ಕಲ್ಪ ಮೀಡಿಯಾ ಹೌಸ್ | ಸೊರಬ |
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದ್ದು, ಜೊತೆಗೆ ಉತ್ತಮ ಆರೋಗ್ಯಕ್ಕೂ ಸಹ ಒತ್ತು ನೀಡಬೇಕಿದೆ ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಹೇಳಿದರು.
ಪಟ್ಟಣದ ಚಾಮರಾಜ ಪೇಟೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಸಂಜೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಶಿಕ್ಷಣ ನೀಡಿದರೆ ಸಾಲದು, ಮೌಲ್ಯಯುತ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡಿದಾಗ ಮಕ್ಕಳು ಪರಿಪೂರ್ಣ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯವಿದೆ. ಮಕ್ಕಳನ್ನು ಕೇವಲ ಅಂಕಗಳಿಕೆಗೆ ಸೀಮಿತಗೊಳಿಸುವುದು ಸಲ್ಲದು. ಕ್ಷೇತ್ರವು ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಸ್ಥಾನಹೊಂದಬೇಕು ಎನ್ನುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಕೈಲಾದಷ್ಟು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಆನವಟ್ಟಿಯಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಭರತನಾಟ್ಯ ನೃತ್ಯ ತರಬೇತಿ ನೀಡುವ ಮೂಲಕ ರಾಷ್ಟçಮಟ್ಟದಲ್ಲಿ ಶಿಲ್ಪಾ ಅನೂಪ್ ಅವರು ಸಾಧನೆ ಮಾಡಿರುವುದು ತಾಲೂಕಿನ ಹೆಮ್ಮೆಯ ವಿಷಯವಾಗಿದೆ ಎಂದರು.
ವಿದ್ಯಾರ್ಥಿ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲಿ ಟಿವಿ, ಮೊಬೈಲ್ ಗೀಳಿಗೆ ಒಳಗಾಗದೆ ಓದಿನ ಕಡೆ ಹೆಚ್ಚಿನ ಗಮನ ನೀಡಬೇಕು. ನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಂಡಲ್ಲಿ ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಮತ್ತು ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಪೋಷಕರು ಸಹ ಮಕ್ಕಳ ಚಲನವಲನಗಳ ಮೇಲೆ ನಿಗಾವಹಿಸಬೇಕು ಎಂದು ತಿಳಿಸಿದರು.
ವಿಶ್ವದಾಖಲೆ ಬರೆದ ಪಾಂಡಿಚೇರಿಯಲ್ಲಿ ನಡೆದ ಆನಂದ ತಾಂಡವ ಭರತನಾಟ್ಯದಲ್ಲಿ ಪಾಲ್ಗೊಂಡ ನೃತ್ಯಗಾರ್ತಿ ಶಿಲ್ಪಾ ಅನೂಪ್, ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನಗಳಿಸಿದ ಕೀರ್ತಿ ಚಂದ್ರಪ್ಪ ಬೆಳಗಲದ (ಕಲಾ ವಿಭಾಗ), ಜೆ.ಡಿ. ದೊರೆಪಾಟೀಲ್ (ವಿಜ್ಞಾನ ವಿಭಾಗ), ಎಸ್.ಬಿ. ತರುಣ (ವಾಣ ಜ್ಯ ವಿಭಾಗ) ಅವರನ್ನು ಸನ್ಮಾನಿಸಲಾಯಿತು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ಚೇತನಕ್ಕ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ನಾಗರಾಜ ಗುತ್ತಿ, ಕನ್ನಡ ಸಾಂಸ್ಕೃತಿಕ ಜಗಲಿ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ, ಉಪನ್ಯಾಸಕರಾದ ಡಾ. ಉಮೇಶ್ ಭದ್ರಾಪುರ, ವಿಜಯಕುಮಾರ್ ದಟ್ಟೇರ್, ನಮ್ಮೂರು ಸಂಸ್ಥೆಯ ಎಸ್. ರಾಘವೇಂದ್ರ, ಯುವಾ ಬ್ರಿಗೇಡ್ ತಾಲೂಕು ಸಂಚಾಲಕ ಮಹೇಶ್ ಖಾರ್ವಿ, ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ, ಪ್ರಾಂಶುಪಾಲ ಮಂಜುನಾಥ್, ರಮೇಶ್ ಕಲ್ಲಂಬಿ, ವಿನೋದ್ ವಾಲ್ಮೀಕಿ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post