ಕಲ್ಪ ಮೀಡಿಯಾ ಹೌಸ್ | ಸೊರಬ |
ರಾಜ್ಯದ ಕಾನೂನು ಸೇವೆಗಳ ಪ್ರಾಧಿಕಾರ ಉಚಿತ ಕಾನೂನು ಸಲಹಾ ಸಮಿತಿಗಳ ಮೂಲಕ ರಾಜೀ ಸಂಧಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕಕ್ಷಿದಾರರು ದ್ವೇಷ, ಅಸೂಯೆಗಳನ್ನು ತ್ಯಜಿಸಿ ವಿಶಾಲ ಮನೋಭಾವನೆಯಿಂದ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಭಾಕರ ರಾವ್ ಹೇಳಿದರು.
ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ವತಿಯಿಂದ ಹಮ್ಮಿಕೊಂಡ ಕಾನೂನು ಸೇವಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನು ಸೇವೆ ಲಭ್ಯವಾಗಬೇಕು ಎನ್ನುವ ಮಹತ್ತರ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು, ತಮ್ಮ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ನ್ಯಾಯಾಲಯಗಳು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸಮಾನವಾದ ಕಾನೂನು ಹಾಗೂ ಹಕ್ಕುಗಳು, ಕರ್ತವ್ಯಗಳನ್ನು ರೂಪಿಸಿದ್ದು, ಅದರಂತೆ ನಡೆಯುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಒಬ್ಬರಿಗೊಬ್ಬರು ಗೌರವದಿಂದ ಕಾಣುವ ಜೊತೆಗೆ ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ವಕೀಲರಾದ ಎಂ. ನಾಗರಪ್ಪ, ಎಂ.ಆರ್. ಪಾಟೀಲ್, ಪಿ. ಸುಧಾಕರ ನಾಯ್ಕ್, ವೈ.ಜಿ. ಪುಟ್ಟಸ್ವಾಮಿ, ಕೆ.ಬಿ. ಬಸವರಾಜ ಕಾನೂನುಗಳ ಕುರಿತು ಅರಿವು ಮೂಡಿಸಿದರು.
ವಕೀಲರ ಸಂಘದ ಅಧ್ಯಕ್ಷ ಮಹೇಂದ್ರ ವಿ. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ನ್ಯಾಯಾಧೀಶರಾದ ಬಿ. ಕೇಶವಮೂರ್ತಿ, ಅಪರ ಸಿವಿಲ್ ನ್ಯಾಯಾಧೀಶರಾದ ಎಂ. ಮಂಜು, ಸಹಾಯಕ ಸರ್ಕಾರಿ ಅಭಿಯೋಜಕಿ ಸುಮಂಗಲಾ, ವಕೀಲರ ಸಂಘದ ಕಾರ್ಯದರ್ಶಿ ಸುರೇಶ್ ಕಲ್ಲಂಬಿ, ಕಾನೂನು ಸೇವಾ ಸಮಿತಿ ಸದಸ್ಯ ಜೆ.ಎಸ್. ಚಿದಾನಂದಗೌಡ, ವಕೀಲರಾದ ಸೈಯದ್ ಅಬ್ದುಲ್ ರೆಹಮಾನ್, ಗುರುನಾಥ ಎಂ. ಪಾಟೀಲ, ಸೈಯದ್ ಆಹ್ಮದ್, ಸಿ.ವೈ. ಅಶೋಕ್, ಓಂಕಾರಪ್ಪ, ಬಿ.ವಿ. ಚಂದ್ರಶೇಖರ, ಎಚ್.ಎಂ. ಪ್ರಶಾಂತ್, ಪರಶುರಾಮ, ಕೆ. ಪ್ರಶಾಂತ್, ರಾಮಪ್ಪ, ಸಂದೀಪ ಕುಮಾರ್, ಕೆ.ಬಿ. ಬಸವರಾಜ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post