಹಂಚಲು ಕೈ ಕೊಂಡ ಯೋಜನೆಗಳಿವು. ಕೇಂದ್ರ ಸರ್ಕಾರ ಮಾಡದ್ದನ್ನು ಕರ್ನಾಟಕ ಸರಕಾರ ಮಾಡಿ ತೋರಿಸಿದ ಕೀಳಾದವನೂ ಮೇಲೆ ಬರಲು ಅವಕಾಶ ಮಾಡಿಕೊಡಲು, ಕುವೆಂಪು ಅವರ ಆಧ್ಯಾತ್ಮಿಕ ದೃಷ್ಟಿಯಿಂದ ಮುನ್ನಡೆಸಲು ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೂ ಕನಿಷ್ಠ 50 ಸಾವಿರ ರೂ. ನೀಡಲಾಗುತ್ತಿದೆ. ಇದರ ಜಾರಿಗೆ ಇಡೀ ಭಾರತವೇ ಕರ್ನಾಟಕದ ಮೇಲೆ ಮೆಚ್ಚುಗೆ ಸೂಚಿಸಿದೆ. ಅಂತಾರಾಷ್ಟ್ರೀಯ ಸಂಸ್ಥೆಗಳೂ ನಮ್ಮ ಯೋಜನೆಗಳಿಗೆ ಪ್ರಶಂಸಿಸಿವೆ ಎಂದರು.

ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಜಿಎಸ್’ಟಿಯನ್ನು ಜಾರಿಗೊಳಿಸಿದ ಪರಿಣಾಮ ಹಲವು ರಾಜ್ಯಗಳಿಗೆ ನಷ್ಟ ಉಂಟಾಗಿದೆ. ಕೇಂದ್ರ ಸರ್ಕಾರದ ಹೊಣೆಗೇಡಿತನದಿಂದಾಗಿ ಅಧಿಕ ತೆರಿಗೆ ಪಾವತಿ ಮಾಡುವ ಕರ್ನಾಟಕದಂತಹ ರಾಜ್ಯಗಳು ತೊಂದರೆಗೆ ಸಿಲುಕಿವೆ. ಆದರೆ, ನಾವು ಯಾವುದಕ್ಕೂ ಹೆದರದೇ ಮುನ್ನಡೆಯುತ್ತಿದ್ದೇವೆ. ಇದಕ್ಕಾಗಿಯೇ ಗ್ಯಾರೆಂಟಿಗಳನ್ನು ಜಾರಿಗೊಳಿಸಿದ್ದೇವೆ ಎಂದರು.

ಬಜೆಟ್ ಭಾಷಣದಲ್ಲಿ ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಹಾಗೂ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ ಸಿದ್ದರಾಮಯ್ಯ ವಿರುದ್ಧ ಸದನದಲ್ಲಿ ಪ್ರತಿಪಕ್ಷಗಳು ತೀವ್ರ ಟೀಕಿಸಿದರು.
ಬಜೆಟ್ ಭಾಷಣದ ವೇಳೆ ದನಿ ಎತ್ತಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ನಿಮ್ಮ ಆಡಳಿತದಿಂದಾಗಿ ರಾಜ್ಯದ ಬೊಕ್ಕಸಕ್ಕೆ ತೊಂದರೆಯುಂಟಾಗಿದೆ. ನಮ್ಮ ಹಿಂದಿನ ರಾಜ್ಯ ಸರ್ಕಾರ ಹಾಗೂ ಕೇಂದ್ರದಿಂದ ಅನ್ಯಾಯ ಉಂಟಾಗಿಲ್ಲ. ಸುಳ್ಳು ಹೇಳುತ್ತಿದ್ದೀರಿ ಎಂದು ಟೀಕಿಸಿದರು.
ನಿಮ್ಮದು ಲೂಟಿಕೋರ ಸರ್ಕಾರ ಎಂದು ಟೀಕಿಸಿದ ಪ್ರತಿಪಕ್ಷಗಳು ಪೋಸ್ಟರ್ ಹಿಡಿದು ಘೋಷಣೆ ಕೂಗಿದರು.
ಇದರಿಂದಾಗಿ ಸದನದಲ್ಲಿ ಕೆಲಕಾಲ ಗೊಂದಲ ಉಂಟಾಗಿದ್ದು, ಮಧ್ಯಪ್ರವೇಶಿಸಿದ ಸ್ಪೀಕರ್ ಪ್ರತಿಪಕ್ಷ ಸದಸ್ಯರನ್ನು ಸಮಾಧಾನ ಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post