ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಕಮರೂರು ಗ್ರಾಮದಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗದ ಕುಟುಂಬದವರಿಗೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಮಹೇಶ ಶಕುನವಳ್ಳಿ ಆಗ್ರಹಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೋಮವಾರ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಚಂದ್ರಗುತ್ತಿ ಹೋಬಳಿಯ ಬೆನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮರೂರು ಗ್ರಾಮದಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗದ ಕುಟುಂಬಗಳಿಗೆ ಸ್ಮಶಾನ ಭೂಮಿ ಮಂಜೂರಾತಿಗೆ ಆಗ್ರಹಿಸಿ ಹಮ್ಮಿಕೊಂಡ ಧರಣಿಯ ನೇತೃತ್ವವಹಿಸಿ ಅವರು ಮಾತನಾಡಿದರು.
ಹಲವಾರು ವರ್ಷಗಳಿಂದ ಕಮರೂರು ಗ್ರಾಮದಲ್ಲಿ ಅಲೆಮಾರಿ ಜನಾಂಗ ವಾಸವಾಗಿದ್ದು, ಯಾರಾದರೂ ನಿಧನ ಹೊಂದಿದರೆ ನಿರ್ಧಿಷ್ಟವಾದ ಸ್ಮಶಾನ ಭೂಮಿ ಇಲ್ಲದೇ ಇರುವುದರಿಂದ ಹತ್ತಾರು ಕಿ.ಮೀ ದೂರದ ಅರಣ್ಯ ಪ್ರದೇಶದಲ್ಲಿ ಶವ ಸಂಸ್ಕಾರ ಮಾಡಬೇಕಾದ ಸ್ಥಿತಿ ಎದುರಾಗಿದೆ. ಮಾತ್ರವಲ್ಲದೇ ಶವ ಸಂಸ್ಕಾರಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸಹ ಅಡ್ಡಿಪಡಿಸುತ್ತಿದ್ದಾರೆ. ಈ ಸಂಬಂಧ ಬೆನ್ನೂರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿಲಾಗಿದ್ದು, 2018ರಲ್ಲಿ ಸ್ಥಳ ಪರಿಶೀಲನೆ ನಡೆಸಿ ಕಮರೂರು ಗ್ರಾಮದ ಸರ್ವೆ ನಂ.92ರಲ್ಲಿ 2ಎಕರೆ ಜಾಗವನ್ನು ಕಾಯ್ದಿರಿಸುವಂತೆ ಹಾಗೂ ಸ್ಮಶಾನ ಮಂಜೂರಾತಿಗೆ ಜಾಗ ನೀಡುವಂತೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಸೂಚಿಸಿ, ಅಂದಿನ ತಹಶೀಲ್ದಾರರು ಸ್ಮಶಾನ ಭೂಮಿ ಮಂಜೂರಾತಿ ಆದೇಶವನ್ನು ನೀಡುವಂತೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ ಸಹ, ಅಧಿಕಾರಿಗಳು ಭೂಮಿ ಮಂಜೂರಾತಿಗೆ ಹಿಂದೇಟು ಹಾಕುತ್ತಿರುವುದು ಖಂಡನೀಯ ಎಂದರು.
ಪ್ರತಿ ಗ್ರಾಮದಲ್ಲಿ ಸ್ಮಾಶನ ಭೂಮಿ ಮಂಜೂರು ಮಾಡುವಂತೆ ಸರ್ಕಾರದ ಆದೇಶವಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಅಲೆಮಾರಿಗಳು ಬದುಕು ಕಟ್ಟಿಕೊಳ್ಳಲು ಹೈರಾಣಾಗಿದ್ದು, ಮತ್ತೆ ಸಾವಿನಲ್ಲೂ ಮುಕ್ತಿ ಕಾಣಲು ಸ್ಮಶಾನವಿಲ್ಲದೆ ಪರದಾಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಮಶಾನ ಭೂಮಿ ಮಂಜೂರಾತಿ ಮಾಡಲು ಮುಂದಾಗದಿದ್ದರೆ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಮತ್ತೊಂದಡೆ ಜನವಸತಿ ಮತ್ತು ಶಾಲೆಗಳು ಇಲ್ಲದಿರುವ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಬೇಕು ಎಂದು ಆದೇಶವಿದ್ದರೂ, ಅಲೆಮಾರಿಗಳ ವಾಸ ಸ್ಥಳ ಮತ್ತು ಶಾಲೆಯ ಸಮೀಪದಲ್ಲಿಯೇ ಘಟಕ ಸ್ಥಾಪನೆ ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.
ಡಿಎಸ್‍ಎಸ್ ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್, ಜಿಲ್ಲಾ ಸಂಘಟನಾ ಸಂಚಾಲಕ ಬಂಗಾರಪ್ಪ ನಿಟ್ಟಕ್ಕಿ, ಎಎಪಿ ಪಕ್ಷದ ತಾಲೂಕು ಅಧ್ಯಕ್ಷ ದಾನಪ್ಪ ನಾಯ್ಕ್, ಪ್ರಮುಖರಾದ ಕೃಷ್ಣಪ್ಪ ಕೋಲಾರ್, ನಾಗರಾಜ್ ಹುರುಳಿಕೊಪ್ಪ, ಹರೀಶ್ ಚಿಟ್ಟೂರು, ಶ್ರೀಕಾಂತ್ ಚಿಕ್ಕಶಕುನ, ಮಂಜುನಾಥ್ ಕುಂಬತ್ತಿ, ಲಕ್ಷ್ಮೀ, ಮೀನಾಕ್ಷಮ್ಮ, ಸುಶೀಲಾ, ಶ್ರೀನಾಥ್, ದರ್ಶನ್, ರಾಮಪ್ಪ, ಮಂಜಪ್ಪ, ಶೋಭಾ, ರೇಣುಕಾ, ಗೌರಮ್ಮ, ಶಿವಮ್ಮ, ಜಗದೀಶ್, ಭಾಗ್ಯ, ಉಮೇಶ್, ಕೃಷ್ಣ, ಮಹೇಶ್, ಅಣ್ಣಪ್ಪ, ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post