ಕಲ್ಪ ಮೀಡಿಯಾ ಹೌಸ್
ಸೊರಬ: ಮೊಬೈಲ್ ಟವರ್‌ಗಳಿಗೆ ಅಳವಡಿಸಿದ್ದ ಬೆಲೆಬಾಳುವ ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದ ಆರು ಮಂದಿಯನ್ನು ಪಟ್ಟಣದ ಪೊಲೀಸರು ಬಂಧಿಸಿ, ಲಕ್ಷಾಂತರ ರೂ., ಮೌಲ್ಯದ ಬ್ಯಾಟರಿ ಮತ್ತು ಕೃತ್ಯಕ್ಕೆ ಬಳಸಿದ್ದ ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ತಾಲ್ಲೂಕಿನ ಮಾವಲಿ ಗ್ರಾಮದ ಮೊಬೈಲ್ ಟವರ್‌ಗೆ ಅಳವಡಿಸಿದ್ದ 48 ಬ್ಯಾಟರಿಗಳು ಏ.14ರಂದು ಕಳುವಾಗಿತ್ತು. ಈ ಬಗ್ಗೆ ಮೊಬೈಲ್ ಟವರ್‌ನ ಟೆಕ್ನಿಷಿಯನ್ ವಿನಯ್ ದೂರು ಸಲ್ಲಿಸಿದ್ದರು. ಖಚಿತ ಮಾಹಿತಿ ಮೇರೆಗೆ ಕಾನುಕೊಪ್ಪ ಬಳಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಶಿಕಾರಿಪುರ ಡಿವೈಎಸ್‌ಪಿ ಶಿವಾನಂದ ಮದರಕಂಡಿ, ಸಿಪಿಐ ಆರ್.ಡಿ. ಮರುಳಸಿದ್ದಪ್ಪ ಮಾರ್ಗದರ್ಶನದಲ್ಲಿ ಪಿಎಸ್‌ಐ ಟಿ.ಬಿ. ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಎಎಸ್‌ಐ ಶಬ್ಬೀರ್‌ಖಾನ್, ಸಿಬ್ಬಂದಿ ದಿನೇಶ್, ಸಂದೀಪ್, ಶಿವಾಜಿ, ಸಿದ್ದನಗೌಡ, ಉಮೇಶ್, ಮೋಹನ್, ಮಂಜುನಾಥ ದೈವಜ್ಞ, ಪ್ರಭಾಕರ ಹಾಗೂ ಜಗದೀಶ ಬೇಲೂರಪ್ಪನವರ್ ಪಾಲ್ಗೊಂಡಿದ್ದರು.

ಕಳುವು ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಲ್ಲಿ ಓರ್ವ ಮೊಬೈಲ್ ಟವರ್ ಕಂಪನಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ, ಮತ್ತೋರ್ವ ಗುಜರಿ ವ್ಯಾಪಾರಿಯಾಗಿದ್ದಾನೆ. ಮೊಬೈಲ್ ಟವರ್ ಬ್ಯಾಟರಿಗಳಿಗೆ ಹಾಗೂ ಗುಜರಿಗೆ ಸಂಬಂಧವಿದೆಯೇ ಎನ್ನುವ ಪ್ರಶ್ನೆಯ ನಡುವೆ, ಮತ್ತೋರ್ವ ಆರೋಪಿ ಉತ್ತರ ಪ್ರದೇಶ ಮೂಲದವನಾಗಿದ್ದಾನೆ. ಈ ಕಳುವು ಪ್ರಕರಣದ ಹಿಂದೆ ಬ್ಯಾಟರಿ ಕಳುವಿನ ಜಾಲವಿದ್ದು, ಕಳವು ಪ್ರಕರಣದಲ್ಲಿ ಭಾಗಿಯಾಗಿರುವವರು ವೃತ್ತಿಪರ ಕಳ್ಳತನದಲ್ಲಿ ಪಾಲ್ಗೊಂಡವರೇ ಎನ್ನುವ ಅನುಮಾನ ಇದೀಗ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ. ಆದರೆ, ಕಳವುಗೊಂಡ ವಸ್ತುಗಳನ್ನು ಪ್ರಕರಣ ದಾಖಲುಗೊಂಡ ಒಂದೇ ದಿನದಲ್ಲಿ ಪತ್ತೆ ಹಚ್ಚಿದ ಸೊರಬ ಪೊಲೀಸರ ಕಾರ್ಯಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post