ಕಲ್ಪ ಮೀಡಿಯಾ ಹೌಸ್ | ಸೊರಬ |
ಪ್ರತಿಯೊಬ್ಬ ಹುತಾತ್ಮ ಯೋಧ ನಮ್ಮ ಯುವಪೀಳಿಗೆಗೆ ಸ್ಫೂರ್ತಿ. ಅವರ ತ್ಯಾಗ, ಬಲಿದಾನ ಇವತ್ತಿಗೂ ನಮ್ಮ ದೇಶದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಮಾಜಿ ಸೈನಿಕ ದಶವಂತ್ ತಿಳಿಸಿದರು.
ಶುಕ್ರವಾರ ಸೊರಬ ಪಟ್ಟಣದಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಯುವ ಬ್ರಿಗೇಡ್ ವತಿಯಿಂದ “ಕಾರ್ಗಿಲ್ 25” ಎಂಬ ಶೀರ್ಷಿಕೆಯಡಿಯಲ್ಲಿ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ, ಮಾತನಾಡಿದರು.
1999ರ ಜುಲೈ 26ರ ಕಾರ್ಗಿಲ್ ವಿಜಯ್ ದಿವಸ್ ಅನ್ನು ನಾವು ಸಂಭ್ರಮಿಸುವ ಮೂಲಕ ತಾಯ್ನಾಡಿಗಾಗಿ ಪ್ರಾಣ ಅರ್ಪಿಸಿದ ಸಮವಸ್ತ್ರದಲ್ಲಿದ್ದ ವೀರಸೇನಾನಿಗಳಿಗೆ ನಮನ ಸಲ್ಲಿಸುತ್ತೇವೆ. ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಯುವ ಬ್ರಿಗೇಡ್ ಆಯೋಜಿಸಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.
ಸಮಾಜ ಸೇವಕ ಡಾ. ಜ್ಞಾನೇಶ ದಿಕ್ಸೂಚಿ ಭಾಷಣ ಮಾಡಿ, “ಭಾರತವು ಪಾಕಿಸ್ತಾನದೊಂದಿಗೇ ಸ್ನೇಹ ಬಯಸಿ ಒಪ್ಪಂದ ಮಾಡಿಕೊಂಡು ಆ ದೇಶದ ಮೇಲೆ ನಂಬಿಕೆ ಇಟ್ಟಿತ್ತು. ಆದರೆ ಪಾಕಿಸ್ತಾನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿತು. ಕಾರ್ಗಿಲ್ ಮತ್ತು ಡ್ರಾಸ್‌ನ ಅತ್ಯಂತ ಕಠಿಣ ಬೆಟ್ಟ ಪ್ರದೇಶಗಳಲ್ಲಿ ನಮ್ಮ ವೀರ ಯೋಧರು ದೇಶಕ್ಕಾಗಿ ಬಹುದೊಡ್ಡ ಬಲಿದಾನ ಮಾಡಿ ಮಹೋನ್ನತ ವಿಜಯ ತಂದುಕೊಟ್ಟರು. 530ಕ್ಕೂ ಹೆಚ್ಚು ಕೆಚ್ಚೆದೆಯ ಗಂಡುಗಲಿಗಳು ವೀರ ಮರಣ ಅಪ್ಪಿದ ಘಟನೆ ಮರೆಯಲು ಸಾಧ್ಯವಿಲ್ಲ. ಅಂಥ ಹುತಾತ್ಮರನ್ನು ನಾವು ನೆನೆಯಬೇಕು,” ಎಂದರು.
ತಾಲೂಕು ಸಂಚಾಲಕ ರಂಗನಾಥ ಮೊಗವೀರ, “ಯುವ ಬ್ರಿಗೇಡ್ ಕಳೆದ ಹತ್ತು ವರ್ಷಗಳಿಂದ ದೇಶ, ನೆಲ, ಜಲ, ನಾಡುನುಡಿ, ಸಂಸ್ಕೃತಿ, ಸಂಸ್ಕಾರ, ಹೀಗೆ ಸಮಾಜಪರ ಚಿಂತನೆಯುಳ್ಳ ಕಾರ್ಯಕ್ರಮಗಳನ್ನು ನಡೆಸಿ, ಸಾರ್ವಜನಿಕರಲ್ಲಿ ರಾಷ್ಟ್ರಭಕ್ತಿಯ ದೀಪವನ್ನು ಪ್ರಜ್ವಲಿಸುವ ಶ್ರೇಷ್ಟ ಕಾರ್ಯದಲ್ಲಿ ತೊಡಗಿದೆ,” ಎಂದು ಪ್ರಾಸ್ತಾವಿಕ ಮಾತನಾಡಿದರು.
ಮ್ಯಾರಾಥಾನ್ ಓಟವು ಶ್ರೀ ರಂಗನಾಥ ಸ್ವಾಮಿ ದೇವಾಲಯದಿಂದ ನಗರದ ಪ್ರಮುಖ ಬೀದಿಗಳಾದ ಆಂಜನೇಯ ಸ್ವಾಮಿ ದೇವಾಲಯ, ರೈತ ವೃತ್ತ, ಮೂಲಕ ರಾಜ್ ಕಲಾಕ್ಷ್ಷೇತ್ರ ವರೆಗೆ ನಡೆಯಿತು.
ಮಳೆಯನ್ನೂ ಲೆಕ್ಕಿಸದೆ ಮಕ್ಕಳು, ಯುವಕ-ಯುವತಿಯರು, ಹಿರಿಯರು ಮತ್ತು ವಯೋವೃದ್ಧರು ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಯುವಾಬ್ರಿಗೆಡ್, ಇತರೆ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕ ಪಾಲ್ಗೊಂಡಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post