ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಕೂಡಲೇ ಪರಿಹಾರ ಮಂಜೂರು ಮಾಡುವಂತೆ ಒತ್ತಾಯಿಸಿ ಜೆಡಿಎಸ್ ಪಕ್ಷದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನೇತೃತ್ವ ವಹಿಸಿದ್ದ ಜೆಡಿಎಸ್ ಹಿರಿಯ ಮುಖಂಡ ಬಾಸೂರು ಚಂದ್ರೇಗೌಡ ಮಾತನಾಡಿ, ತಾಲೂಕಿನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ, ಆಸ್ತಿ ಹಾನಿ ಉಂಟಾಗಿದೆ. ಇದರಿಂದ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ತಲುಪಿದೆ. ತಾಲೂಕಿನ ವರದಾ ನದಿ ತೀರಗಳ ಗ್ರಾಮಗಳಾದ ಬಾಡದಬೈಲು, ಕಡಸೂರು, ದ್ಯಾವಾಸ, ಪುರ, ಕಸಬಾ ಹೋಬಳಿಯ ಉರುಗನಹಳ್ಳಿ, ಕುಪ್ಪಗಡ್ಡೆ ಹೋಬಳಿಯ ಕೆರೆಹಳ್ಳಿ, ಆನವಟ್ಟಿ ಹೋಬಳಿಯ ಮೂಡಿದೊಡ್ಡಿಕೊಪ್ಪ, ನೆಲ್ಲಿಕೊಪ್ಪ, ಎಲಿವಾಳ, ತತ್ತೂರು, ಜಡೆ ಹೋಬಳಿಯ ಸಾಬಾರ ಹಾಗೂ ತಾಳಗುಪ್ಪ ಹೋಬಳಿಯಲ್ಲಿಯೂ ಅಪಾರ ಪ್ರಮಾಣದ ಹಾನಿಯಾಗಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ನೆರೆಗೆ ತುತ್ತಾಗಿದೆ. ಕೂಡಲೇ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಆನವಟ್ಟಿ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಶಿವಪ್ಪ ದ್ವಾರಹಳ್ಳಿ ಮಾತನಾಡಿ, ರೈತರು ಬೆಳೆದ ಜೋಳ, ಭತ್ತ, ಮೆಕ್ಕೆಜೋಳ, ಅಡಿಕೆ, ಅನಾನಸ್, ಶುಂಠಿ, ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿದೆ. ಇದರಿಂದ ರೈತಾಪಿ ವರ್ಗ ಸಂಕಷ್ಟಕ್ಕೀಡಾಗಿದೆ. ತಲ್ಲೂರು ಗ್ರಾಮದ ಲಬ್ಬಲಗೆರೆ ಕೆರೆಯ ಹಿನ್ನೀರಿನಿಂದಾಗಿ ಜಮೀನುಗಳು ಜಲಾವೃತವಾಗಿದೆ. ಹಲವಾರು ಕೆರೆಗಳ ಏರಿ ಒಡೆದು ಜನ ಸಂಚಾರಕ್ಕೆ ರಸ್ತೆ ಸಂಪರ್ಕ ಇಲ್ಲದಂತಾಗಿದೆ. ಅನೇಕ ಮನೆಗಳ ಮೇಲೆ ಮರಗಳು ಬಿದ್ದು ಹಾನಿಯಾಗಿದೆ. ಸರ್ಕಾರ ಸಂತ್ರಸ್ಥರಿಗೆ ಪರಿಹಾರ ನೀಡಬೇಕು. ಹರೀಶಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದ್ಯಾವಾಸ ಗ್ರಾಮದಲ್ಲಿ ಸುಮಾರು 25 ಮನೆಗಳು ನಡುಗಡ್ಡೆಯಲ್ಲಿ ಸಿಲುಕಿದ್ದು, ಗ್ರಾಮಕ್ಕೆ ರಸ್ತೆ ಮತ್ತು ಸೇತುವೆ ವ್ಯವಸ್ಥೆ ಕಲ್ಪಿಸಬೇಕು. ತಾಲೂಕಿನ ಜನತೆಯ ಹಿತದೃಷ್ಟಿಯಿಂದ ಕೂಡಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದರು.
Also read: ರಾಗಿಗುಡ್ಡದಲ್ಲಿ ನಿರ್ಮಾಣವಾಗಲಿದೆ 74 ಅಡಿ ಎತ್ತರದ ಶಿವಲಿಂಗ! ಯೋಜನೆಯ ಮಾಹಿತಿ ಇಲ್ಲಿದೆ
ಪ್ರತಿಭಟನೆಯಲ್ಲಿ ಜೆಡಿಎಸ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ತತ್ತೂರು, ಟೌನ್ ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷ ಆರ್. ಕುಮಾರ್, ರೈತ ಮುಖಂಡ ಹುಚ್ಚಪ್ಪ ಚಿಮಣೂರು, ಪ್ರಮುಖರಾದ ಇ.ಎಚ್. ಮಂಜುನಾಥ್, ತುಳಜಪ್ಪ, ಸುರೇಶ್ ವೆಂಕಟಾಪುರ, ವಿನಯ್ ಕೆರೆಹಳ್ಳಿ, ಶ್ರೀಧರ್ ಭಟ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post