ಕಲ್ಪ ಮೀಡಿಯಾ ಹೌಸ್ | ಸೊರಬ |
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆ ಸೋಮಾರಿಗಳಾಗಿಲ್ಲ. ಆದರೆ 10 ವರ್ಷ ಸುಳ್ಳು ಹೇಳಿಕೊಂಡು ಅಧಿಕಾರ ನಡೆಸಿದ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಮತದಾರರು ತಿರುಗಿಬಿದ್ದು ಮೋದಿಯನ್ನು ಸೋಲಿಸಲು ಬುದ್ಧಿವಂತರಾಗಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ #Madhu Bangarappa ಹೇಳಿದರು.
ಮಂಗಳವಾರ ಪಟ್ಟಣದ ಬಂಗಾರಧಾಮದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳು ಬಡವರು ಮತ್ತು ಮಧ್ಯಮವರ್ಗದವರ ಬದುಕು ಕಟ್ಟಿಕೊಟ್ಟಿದೆ. ಆದರೆ ಸೋಮಾರಿಯನ್ನಾಗಿ ಮಾಡಿಲ್ಲ. ಉಚಿತ ಯೋಜನೆಗಳಿಂದ ಸರ್ಕಾರದ ಖಜಾನೆ ಬರಿದಾಗಿದೆ ಎಂದು ಹೇಳಿಕೆ ನೀಡುವ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಅನ್ನದ ಬೆಲೆ ಏನು ಗೊತ್ತು ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಸೋಲುವ ಭೀತಿ ಎದುರಾಗಿರುವುದರಿಂದ ಮತದಾರರ ಗಮನ ಬೇರೆಡೆ ಸೆಳೆಯುವ ಯತ್ನ ನಡೆಸಿದಾರೆ. ಆದರೆ ಸರ್ಕಾರದ ಖಜಾನೆ ಭರ್ತಿಯಾಗಿದೆ. ಗ್ಯಾರಂಟಿ ಯೋಜನೆಗಳ ಶಕ್ತಿಯಿಂದಾಗಿ ಬಿಜೆಪಿ ಲೋಕಸಭಾ ಸ್ಥಾನದ ಸಂಖ್ಯೆಗಳಿಗೆ ಶೂನ್ಯ ಆವರಿಸಿದೆ. ಕಾಂಗ್ರೆಸ್ ಗ್ಯಾರಂಟಿಗಳು ಶಾಶ್ವತವಾಗಿ ಉಳಿಯುತ್ತವೆ. ಆದರೆ ಮೋದಿ ಗ್ಯಾರಂಟಿ ಚೆಂಬು ಹೊರತು ಅಕ್ಷಯ ಪಾತ್ರೆಯಲ್ಲ ಎಂದು ಮೂದಲಿಸಿದರು.
ತಂದೆಯವರು ನಿಮ್ಮ ಮಡಿಲಿಗೆ ಅರ್ಪಿಸಿದ ನನ್ನನ್ನು ಆಶೀರ್ವದಿಸಿ ಸಚಿವರನ್ನಾಗಿ ಮಾಡಿದ್ದೀರಿ. ಹಾಗೆಯೇ ನಾನು ಗೀತಕ್ಕಳನ್ನು ತಮ್ಮ ಮಡಿಲಿಗೆ ಹಾಕಿದ್ದೇನೆ. ಕಳೆದ ವಿಧಾನ ಸಭಾ ಚುನಾವಣೆಕ್ಕಿಂತ ಹೆಚ್ಚಿನ ಅಂತರದ ಮತಗಳು ಬರುವಂತೆ ನೋಡಿಕೊಳ್ಳಬೇಕು . ರಾಜ್ಯದಲ್ಲಿ ಅಕ್ಕ-ತಮ್ಮ ಮಾದರಿ ಅಭಿವೃದ್ಧಿ ಮಾಡುತ್ತೇವೆ. ಇದರ ಕಾರಣಕರ್ತರು ನೀವಾಗಬೇಕು ಎಂದರು.
