ಬೇಸಿಗೆ ಸಮೀಪಿಸುತ್ತಿದ್ದು ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವುದು ಸೇರಿದಂತೆ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಗ್ರಾಪಂ ಅಧ್ಯಕ್ಷೆ ಕಲಾವತಿ ಮಂಜಪ್ಪ ತಿಳಿಸಿದರು.
ತಾಲೂಕಿನ ಭಾರಂಗಿ ಗ್ರಾಪಂ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಯೋಜನೆಗಳು ಜನರಿಗೆ ತಲುಪಿಸುವ ಕಾರ್ಯ ನಡೆಯಬೇಕಿದೆ. ವಿವಿಧ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಸಮಸ್ಯೆಗಳ ಪರಿಹಾರಕ್ಕೆ ಸಹಯವಾಗಲಿದೆ. ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮೊದಲ ಆದ್ಯತೆ ನೀಡಲಾಗುವುದು ಮತ್ತು ಗ್ರಾಮೀಣ ಜನರ ಆರೋಗ್ಯದ ಬಗ್ಗೆಯೂ ಗ್ರಾಪಂ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಕಾರ್ಯವನ್ನು ಚುರುಕುಗೊಳಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಗ್ರಾಪಂ ವ್ಯಾಪ್ತಿಯ 80 ವಿದ್ಯಾರ್ಥಿಗಳಿಗೆ ಎಸ್ಸಿ ಎಸ್ಟಿ ಅನುದಾನದಲ್ಲಿ ಡಿಕ್ಷನರಿ ವಿತರಿಸಲಾಯಿತು. ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯ ಉದ್ಯೋಗ ಖಾತರಿ ಯೋಜನೆ, ಚರಂಡಿ ವ್ಯವಸ್ಥೆ, ರಸ್ತೆ ಹಾಗೂ ವಿವಿಧ ವಿಷಯಗಳ ಕುರಿತು ಸದಸ್ಯರು ಚರ್ಚಿಸಿದರು. ಗ್ರಾಪಂ ಉಪಾಧ್ಯಕ್ಷೆ ಭಾಗ್ಯಬಸವರಾಜ, ಸದಸ್ಯರಾದ ಪ್ರಕಾಶ್ ಗುಡಿಗದ್ದಿ, ಮಂಜಪ್ಪ ಹೊನ್ನಾಳಿ, ಶಿವರಾಜ್ ಇಂಗುಗುಂಡಿ, ಚೈತ್ರಾ ಸುರೇಶ ಕುಮಾರ್, ಕೆಂಚಮ್ಮ ಲಿಂಗಮೂರ್ತಿ, ಸರೋಜಮ್ಮ ಬಸವರಾಜಗೌಡ, ಗಿರಿಜಮ್ಮ ಚನ್ನವೀರಪ್ಪ, ಪಿಡಿಒ ಪಿ. ಶಿವರಾಜ್ ಸೇರಿದಂತೆ ಸಿಬ್ಬಂದಿ ಇದ್ದರು.
Discussion about this post