ಕಲ್ಪ ಮೀಡಿಯಾ ಹೌಸ್ | ಸೊರಬ |
ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ಸರ್ಕಾರ ಮತ್ತು ಅಧಿಕಾರಿಗಳದ್ದು ಮಾತ್ರವಾಗಿರದೇ ಮಾಧ್ಯಮಗಳ ಪಾತ್ರವೂ ಅತಿ ಹೆಚ್ಚಿದೆ ಎಂದು ಜೆಎಂಎಫ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭಾಕರ ರಾವ್ ಹೇಳಿದರು.
ಬುಧವಾರ ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಎಚ್‍ಪಿಆರ್ ನರ್ಸಿಂಗ್ ಕಾಲೇಜ್ ಸೇರಿದಂತೆ ವಿವಿಧ ಇಲಾಖೆಗಳ ಸಹಾಯೋಗದಲ್ಲಿ ಹಮ್ಮಿಕೊಂಡ ವಿಶ್ವ ತಂಬಾಕು ರಹಿತ ದಿನಾಚರಣೆ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ತಂಬಾಕು ನಿಯಂತ್ರಣಕ್ಕಾಗಿ ಕಾನೂನಿನಲ್ಲಿ ಕಾಯ್ದೆಗಳಿದ್ದು, ಅಧಿಕಾರಿಗಳು ಕಾಯ್ದೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ಗ್ರಾಮೀಣ ಮಟ್ಟದಲ್ಲಿ ತಂಬಾಕು ನಿಯಂತ್ರಣಕ್ಕಾಗಿ ಗ್ರಾಪಂ ಪಿಡಿಒಗಳಿಗೆ ಜವಾಬ್ದಾರಿ ನೀಡುವ ಅಗತ್ಯವಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ನಿಯಂತ್ರಿಸಲು ಸರ್ಕಾರ ತಾಲೂಕು ಮಟ್ಟದ ಅಧಿಕಾರಿಗಳಿಗೆ ಅಧಿಕಾರವನ್ನು ನೀಡಿದೆ. ಆದರೆ, ಈವರೆಗೂ ಅಧಿಕಾರಿಗಳು ಸಮರ್ಪಕವಾಗಿ ಹಾಗೂ ಪೂರ್ಣ ಪ್ರಮಾಣದಲ್ಲಿ ಕಾಯ್ದೆಯನ್ನು ಅನುಷ್ಠಾನಗೊಳಿಸಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಜೆಎಂಎಫ್‍ಸಿ ಸಿವಿಲ್ ನ್ಯಾಯಾಧೀಶ ಅಬ್ದುಲ್ ಸಲೀಂ ಮಾತನಾಡಿ, ಆಧುನಿಕ ಜೀವನ ಶೈಲಿಗೆ ಒಗ್ಗಿಕೊಳ್ಳುತ್ತಿರುವ ಯುವ ಜನತೆ ಸ್ತ್ರೀ-ಪುರುಷ ಎಂಬ ಬೇಧವಿಲ್ಲದೇ ತಂಬಾಕು ಸೇವನೆ ಮಾಡುತ್ತಿರುವುದನ್ನು ಕಾಣಬಹುದು. ಇದರಿಂದ ಭವಿಷ್ಯದಲ್ಲಿ ಗಂಡಾಂತರ ಎದುರಿಸಬೇಕಾಗುತ್ತದೆ. ಮೋಜಿಗಾಗಿ ಆರಂಭವಾಗುವ ದುಷ್ಚಟಗಳು ನಂತರದ ದಿನದಲ್ಲಿ ಜೀವಕ್ಕೆ ಕುತ್ತು ತರುತ್ತವೆ. ಈ ಸಾಲಿನಲ್ಲಿ ಮುಖ್ಯವಾಗಿ ತಂಬಾಕು ಸೇವನೆ ಸೇರಿದೆ. ಯುವ ಜನತೆ ದುಷ್ಚಟಗಳಿಗೆ ಬಲಿಯಾಗದೇ ಉತ್ತಮ ಪ್ರಜೆಗಳಾಗಬೇಕು ಜೊತೆಗೆ ತಂಬಾಕು ನಿಯಂತ್ರಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ನಂತರ ಸ್ತ್ರೀ ಶಕ್ತಿ ಭವನದಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವರೆಗೆ ಜಾಥಾ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಹುಸೇನ್ ಸರಕಾವಸ್, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭು ಸಾಹುಕಾರ್, ಪ್ರಭಾರ ಬಿಇಒ ದಯಾನಂದ ಕಲ್ಲೇರ್, ಅಪರಾಧ ವಿಭಾಗದ ಪಿಎಸ್‍ಐ ಮಾಳಪ್ಪ ಚಿಪ್ಪಲಕಟ್ಟಿ, ಎಚ್‍ಪಿಆರ್ ನರ್ಸಿಂಗ್ ಕಾಲೇಜ್ ಪ್ರಾಂಶುಪಾಲ ಮಂಜುನಾಥ್, ತಾಪಂ ಸಹಾಯಕ ನಿರ್ದೇಶಕಿ ಸೀಮಾ, ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ, ಹಿರಿಯ ಆರೋಗ್ಯ ಸಹಾಯಕಿ ಕುಸುಮಾ, ಯಶವಂತ್ ಶಾಮ್, ಶಬ್ಬೀರ್ ಖಾನ್, ಶಿಲ್ಪಾ, ಸೇರಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಎಚ್‍ಪಿಆರ್ ನರ್ಸಿಂಗ್ ಕಾಲೇಜ್‍ನ ವಿದ್ಯಾರ್ಥಿಗಳು ಉಪಸ್ಥಿತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post