ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕು ಕುಪ್ಪೆ ಗ್ರಾಮದಲ್ಲಿ ಸೀತಾದೇವಿ ಎನ್ನಲಾದ ವಿಗ್ರಹ, ಹುಲಿಯಪ್ಪ ವಿಗ್ರಹ ಹಾಗೂ ಕೆಲವು ದೇವಳದ ಬಿಡಿ ಭಾಗಗಳು ಸುಮಾರು 8-9ನೇ ಶತಮಾನದ ಲಕ್ಷಣ ಸೂಚಿಸುತ್ತಿದ್ದು ಇಲ್ಲಿನ ಅನೇಕ ವಿಗ್ರಹಗಳನ್ನು ಹಿಂದೆ ಧರ್ಮಸ್ಥಳದ ಮಂಜೂಷಕ್ಕೆ ರವಾನಿಸಿ ರಕ್ಷಿಸಲಾಗಿದೆ. ಪ್ರಸ್ತುತ ಇಲ್ಲಿ 12-14ನೇ ಶತಮಾನದ ಇನ್ನೂ ಕೆಲವು ಶಿಥಿಲಗೊಂಡ ದೇಗುಲಗಳ ರಕ್ಷಣೆಯಾಗಬೇಕಿದೆ ಎಂದು ತಾಲ್ಲೂಕು ಪಂಚಾಯ್ತಿ ಜೀವವೈವಿಧ್ಯ ನಿರ್ವಹಣ ಸಮಿತಿಯ ಸದಸ್ಯ, ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಇತಿಹಾಸ ಕ್ಷೇತ್ರ ಕುಪ್ಪೆ ಗ್ರಾಮದ ಪ್ರಾಚೀನ ಕಲ್ಯಾಣಿ ಜೀರ್ಣೋದ್ಧಾರಕ್ಕೆ ಇಒ ಕುಮಾರ್ ಹಾಗೂ ಹೆಗ್ಗೋಡು ಗ್ರಾಪಂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಇಲ್ಲಿದ್ದ ಧಟ್ಟ ಕಾನು ಈಗಾಗಲೇ ಹಾವಳಿಗೆ ತುತ್ತಾಗಿದ್ದು, ಉಳಿದಿರುವಷ್ಟನ್ನಾದರೂ ರಕ್ಷಿಸಬೇಕಿದೆ. ಕೇವಲ ಹತ್ತಾರು ವರ್ಷಗಳ ಹಿಂದೆ ಇಲ್ಲಿ ಅಪರೂಪದ ನಾಗರಬೆತ್ತಗಳು ಯಥೇಚ್ಛ ಇದ್ದವು, ಅಶೋಕ ವೃಕ್ಷ, ಕಾಡು ಪೇರಲ, ರಾಂಫಲ, ಸೀತಾಫಲ, ತಾರೆ, ಅಳಲೆ, ಹೊನ್ನೆ, ಮತ್ತಿಯಂತಹ ಅನೇಕ ಬೆಲೆ ಬಾಳುವ ಮರಗಳಿದ್ದವು ಎಂದು ನೆನಪಿಸಿಕೊಂಡ ಅವರು, ಈಗಿರುವಷ್ಟನ್ನೆ ರಕ್ಷಿಸದರೆ ಮತ್ತೆ ಅಳಿದಿರುವ ವೃಕ್ಷ ಸಮೂಹಗಳು ಬೆಳೆಯಬಹುದಾದ ಎಲ್ಲ ಪೋಷಕಾಂಶಗಳು ಇನ್ನೂ ಇಲ್ಲಿ ಜೀವಂತವಾಗಿವೆ ವನದ ಪುನಶ್ಚೇತನ, ಔಷಧಿ ಸಸ್ಯಗಳ ನೆಡುವಿಕೆ ಮುಂತಾದ ಪ್ರಕ್ರಿಯೆ ಕುರಿತಂತೆ ಅರಣ್ಯ ಇಲಾಖೆಯೊಂದಿಗೆ ಮಾತನಾಡುವುದಾಗಿ ತಿಳಿಸಿದರು.
Also read: ಕಾಳಿ ನದಿಯಲ್ಲಿ ಮೊಸಳೆ ಹೊತ್ತೊಯ್ದಿದ್ದ ವ್ಯಕ್ತಿಯ ಮೃತದೇಹ ಪತ್ತೆ!
ಈ ಆವರಣದಲ್ಲಿ ಸಭಾಭವನ ಹಾಗೂ ನವಗ್ರಹ, ರಾಶಿ ವನದ ನಿರ್ಮಾಣವಾಗಬೇಕು ಎಂದು ಛತ್ರಪತಿ ಪಾಟೀಲ್ ಮನವಿ ಮಾಡಿದರು.
ಇಲ್ಲಿನ ಪವಿತ್ರ ಕಲ್ಯಾಣಿಯ ಜೀರ್ಣೋದ್ಧಾರ ಕ್ರಿಯೆಗೆ ಎನ್‌ಆರ್‌ಇಜಿಯಲ್ಲಿ ಅವಕಾಶವಿದ್ದು, ಪ್ರಸಕ್ತ ಸಾಲಿನಲ್ಲಿ ಕಾಮಗಾರಿ ನಡೆಸುವಂತೆ ಹೆಗ್ಗೋಡು ಗ್ರಾಪಂ ಕಾರ್ಯದರ್ಶಿ ರವಿಯವರಿಗೆ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಸೂಚಿಸಿದರು.
ಇಲ್ಲಿನ ದೇಗುಲ ಧರ್ಮದರ್ಶಿ ರವೀಂದ್ರನಾಥ್ ಪಾಟೀಲ್, ದೇಗುಲ, ಗುಹಾ ಧ್ಯಾನಮಂದಿರ, ಪವಿತ್ರವನ ನಿರ್ಮಾಣ, ಕೊಳ, ಕಲ್ಯಾಣಿಗಳ ಅಭಿವೃದ್ಧಿ ಕುರಿತಂತೆ ಕಾರ್ಯಯೋಜನೆ ಸಿದ್ಧಪಡಿಸುವಂತೆ ಕೋರಿದರು.
ಯೋಜನೆ ಕುರಿತಂತೆ ತಾಪಂ ಅಭಿಯಂತರ ರಮೇಶ್ ಕ್ರಿಯಾಯೋಜನೆ ಸಿದ್ಧತೆ ನಡೆಸಿದರು. ಅನಿಲ್ ಸಿ. ಪಾಟೀಲ್ ಹಾಗೂ ಗ್ರಾಮದ ಅನೇಕರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post