ಕಲ್ಪ ಮೀಡಿಯಾ ಹೌಸ್ | ಸೊರಬ |
ದಲಿತ ಮಹಿಳೆಗೆ ಅಪಮಾನ ಮಾಡಿದ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶನಿವಾರ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರ ಮೂಲಕ ರಾಜ್ಯ ಸರ್ಕಾರ ಮನವಿ ಸಲ್ಲಿಸಲಾಯಿತು.
ನೇತೃತ್ವ ವಹಿಸಿದ್ದ ಸಮಿತಿಯ ತಾಲೂಕು ಸಂಚಾಲಕ ಎಚ್. ಬಸವರಾಜ ಹಸ್ವಿ ಮಾತನಾಡಿ, ಇತ್ತೀಚೆಗೆ ಕೊಪ್ಪಳದಲ್ಲಿ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರು ಸಾಮಾನ್ಯ ದಲಿತ ಮಹಿಳೆ ಕೂಡ ಚಾಮುಂಡಿಯ ಮುಡಿಗೆ ಹೂವನ್ನು ಮುಡಿಸಲು ಯೋಗ್ಯರಲ್ಲ. ಸನಾತನ ಧರ್ಮದವರು ಮಾತ್ರ ಹೂ ಮುಡಿಸಬೇಕೆಂದು ಹೇಳಿಕೆ ನೀಡಿರುವುದು ದಲಿತ ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ. ಅವರ ವಿರುದ್ದ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ದಲಿತರನ್ನು ಅವಮಾನಿಸಿ ಮಾತನಾಡಿರುವದನ್ನು ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಎಲ್ಲ ಹೆಣ್ಣುಮಕ್ಕಳಿಗೆ ಸಮಾನವಾದ ಹಕ್ಕನ್ನು ನೀಡಿರುವ ಬಾಬಾಸಾಹೇಬ ಅಂಬೇಡ್ಕರ ಅವರ ಸಂವಿಧಾನವನ್ನು ಧಿಕ್ಕರಿಸಿ ಯತ್ನಾಳ ಅವರು ಮಾತನಾಡಿದ್ದಾರೆ. ಮೈಸೂರು ದಸರಾ ಉತ್ಸವದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಸನಾತನ ಧರ್ಮದವರು ಮಾತ್ರ ಹೂ ಮುಡಿಸಬೇಕು ಮತ್ತು ಪೂಜೆ ಸಲ್ಲಿಸಬೇಕು ಎಂದು ದಲಿತ ವಿರೋಧಿ ಹೇಳಿಕೆ ನೀಡಿ ದಲಿತ ಮಹಿಳೆಯರಿಗೆ ಅವಮಾನಿಸಿದ್ದಾರೆ. ಇವರು ಜಾತಿ ವಿರೋಧಿ ಚಟುವಟಿಕೆ ಮತ್ತು ಜಾತಿ ಜಾತಿಗಳ ನಡುವೆ ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಯತ್ನಾಳ್ ಅವರ ವಿರುದ್ಧ ಎಸ್ಸಿಎಸ್ಟಿ ದೌರ್ಜನ್ಯ ಕಾಯ್ದೆಯಡಿ ಬಂಧಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಮಹಿಳಾ ಸಂಚಾಲಕಿ ಗಂಗಮಾಳಮ್ಮ, ತಾಲೂಕು ಸಂಘಟನಾ ಸಂಚಾಲಕ ದಿನೇಶ ಹಣಜಿ, ಶೇಖರ ಚಿಕ್ಕಶಕುನ, ಮಂಜಪ್ಪ ಮಾವಲಿ, ರಶೀದ್ ಅಹಮ್ಮದ್, ಮಲ್ಲೇಶಪ್ಪ ಮಾವಲಿ, ಇರ್ಫಾನ್ ಭಾಷಾ, ಸುರೇಶ್ ಬಿಳವಾಣಿ, ವಕೀಲ ಲಕ್ಷಣ ಕಕ್ಕರಸಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವಿಕ್ರಂ ಸೇರಿದಂತೆ ಇತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















