ಕಲ್ಪ ಮೀಡಿಯಾ ಹೌಸ್ | ಸೊರಬ |
ಕನ್ನಡ ಪರಿಪೂರ್ಣ ಭಾಷೆ, ಭಾಷೆ ಚಲನಶೀಲ ವಾಗಿರಬೇಕು. ಸರ್ವವನ್ನು ತನ್ನೊಳಗೆ ಅಳವಡಿಸಿಕೊಂಡು ಭಾಷೆ ವಿಸ್ತಾರಗೊಳ್ಳಬೇಕು. ಅಂತಹ ಭಾಷೆ ಶಾಶ್ವತವಾದ ನೆಲೆ ಹೊಂದಬಲ್ಲದು. ಯಾವ ಭಾಷೆ ಪರಿವರ್ತನೆ ಹೊಂದ ಲಾರದೋ ಅಂತಹ ಭಾಷೆಗೆ ನೆಲೆ ಇರದು ಎಂದು ಜಡೆ ಹಿರೇಮಠದ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಚಾಮರಾಜ ಪೇಟೆ ಕಾನುಕೇರಿ ಮಠದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ ಆಯೋಜಿಸಿದ್ದ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಸಾಹಿತಿ ನಾ ಡಿಸೋಜ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶಿರ್ವಚನ ನೀಡಿದರು.
ಜಗತ್ತಿನಲ್ಲಿ ಹಲವಾರು ಭಾಷೆಗಳಿವೆ. ಬರೆಯುವದು ಒಂದು ತರಹವಾದರೆ ಉಚ್ಚರಿಸುವುದು ಮತ್ತೊಂದು ತರಹ. ಆದರೆ ಬರೆದಂತೆ ಓದುವ ಭಾಷೆ ಕನ್ನಡ. ಸಾವಿರದ ಆರು ನೂರು ವರ್ಷಗಳ ಕನ್ನಡ ಭಾಷೆ ಸದಾ ಪರಿವರ್ತನಾ ಶೀಲವಾಗಿದ್ದು ಶಾಶ್ವತವಾಗಿ ನೆಲೆ ಹೊಂದಿದೆ. ಭಾಷೆಯ ಉಳಿವು ಇಡೀ ಜನಸಮೂಹದ ಸಂಸ್ಕೃತಿಯ ಉಳಿವು ಎಂಬುದನ್ನು ಮನಗಾಣಬೇಕು ಎಂದರು.
ಉದ್ಘಾಟಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಕಟ್ಟುವ ಕಾಯಕದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ತೊಡಗಿಕೊಳ್ಳುತ್ತಾ ಬಂದಿದೆ. ಆದರೆ ಕನ್ನಡ ಕಟ್ಟುವ ಕೆಲಸ ಸುಲಭದ ಕೆಲಸವಲ್ಲ. ಇಂದು ಕನ್ನಡ ಪುಸ್ತಕ ಓದುವ, ಬರೆಯುವ, ಮಾತನಾಡುವ ಸನ್ನಿವೇಷ ತುಂಬಾ ಆತಂಕಕಾರಿಯಾಗಿದೆ ಎಂಬುದನ್ನು ನಾವು ಮರೆಯಬಾರದು ಎಂದರು.
