ಸೊರಬ: ಬಡ ಬಗರ್‌ಹುಕುಂ ಸಾಗುವಳಿದಾರರಿಗೆ ಭೂವಡೆತನ ಕಲ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಸ್. ಬಂಗಾರಪ್ಪನವರು ತಂದಿದ್ದ ಜನಪರ ನೀತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಶಾಸಕ ಕುಮಾರ್‌ಬಂಗಾರಪ್ಪ ವರ್ತನೆ ಖಂಡನೀಯ ಎಂದು ಸೊರಬ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಹೆಚ್. ಗಣಪತಿ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿ, ರೈತರ ಹಿತವನ್ನು ಮನಗಂಡು ಮಾಜಿ ಶಾಸಕ ಮಧು ಬಂಗಾರಪ್ಪನವರು ತಮ್ಮ ಅಧಿಕಾರದ ಅವಧಿಯಲ್ಲಿ ಕಂದಾಯ ಸಚಿವರಾಗಿದ್ದ ಹಿರಿಯರಾದ ಕಾಗೋಡು ತಿಮ್ಮಪ್ಪನವರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಸಾವಿರಾರು ಬಗರ್‌ಹುಕುಂ ರೈತರಿಗೆ ಕ್ರಮಬದ್ಧವಾಗಿ ಜಮೀನು ಮಂಜೂರಾತಿಯ ಹಕ್ಕುಪತ್ರ ಕೊಡಿಸಿದ್ದರು. ಆದರೆ ಈಗಿನ ಶಾಸಕ ಕುಮಾರ್‌ಬಂಗಾರಪ್ಪ ಮಂಜೂರಾದ ಹಕ್ಕುಪತ್ರಗಳನ್ನು ವಜಾಗೊಳಿಸಿ ಸರ್ಕಾರದ ಸುಪರ್ದಿಗೆ ಭೂಮಿ ಮರಳಿ ಪಡೆಯುವಂತೆ ಅಧಿಕಾರಿಗಳಿಗೆ ತಾಕೀತು ಮಾಡುವ ಮೂಲಕ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿಯೇ ಸೊರಬ ತಾಲ್ಲೂಕು ಭೂ ಹೋರಾಟಕ್ಕೆ ಹೆಸರುವಾಸಿಯಾದ ತಾಲ್ಲೂಕಾಗಿದ್ದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಭೂ ಹೋರಾಟಕ್ಕೆ ಜಿಲ್ಲೆಯ ಅಂದಿನ ಎಲ್ಲಾ ಸಮಾಜವಾದಿ ಹೋರಾಟಗಾರರು ಪ್ರೋತ್ಸಾಹ ನೀಡಿದ್ದರ ಫಲವಾಗಿ ಬಗರ್‌ಹುಕುಂ ಕಾಯ್ದೆ ಜಾರಿಗೆ ಬಂದು ಸಾವಿರಾರು ಬಡ ಬಗರ್‌ಹುಕುಂ ರೈತರಿಗೆ ಅನುಕೂಲವಾಗುವಂತಾಗಿದೆ.