ಬಿಜೆಪಿ ಅಭ್ಯರ್ಥಿ ನೀಡುವ ಕಪ್ಪ ಕಾಣಿಕೆಯಿಂದ ರೀ ಚಾರ್ಚ್ ಆಗಿರುವ ಮಾಜಿ ಬಿಜೆಪಿ ಶಾಸಕರುಗಳು ಗೀತಕ್ಕ ಮತ್ತು ಶಿವರಾಜಕುಮಾರ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಎಸ್. ಬಂಗಾರಪ್ಪ ಅವರಿಂದ ರಾಜಕೀಯ ಪಾಠ ಕಲಿತು ಅವರ ಆಶೀರ್ವಾದದಿಂದ ಗೆಲುವು ಸಾಧಿಸುತ್ತಿದ್ದ ಎಚ್. ಹಾಲಪ್ಪ ಅವರಿಗೆ ಗೀತಾ ಅವರ ಹೆಸರು ಹೇಳುವ ಯೋಗ್ಯತೆ ಇಲ್ಲ. ಕಳೆದ ಸಾಗರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಬಿಜೆಪಿಗೆ ಚಲಾವಣೆಗೊಂಡು ಮತಗಳು ಕಾಂಗ್ರೆಸ್’ಗೆ ಬರುವಂತಾಗಬೇಕು ಕಾರ್ಯಕರ್ತರು ಎಚ್ಚರಿಕೆಯಿಂದ ಪ್ರಚಾರ ನಡೆಸಬೇಕು ಎಂದು ಕರೆ ನೀಡಿದರು.
Also read: ಬಿಜೆಪಿಯಿಂದ ಹಿಂದೂ-ಮುಸ್ಲಿಂ ನಡುವೆ ದ್ವೇಷ | ನಟ ದುನಿಯಾ ವಿಜಯ್
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬರುವ ಬೈಂದೂರಿನಲ್ಲೂ ಶೇ.75 ಭಾಗದಷ್ಟು ಮತಗಳು ಕಾಂಗ್ರೆಸ್’ಗೆ ಚಲಾವಣೆಯಾಗುತ್ತವೆ. ಶಿವಮೊಗ್ಗ ನಗರದಲ್ಲಿ ಕಳೆದ 20 ವರ್ಷಗಳಿಂದ ಪ್ರಚಾರ ನಡೆಸದೇ 68 ಸಾವಿರ ಮತಗಳು ಬಂದಿವೆ. ಆದರೆ ಈ ಬಾರಿ ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದು, ಗ್ಯಾರಂಟಿ ಯೋಜನೆಗಳ ಋಣ ನಮ್ಮ ಮೇಲಿದೆ. ಈ ಬಾರಿಗೆ ಕಾಂಗ್ರೆಸ್ ಮತ ನೀಡುತ್ತೇವೆ ಎಂದಿದ್ದಾರೆ. ಆದ್ದರಿಂದ ಹೆಚ್ಚಿನ ಮತಗಳು ಚಲಾವಣೆಯಾಗುವ ನಿರೀಕ್ಷೆ ಇದೆ. ಜಿಲ್ಲೆಯ ಪ್ರತೀ ತಾಲೂಕಿನಲ್ಲಿಯೂ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಗೀತಾ ಶಿವರಾಜಕುಮಾರ್ ನೂರಕ್ಕೆ ನೂರು ಗೆಲ್ಲುವುದು ಗ್ಯಾರಂಟಿ ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಶಾಂತಗೇರಿ, ಮುಖಂಡರಾದ ಎಚ್. ಗಣಪತಿ, ಶಿವಮೂರ್ತಿ ತಾಳಗುಪ್ಪ, ಮಂಡಗಳಲೆ ಹುಚ್ಚಪ್ಪ, ಜಯಶೀಲಗೌಡ್ರು ಅಂಕರವಳ್ಳಿ, ಚಿಕ್ಕಸವಿ ನಾಗರಾಜ, ಎಂ.ಡಿ. ಶೇಖರ್, ರಶೀದ್ ಸಾಬ್, ಸುರೇಶ್ ಬಿಳವಾಣಿ, ಲೋಕೇಶ ಗಾಳಿಪುರ, ಫಯಾಜ್ ಅಹ್ಮದ್, ಶ್ರೀಕಾಂತ್, ಪ್ರಶಾಂತ್ ಮೇಸ್ತಿç, ನಿರಂಜನ, ಕೇಶವಮೂರ್ತಿ, ರೆಹಮಾನ್ ಮೊದಲಾದವರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post