ಕಲ್ಪ ಮೀಡಿಯಾ ಹೌಸ್ | ಸೊರಬ |
ಅವರ ರಾಜಕಾರಣದಲ್ಲಿರುವ ಗರ್ವವನ್ನು ಮುರಿಯಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ಅವರಿಗೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ #Kumar Bangarappa ಟಾಂಗ್ ನೀಡಿದರು.
ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಯಾವ ಗರ್ವದಿಂದ ರಾಜಕಾರಣ ಮಾಡುತ್ತಿದ್ದಾರೋ ಅಂತಹವರ ಗರ್ವವನ್ನು ಮುರಿಯಬೇಕಿದೆ. ವಿರೋಧಿಗಳನ್ನು ಹೀಯಾಳಿಸುವ ಅಗತ್ಯವಿಲ್ಲ. ರೈತ ತಾನು ಬೆಳೆದ ಬೆಳೆಯನ್ನು ತನ್ನ ಜಾತಿಯವನಿಗೆ ಮಾರಾಟ ಮಾಡುವುದಾದರೆ ಎಲ್ಲರಿಗೂ ಹಸಿವು ನೀಗಲು ಸಾಧ್ಯವಿಲ್ಲ. ಅದರಂತೆ ಜಾತಿ, ಮತ ಮರೆತು ದೇಶದ ರಕ್ಷಣೆಗಾಗಿ ಬಿಜೆಪಿಗೆ ಮತ ನೀಡಬೇಕು. ಸಂಸದರಾಗಿ ರಾಘವೇಂದ್ರ ಅವರನ್ನು ಗೆಲ್ಲಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರು ಹೊರಬೇಕು ಎಂದರು.
ಜನರಿಂದಲೇ ವಸೂಲಿ ಮಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿಗಳನ್ನು ನೀಡುತ್ತಿದೆ. ಅಲ್ಲದೇ, ಪ್ರಮುಖವಾಗಿ ಲೋಕಸಭಾ ಚುನಾವಣೆಯ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಪಥನವಾಗಲಿದೆ ಎಂದು ಭವಿಷ್ಯ ನುಡಿದರು.
Also read: ಜಿ.ಎಸ್ .ನಾಗರಾಜ ವೃತ್ತಿ ಬದುಕಿನ 50 ವರ್ಷದ ಸಾರ್ಥಕತೆ ಸಂಭ್ರಮ: ಅಭಿನಂದನಾ ಸಮಾರಂಭ
ರೈತರ ಜಮೀನನ್ನು ರಸ್ತೆಯ ಬದಿಯನ್ನೂ ಕೇಳುವ ಪರಿಸ್ಥಿತಿ ಬಂದೊದಗಿದೆ. ಮುಂದಿನ ಪೀಳಿಗೆಯನ್ನು ಉದ್ಧರಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ದೇಶದಲ್ಲಿಯೇ ಉತ್ತಮ ಕಾರ್ಯನಿರ್ವಹಿಸಿದ ಸಂಸದ ಎನ್ನುವ ಹೆಸರನ್ನು ಬಿ.ವೈ. ರಾಘವೇಂದ್ರ ಪಡೆದಿದ್ದಾರೆ. ಈ ಬಾರಿಯೂ ಶಿವಮೊಗ್ಗದಿಂದ ಅವರನ್ನು ಕೇಂದ್ರಕ್ಕೆ ಆರಿಸಿ ಕಳೆಸಬೇಕು ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ದೇಶದ ಅಭಿವೃದ್ಧಿಗೆ ದುಡಿಯುತ್ತಿರುವ ಮೋದಿಯವರು ಮತ್ತೆ ಪ್ರಧಾನಿಯಾಗಲು ನಾವೆಲ್ಲಾ ಕೆಲಸ ಮಾಡುತ್ತಿದ್ದೇವೆ. ಚುನಾವಣೆಗಾಗಿ ಮಾತ್ರ ಮಾತನಾಡುವ ವ್ಯಕ್ತಿ ನಾವಲ್ಲ, ಜನರ ಮಧ್ಯೆ ಇದ್ದು ಕ್ಷೇತ್ರದ ಅಭಿವೃದ್ಧಿ ಶ್ರಮಿಸಿದ್ದೇನೆ ದೇಶದ ರಕ್ಷಣೆ, ಜನಪರ ಯೋಜನೆಗಳ ಚಿಂತನೆ ನಡೆಸುವ ಪಕ್ಷ ನಮ್ಮದು ಎಂದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ದೇಶದಲ್ಲಿ ಈ ಬಾರಿಯೂ ಬಿಜೆಪಿಯೇ ಬರುತ್ತದೆ. ಮೋದಿಯೇ ಪ್ರಧಾನಿಯಾಗಲಿದ್ದಾರೆ. ಇದು ದೇಶದ ಚುನಾವಣೆ. ಬಿಜೆಪಿ ಗೆದ್ದರೆ ಭಾರತ ಗೆದ್ದಂತೆ. ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ರಾಘವೇಂದ್ರ ಅವರಿಗೆ ಒಳ್ಳೆಯ ಅಂತರದ ಮತ ಬರುವಂತೆ ನೋಡಿಕೊಳ್ಳ ಬೇಕು ಎಂದರು.
ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಭಾರತಿ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್, ಜ್ಞಾನೇಶ್, ಪಾಣಿ ರಾಜಪ್ಪ, ರಾಜು ತಲ್ಲೂರು, ನಿರಂಜನ್ ಕುಪ್ಪಗಡ್ಡೆ, ಎ.ಎಲ್. ಅರವಿಂದ್, ಎಂ.ಡಿ. ಉಮೇಶ್, ಗೀತಾ ಮಲ್ಲಿಕಾರ್ಜುನ, ಮಲ್ಲಿಕಾರ್ಜುನ, ಡಿ. ಶಿವಯೋಗಿ, ರಾಜಶೇಖರ್ ಗಾಳಿಪುರ, ವಿನಯ್ ಶೆರ್ವಿ ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