ಯಾವುದೇ ಅನುದಾನ ಬಿಡುಗಡೆಗೊಳಿಸಿಕೊಳ್ಳದೇ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ತಾಲ್ಲೂಕನ್ನು ಸಮಗ್ರ ನೀರಾವರಿ ಮಾಡುತ್ತೇನೆಂದು ಅಧಿಕಾರಿಗಳೊಂದಿಗೆ ಕೆರೆಯಂಗಳಕ್ಕೆ ಹೋಗಿ ಸರ್ವೆ ಮಾಡುವ ನಾಟಕವಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಹಿಂದೆ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ಮಾಡದ ಇವರು ಈಗೇನು ಅಭಿವೃದ್ಧಿ ಮಾಡಿಯಾರು ಎಂದು ಪ್ರಶ್ನಿಸಿದರು. ಮಧು ಬಂಗಾರಪ್ಪನವರು ತಮ್ಮ 5 ವರ್ಷದ ಅಧಿಕಾರಾವಧಿಯಲ್ಲಿ ತಾಲ್ಲೂಕಿನ ಎಲ್ಲಾ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಜನಪರ ಕಾರ್ಯಕ್ರಮಗಳನ್ನು ನೀಡಿದ್ದರು. ಈಗಿರುವ ಶಾಸಕ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಅಧಿಕಾರಿಗಳನ್ನು ಹೆದರಿಸಿ ಅಗೌರವ ತೋರುತ್ತಿರುವ ಅವರ ಮನಸ್ಥಿತಿ ಸರ್ವಾಧಿಕಾರಿ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಜಾತಿಯ ವಿಷ ಬೀಜ ಬಿತ್ತಿ ಅಧಿಕಾರ ಪಡೆದ ಶಾಸಕರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಬೆಳವಣಿಗೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಾ.ಪಂ. ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಸದಸ್ಯರಾದ ನಾಗರಾಜ್ ಚಂದ್ರಗುತ್ತಿ, ಬಂಗಾರಪ್ಪಗೌಡ, ಪಪಂ ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಮಂಚಿ ಹನುಮಂತಪ್ಪ, ಪ್ರಶಾಂತ್ ಮೇಸ್ತ್ರಿ, ಮೆಹಬೂಬಿ, ಎಪಿಎಂಸಿ ಉಪಾಧ್ಯಕ್ಷ ಜಯಶೀಲಗೌಡ, ಸದಸ್ಯ ಪ್ರಕಾಶ್ ಹಳೇಸೊರಬ, ಕೆ. ಅಜ್ಜಪ್ಪ, ವಕ್ತಾರ ಎಂ.ಡಿ. ಶೇಖರ್ ಮತ್ತಿತರಿದ್ದರು.
ಪಟ್ಟಣ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಾದ ನಮ್ಮ ಗಮನಕ್ಕೆ ತರದೆ ಪಪಂ ಮುಖ್ಯಾಧಿಕಾರಿಯನ್ನು ಮನೆಗೆ ಕರೆಸಿಕೊಂಡು ಸಾಮಾನ್ಯ ಸಭೆಯಲ್ಲಿ ನಡೆಯದ ಚರ್ಚೆಯನ್ನು ಸಭಾ ನಡವಳಿಕೆಯಲ್ಲಿ ಬರೆಯಿಸಿ ಪಟ್ಟಣದ ಮಧ್ಯಭಾಗದಲ್ಲಿದ್ದ ಸಾರ್ವಜನಿಕರಿಗೆ ಅನುಕೂಲವಾಗಿದ್ದ ವಾರದ ಸಂತೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿದ್ದೂ ಅಲ್ಲದೇ, ಇತ್ತೀಚಿನ ಕೆಲ ದಿನಗಳ ಹಿಂದೆ ಪಟ್ಟಣದಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಹಮ್ಮಿಕೊಂಡಿದ್ದ ಗುದ್ದಲಿ ಪೂಜೆಯಲ್ಲಿಯೂ ಪಟ್ಟಣ ಪಂಚಾಯಿತಿ ಅಧ್ಯಕ್ಷೆಯಾದ ನನ್ನನ್ನೂ ಸೇರಿದಂತೆ ಉಳಿದ ಸದಸ್ಯರ ಗಮನಕ್ಕೂ ತರದೇ ಸಮಾರಂಭ ನಡೆಸಿರುವ ಶಾಸಕ ಕುಮಾರ್ ಬಂಗಾರಪ್ಪ ಸರ್ವಾಧಿಕಾರಿ ಧೋರಣೆ ಖಂಡನೀಯ.
-ಬೀಬಿ ಝುಲೇಖಾ,
ಅಧ್ಯಕ್ಷೆ, ಪಪಂ, ಸೊರಬ
ವರದಿ: ಮಧುರಾಮ್, ಸೊರಬ
Discussion about this post