ಕಲ್ಪ ಮೀಡಿಯಾ ಹೌಸ್ | ಸೊರಬ |
ಸನಾತನ ಹಿಂದೂ ಸಂಸ್ಕೃತಿಯಲ್ಲಿ ಗೋವುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಹಿಂದೂ ಸಮಾಜ ಒಗ್ಗಟ್ಟಿನಿಂದ ಜಾಗೃತರಾಗಬೇಕಿದೆ ಎಂದು ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಎಂ.ಎಸ್. ಕಾಳಿಂಗರಾಜ್ ಹೇಳಿದರು.
ತಾಲೂಕಿನ ಉದ್ರಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್-ಬಜರಂಗದಳದ ವತಿಯಿಂದ ಶುಕ್ರವಾರ ಹಮ್ಮಿಕೊಂಡ ಗೋ ಪೂಜೆ ಹಾಗೂ ಗ್ರಾಮದಲ್ಲಿ ಗೋ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೋವಿಗೆ ಭಾರತೀಯರು ಅತ್ಯಂತ ಪೂಜನೀಯ ಸ್ಥಾನ ನೀಡಲಾಗಿದ್ದು, ಮೂಕ್ಕೋಟಿ ದೇವತೆಗಳನ್ನು ಗೋ ಮಾತೆಯಲ್ಲಿ ಕಾಣುತ್ತೇವೆ. ಇಂತಹ ಗೋ ಮಾತೆಯ ರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು. ಈ ಮೂಲಕ ಹಿಂದೂ ಧರ್ಮದ ರಕ್ಷಣೆಯೇ ನಮ್ಮ ಗುರಿಯಾಗಿದ್ದು, ಧರ್ಮದ ಅಸ್ತಿತ್ವ ಮತ್ತು ಹಿಂದೂಗಳ ಭಾವನೆಗಳನ್ನು ಉಳಿಸಿ, ಮುಂದಿನ ಪೀಳಿಗೆ ನೀಡಬೇಕಾದ ಮಹತ್ವದ ಹೊಣೆಯನ್ನು ಹೊರಬೇಕಿದೆ ಎಂದು ತಿಳಿಸಿದರು.
ತಾಯಿಯ ಹಾಲನ್ನು ಮಗು ಒಂಬತ್ತು ತಿಂಗಳು ಮಾತ್ರ ಕುಡಿಯುತ್ತದೆ. ಆದರೆ, ಗೋ ಮಾತೆ ಮನುಷ್ಯನ ಜೀವಿತಾವಧಿಯ ವರೆಗೆ ಹಾಲನ್ನು ನೀಡುತ್ತಾಳೆ. ಆದ್ದರಿಂದ ಗೋವನ್ನು ಮಹಾತಾಯಿ ಎಂದು ಕರೆಯಬಹುದು. ದೇಶದ ಸಂಸ್ಕೃತಿಗೆ ಜಗತ್ತೇ ಗೌರವ ನೀಡುತ್ತಿದೆ. ಸಾವಿರಾರು ವರ್ಷಗಳ ಅನೇಕ ದಾಳಿಗಳನ್ನು ಎದುರಿಸಿದರೂ ಸಹ ಹಿಂದೂ ಧರ್ಮ ಉಳಿದಿದೆ ಎಂದರೆ, ದೇಶದ ಸಾಧು ಸಂತರ ಹಾಗೂ ಋಷಿಮುನಿಗಳ ಕೊಡುಗೆ ಸಾಕಷ್ಟಿದೆ ಎಂದರು.
ಇದಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳೊಂದಿಗೆ ಗೋ ಮಾತೆಯ ಮೆರವಣಿಗೆ ಮಾಡಲಾಯಿತು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಎಚ್.ಎಲ್. ಚಂದನ್, ನಗರ ಕಾರ್ಯದರ್ಶಿ ರವಿ ಗುಡಿಗಾರ್, ಬಜರಂಗದಳ ನಗರ ಸಂಚಾಲಕ ಶಶಿಕುಮಾರ್, ಉದ್ರಿ ಗ್ರಾಮದ ಕಾರ್ಯಕರ್ತರಾದ ಗಣೇಶ್ ಬಳೆಗಾರ, ಪವನ್, ಜಾನಕ, ಅಜಿತ್, ಕೆ.ಬಿ. ಚಂದ್ರಶೇಖರ್, ಮಾರುತಿ, ಬಿ.ಕೆ. ರವಿ, ಎಸ್.ಪಿ. ರಾಜೇಂದ್ರ, ರಮೇಶ್, ಭರತ್, ಕಿರಣ್, ವಿಜಯ್, ಅರುಣ್, ಎಸ್.ಕೆ. ಪವನ್, ಟಿ.ಬಿ. ಮಾರುತಿ, ಎಚ್.ಕೆ. ಶಶಿಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post