Also read: ಸೂರ್ಯ ಪಥ ಬದಲಿಸುವ ವೈಜ್ಞಾನಿಕತೆಯನ್ನು ಹಬ್ಬವಾಗಿ ಆಚರಿಸುವ ಸಂಸ್ಕೃತಿ ನಮ್ಮದು: ಸೋಮಶೇಖರಯ್ಯ
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಷಣ್ಮುಖಾಚಾರ್ ಮಾತನಾಡಿ, ಕನ್ನಡ ಭಾಷೆಗೆ ಕನ್ನಡ ನೆಲದಲ್ಲಿಯೇ ಅಪಾಯವನ್ನು ನಾವು ತಂದು ಕೊಂಡಿದ್ದೇವೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಅವರವರ ರಾಜ್ಯ ಭಾಷೆಗೆ ಅಪಾರ ಅಭಿಮಾನ, ಗೌರವ ನೀಡಿ ಭಾಷಾಭಿಮಾನದ ಮೂಲಕ ಆಯಾ ನೆಲೆಯ ಭಾಷೆಯನ್ನು ಶ್ರೀಮಂತ ಗೊಳಿಸಿದ್ದಾರೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಹೆಚ್.ಗಣಪತಿ ಕಸಾಪ ಸಾರಥ್ಯದ ಸಾಹಿತ್ಯ ಸುಗಂಧ ಮಾಸ ಪತ್ರಿಕೆ ಬಿಡುಗಡೆಗೊಳಿಸಿದರು.
ಡಾ.ಜ್ಞಾನೇಶ್ ಕಸಾಪ ಕಾರ್ಯಚಟುವಟಿಕೆಗಳ ಕೈಪಿಡಿ ಬಿಡುಗಡೆಗೊಳಿಸಿದರು.
ಬಾಲಾಜಿ ನೃತ್ಯ ಶಾಲಾ ಮಕ್ಕಳು ಸ್ವಾಗತ ನೃತ್ಯ ಮಾಡಿದರು. ಲಯನ್ಸ್ ಶಾಲಾ ಮಕ್ಕಳಿಂದ ನೃತ್ಯ ವೈಭವ ನಡೆಯಿತು. ರೂಪಾ ಮಧುಕೇಶ್ವರ ಕನ್ನಡ ಗೀತೆ ಹಾಡಿದರು. ಸಭೆಯ ಆರಂಭಕ್ಕೂ ಮೊದಲು ಸಾಹಿತಿ ನಾ ಡಿಸೋಜ, ನೇಕಾರ ರಾಮಕೃಷ್ಣ, ಪತ್ರಕರ್ತ ಶಿವಮೊಗ್ಗ ನಂದನ್ ಸೇರಿದಂತೆ ಆಗಲಿದ ಗಣ್ಯರಿಗೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಗಾಯಕರಾದ ಹೆಚ್.ಗುರುಮೂರ್ತಿ, ಪೂರ್ಣಿಮಾ ಭಾವೆ, ಈರಪ್ಪ ಹೆಚ್, ಡಿ. ಶಿವಯೋಗಿ ತಂಡದವರಿಂದ ಕನ್ನಡ ಗೀತಗಾಯನ ನಡೆಯಿತು.
ಡಾ.ರಾಜೇಂದ್ರ ತಲ್ಲೂರು ಕವನ ವಾಚಿಸಿದರು. ಜಾನಪದ ಗಾಯಕ ಶಿವರುದ್ರಪ್ಪ ಜೋಗಿ ತಂಡದವರಿಂದ ಜಾನಪದ ಸಂಭ್ರಮ ನಡೆಯಿತು.
ಮಧುರಾಯ್ ಜಿ. ಶೇಟ್, ಶ್ರೀಪಾದ ಬಿಚ್ಚುಗತ್ತಿ, ಶಿವಾನಂದ ಪಾಣಿ, ಹೆಚ್. ಗಣಪತಿ, ಫಯಾಜ್ ಅಹ್ಮದ್, ಕುಮಾರಸ್ವಾಮಿ, ಹುಜ್ರಾಯಪ್ಪ, ಸುಜಾತ ಜೋತಾಡಿ, ರಾಜಪ್ಪ ಮಾಸ್ತರ್, ಡಾ ಎಂ.ಕೆ ಭಟ್, ಡಾ.ಜ್ಞಾನೇಶ್ ಹೆಚ್. ಕೆ.ಈ, ಎಸ್.ಕೃಷ್ಣಾನಂದ, ಹಾಲೇಶ್ ನವುಲೆ, ಡಿ.ಎಸ್ ಶಂಕರ ಶೇಟ್, ಮತ್ತಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post