ಕಲ್ಪ ಮೀಡಿಯಾ ಹೌಸ್ | ಸೊರಬ |
ಈ ಹಿಂದೆ ಜಿನಕ್ಷೇತ್ರವಾಗಿದ್ದ ತಾಲ್ಲೂಕಿನಲ್ಲಿ ಈಗ ಬೆರಳೆಣಿಕೆ ಜಿನ ದೇಗುಲಗಳು ಇವೆ. ಅಪರೂಪಕ್ಕೆ ಜೈನಮಠವೂ ಇದೆ. ಜೈನ ಗುರುಗಳೂ ಇದ್ದಾರೆ. ಆದರೆ, ಈ ಜೈನಮಠದ ಸ್ಥಿತಿ ತೀರಾ ಶೋಚನೀಯವಾಗಿರುವುದನ್ನು ಗಮನಿಸಿದರೆ ಇದೇನಾ ಸರ್ವಧರ್ಮ ಸಮನ್ವಯತೆ ಎಂಬ ಪ್ರಶ್ನೆ ಮೂಡುತ್ತದೆ ಎಂದು ಜೆಡಿಎಸ್ ಬ್ಲಾಕ್ ಅಧ್ಯಕ್ಷ ಬಾಸೂರು ಚಂದ್ರೇಗೌಡ ಬೇಸರ ವ್ಯಕ್ತಪಡಿಸಿದರು.
ತಾಲೂಕು ಲಕ್ಕವಳ್ಳಿ ಜೈನಮಠಕ್ಕೆ ಭೇಟಿ ನೀಡಿ ವರದಾಪ್ರವಾಹದಿಂದ ನಷ್ಟಗೊಂಡ ಗುಡಿ, ತೋಟಗಳನ್ನು ವೀಕ್ಷಿಸಿದರು.
ಜೈನಮಠದಿಂದ ಬಹು ಹಿಂದಿನಿಂದಲೂ ನೆರೆ ಹಾವಳಿ ನಿಯಂತ್ರಿಸಲು ತಡೆಗೋಡೆ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಿದ್ದಾರಾದರೂ ಇದುವರೆವಿಗೂ ಸರ್ಕಾರ ಇವರ ಮಾತಿಗೆ ಮನ್ನಣೆ ನೀಡಿಲ್ಲ. ಇಲ್ಲಿ ಗುರುಕುಲವೂ ಇದ್ದು, ಜ್ಞಾನಾರ್ಜನೆಗೆ ಪೂರಕವಾಗಿರುವ ಅತಿಮುಖ್ಯ ಸಂಸ್ಥೆಯೊಂದು ಆತಂಕಕ್ಕೊಳಗಾಗಿದೆ. ತುರ್ತು ನೆರೆಹಾವಳಿ ನಿಯಂತ್ರಿಸುವ ಕಾರ್ಯವಾಗಬೇಕಿದೆ ಎಂದರು.
ರೈತ ಪ್ರಮುಖ ಎಲಿವಾಳದ ಸೋಮಶೇಖರಯ್ಯ ಸುತ್ತೂರುಮಠ, ಇಡೀ ರಾಜ್ಯದಲ್ಲಿ ಎಲ್ಲ ಮಠಮಾನ್ಯಗಳು ಅಭಿವೃದ್ಧಿಯಾಗುತ್ತಿದ್ದು ಲಕ್ಕವಳ್ಳಿಯ ಈ ಜೈನಮಠ ನಿರ್ಲಕ್ಷಕ್ಕೊಳಗಾಗಿರುವುದು ಖೇದಕರ ಸಂಗತಿ. ಕೂಡಲೇ ಸರ್ಕಾರ ಇದರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಲಕ್ಕವಳ್ಳಿ ಜೈನಮಠದ ಶ್ರೀಗಳು, ವಕೀಲ ಶಿವಪ್ಪ, ಲಕ್ಕವಳ್ಳಿ ರಾಜೇಂದ್ರಯ್ಯ ಇನ್ನೂ ಅನೇಕರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post